ADVERTISEMENT

ಬಳಕೆಯಾಗದ ಖಾತ್ರಿ ಹಣ: ವಾಪಸ್‌ಗೆ ಸೂಚನೆ!

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 5:35 IST
Last Updated 17 ಮಾರ್ಚ್ 2012, 5:35 IST

ದಾವಣಗೆರೆ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯ್ತಿಗಳು ಅನುದಾನ ಸದ್ಬಳಕೆ ಮಾಡಿಕೊಂಡಿಲ್ಲ. ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾಪಸ್ ಕೊಡುವಂತೆ ತಾಲ್ಲೂಕು ಪಂಚಾಯ್ತಿಗಳ ಇಒಗಳಿಗೆ ಸೂಚನೆ ನೀಡಲಾಗಿದೆ!
ಜಿಲ್ಲಾ ಪಂಚಾಯ್ತಿಯಲ್ಲಿ ಶುಕ್ರವಾರ ಜಿ.ಪಂ. ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿಇಒ ಗುತ್ತಿ ಜಂಬುನಾಥ್ ಈ ವಿಷಯ ತಿಳಿಸಿದರು.


ಜಿಲ್ಲೆಯಲ್ಲಿ 2011-12ನೇ ಸಾಲಿನಲ್ಲಿ ಹಲವು ಪಂಚಾಯ್ತಿಗಳು ಹಣ ಸಮರ್ಪಕವಾಗಿ ಬಳಸದೆ ಇರುವುದು ಗಂಭೀರ ವಿಷಯವಾಗಿದೆ. ಖರ್ಚಾಗದೆ ಉಳಿದಿರುವ ಹಣವನ್ನು ವಾಪಸ್ ಕೊಡುವಂತೆ ಪತ್ರ ಬರೆದು ಕೇಳಲಾಗಿದೆ. ಆದರೆ, ಯಾರೊಬ್ಬರೂ ಕೊಟ್ಟಿಲ್ಲ. ಬಾಕಿ ಇರುವುದನ್ನು ಕೊಟ್ಟರೆ ಇತರೆ ಕಡೆಗಳಲ್ಲಿ ಬಳಸಲು ಸಾಧ್ಯವಾಗುತ್ತದೆ. ಆಗ, ಪಂಚಾಯ್ತಿಗಳಿಗೆ ಮುಂದಿನ ಸಾಲಿನ ಹಣ ನೀಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಮುಂದಿನ ಸಾಲಿಗೆ ಸಮಸ್ಯೆಯಾಗುತ್ತದೆ ಎಂದು ಇಒಗಳಿಗೆ ಎಚ್ಚರಿಕೆ ನೀಡಿದರು.

ಜಗಳೂರು ತಾಲ್ಲೂಕಿನ ನಿಚ್ಚವ್ವನಹಳ್ಳಿ ಪಂಚಾಯ್ತಿಯಲ್ಲಿ ್ಙ  23 ಲಕ್ಷ, ಅರಸೀಕೆರೆಯಲ್ಲಿ ್ಙ 21 ಲಕ್ಷ... ಹೀಗೆ ಹಲವು ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ಉಳಿದಿದೆ. ಹಣ ಸಮರ್ಪಕವಾಗಿ ಖರ್ಚಾಗಬೇಕು. ಇಲ್ಲವಾದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಜವಾಬ್ದಾರಿ ಆಗಬೇಕಾಗುತ್ತದೆ. ಬಾಕಿ ಹಣವನ್ನು ನಾಳೆಯೇ ವಾಪಸ್ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್‌ನವರಿಗೆ ಹೇಳಿ, ಸ್ಥಗಿತಗೊಳಿಸಬೇಕಾಗುತ್ತದೆ. ಬೇರೆ ಪಂಚಾಯ್ತಿಗಳಿಂದ ಅನುದಾನದ ಬೇಡಿಕೆ ಇದೆ. ಆದರೆ, ಕೆಲವರು ಖರ್ಚು ಮಾಡದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಖಾತ್ರಿ ಯೋಜನೆಯಡಿ, ಕುಂದೂರು, ರಾಂಪುರ, ಗುಡ್ಡೆಹಳ್ಳಿ, ಸವಳಂಗದಲ್ಲಿ ಕಾಮಗಾರಿಗಳ ಬೇಡಿಕೆಯೇ ಬಂದಿಲ್ಲ. ಇದು ಹೆಚ್ಚಿನ ಹಾನಿಯಾಗುವ ಬೆಳವಣಿಗೆ. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿ.ಪಂ. ಉಪ ಕಾರ್ಯದರ್ಶಿ ಜಿ.ಎಸ್. ಷಡಾಕ್ಷರಪ್ಪ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಮುಂದಿನ ಸಾಲಿನಲ್ಲಿ ್ಙ 127 ಕೋಟಿ ಅನುದಾನ ದೊರೆಯಲಿದೆ. ಪ್ರತಿ ಬಾರಿಯೂ ಚರಂಡಿ, ರಸ್ತೆ ಮೊದಲಾದ ಕಾಮಗಾರಿ ಕೈಗೊಳ್ಳುವುದಕ್ಕಿಂತ ಸಸಿಗಳನ್ನು ನೆಡುವುದು, ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. 2009ನೇ ಸಾಲಿನ ಬಾಕಿಗೆ ಸಂಬಂಧಿಸಿದಂತೆ ಮೂರನೇ ಸಂಸ್ಥೆಯಿಂದ ತಪಾಸಣೆ ಕಾರ್ಯ ನಡೆಯುತ್ತಿದೆ. ಹೀಗಿರುಗಾಗ, ಆ ಸಾಲಿನ ಅನುದಾನ ಕೊಟ್ಟರೆ ಮುಂದಿನ ಪರಿಣಾಮವನ್ನು ಅಧಿಕಾರಿಗಳು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಏ. 5 ಮತ್ತು 6ರಂದು ಏಡ್ಸ್ ಅರಿವು ಮೂಡಿಸುವ ರೇಲ್ವೆ ಇಲಾಖೆ ವತಿಯಿಂದ `ರೆಡ್ ರಿಬ್ಬನ್ ಎಕ್ಸ್‌ಪ್ರೆಸ್~ ರೈಲುಗಾಡಿಯು ಹರಿಹರ ನಿಲ್ದಾಣದಲ್ಲಿ ತಂಗಲಿದೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ರೈಲು ಸಂಚರಿಸುತ್ತಿದೆ ಎಂದು ಡಿಎಚ್‌ಒ ಡಾ.ಸುಮಿತ್ರಾದೇವಿ ತಿಳಿಸಿದರು.

ಕಳೆದ ಸಭೆಯ ನಿರ್ಣಯದಂತೆ 30 ಆರೋಗ್ಯ ಸಹಾಯಕಿಯರನ್ನು ನೇಮಕ ಮಾಡಿಕೊಳ್ಳಲಾಗಿದೆಯೇ ಎಂಬ ಜಿ.ಪಂ. ಅಧ್ಯಕ್ಷ ವೀರೇಶ್ ಹನಗವಾಡಿ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಮಟ್ಟದಿಂದ ಇದಕ್ಕೆ ಅನುಮತಿಬೇಕು. ಇದಕ್ಕಾಗಿ ಪತ್ರ ಬರೆಯಲಾಗಿದೆ ಎಂದರು.ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಾಗದಂತೆ ನಿಗಾ ವಹಿಸಬೇಕು. ನಕಲಿ ವೈದ್ಯರ ಹಾವಳಿ ತಡೆಯಬೇಕು. ಆಯುರ್ವೇದ ವೈದ್ಯರು ಅಲೋಪತಿ ಔಷಧಿ ಶಿಫಾರಸು ಮಾಡುವುದನ್ನು ತಡೆಯಬೇಕು ಎಂದು ಅಧಿಕಾರಿಗೆ ಸೂಚಿಸಲಾಯಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.