ADVERTISEMENT

ಬಾಬು ಜಗಜೀವನ್‌ರಾಂ ಭವನಕ್ಕೆ 2ಕೋಟಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 7:00 IST
Last Updated 22 ಜನವರಿ 2011, 7:00 IST

ಹೊನ್ನಾಳಿ: ಪಟ್ಟಣದಲ್ಲಿ ಬಾಬು ಜಗಜೀವನ್‌ರಾಂ ಭವನ ನಿರ್ಮಿಸಲು ರೂ 2ಕೋಟಿ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಭರವಸೆ ನೀಡಿದರು.ಇಲ್ಲಿನ ಬಾಲರಾಜ್ ಘಾಟ್‌ನಲ್ಲಿ ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರ ವಿಮುಕ್ತಿಗಾಗಿ ಹೋರಾಡಿದ ಪ್ರಾತಃಸ್ಮರಣೀಯ ಡಾ.ಅಂಬೇಡ್ಕರ್. ಈ ಭವನ ದೀನದಲಿತರ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕು. ಇಲ್ಲಿ ಅಂಬೇಡ್ಕರ್ ತತ್ವ-ಆಶಯಗಳು ಸಾಕಾರಗೊಳ್ಳುವಂತಾಗಬೇಕು. ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ದಲಿತರ ಅಭಿವೃದ್ಧಿಗೆ ಶ್ರಮಿಸಿರಲಿಲ್ಲ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ದಲಿತರ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದೆ. ಸಮಾಜ ಕಲ್ಯಾಣ ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಭೂರಹಿತ ದಲಿತರ ವ್ಯವಸಾಯಕ್ಕೆ ಭೂಮಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಈ ಕಾರ್ಯ ಕೈಗೊಳ್ಳದೇ ಇರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನಾರಾಯಣ ಸ್ವಾಮಿ ಎಚ್ಚರಿಸಿದರು.

ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಿಜೆಪಿ ಸರ್ಕಾರ ದಲಿತ ವಿರೋಧಿ ಎಂದು ಹುಯಿಲೆಬ್ಬಿಸಿದ್ದ ವಿಪಕ್ಷಗಳು, ದಲಿತರ ಕಲ್ಯಾಣಕ್ಕೆ ಬಿಜೆಪಿ ಶ್ರಮಿಸುತ್ತಿರುವುದನ್ನು ಕಂಡು ದಂಗಾಗಿದ್ದಾರೆ. ಶೋಷಿತ ಜನಾಂಗಕ್ಕೆ ಸಹಾಯಹಸ್ತ ಚಾಚಲು ಸಮಾಜ ಕಲ್ಯಾಣ ಸಚಿವರು ಉತ್ಸುಕರಾಗಿದ್ದಾರೆ. ಹೊನ್ನಾಳಿಯಲ್ಲಿ ಜ. 29ಮತ್ತು 30ರಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ಕೋರಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು. ಯಶವಂತ್ ಮತ್ತು ಸಂಗಡಿಗರು ಅಂಬೇಡ್ಕರ್ ಗೀತೆ ಹಾಡಿದರು. ಪ.ಪಂ. ಸದಸ್ಯ ಎನ್. ಜಯರಾವ್ ಸ್ವಾಗತಿಸಿದರು. ಅಧ್ಯಕ್ಷೆ ಎಚ್.ಬಿ. ಲತಾ ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ವೀರಭದ್ರಯ್ಯ ಮತ್ತು ಪರಮೇಶ್ವರ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪ ವಿಭಾಗಾಧಿಕಾರಿ ಕೆ.ಎಂ. ಜಾನಕಿ, ತಹಶೀಲ್ದಾರ್ ಶೈಲಜಾ ಪ್ರಿಯದರ್ಶಿನಿ ಮತ್ತು ಪ.ಪಂ. ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.