ADVERTISEMENT

ಬಾರದ ಮಳೆ; ಬಸವಳಿದ ಅನ್ನದಾತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 10:25 IST
Last Updated 20 ಜುಲೈ 2012, 10:25 IST

ಸಂತೇಬೆನ್ನೂರು: ಜಿಲ್ಲೆಯಾದ್ಯಂತ ಈವರೆಗೆ ಕನಿಷ್ಟ ಬಿತ್ತನೆಯಾಗಿದೆ. ಉಳಿದಂತೆ ಬಾರದ ಮಳೆಗಾಗಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ದಾಸ್ತಾನು ಮಾಡಿಕೊಂಡು ನಿತ್ಯ ರೈತರು ಮಳೆಗಾಗಿ ಹಾತೊರೆಯುತ್ತಿದ್ದಾರೆ.

ಸುಮಾರು 8 ಸಾವಿರ ಹೆಕ್ಟೇರ್ ಮಳೆಯಾಧಾರಿತ ಕೃಷಿ ಭೂಮಿಯಲ್ಲಿ 6,640 ಹೆಕ್ಟೇರ್ ಮೆಕ್ಕೆಜೋಳ ಮುಖ್ಯ ಬೆಳೆಯಾಗಿದೆ. ಕೃಷಿ ಇಲಾಖೆಯ ಮಾಹಿತಿಯಂತೆ ಜುಲೈ 15 ಅದರ ಬಿತ್ತನೆ ಪೂರೈಸಲು ಕೊನೆಯ ದಿನ. ಆನಂತರ ಬಿತ್ತನೆ ಕೈಗೊಂಡರೆ ಪೂರ್ಣ ಪ್ರಮಾಣದ ಫಸಲು ನಿರೀಕ್ಷೆ ಹುಸಿಯಾಗಲಿದೆ.

ಉಳಿದಂತೆ ರಾಗಿ-1,000, ಶೇಂಗಾ-150, ಹೆಸರು-100, ಅವರೆ-100, ಅಲಸಂದೆ-50, ಹುರಳಿ-20, ಸೂರ್ಯಕಾಂತಿ-150 ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ.

ತಿಂಗಳಾಂತ್ಯದಲ್ಲಿ ಮಳೆ ಬಾರದೆ ಹೋದರೆ ಕಡಿಮೆ ನೀರು ಬಯಸುವ ಬೆಳೆಗಳಿಗೆ ಮೊರೆ ಹೋಗುವುದು  ಸೂಕ್ತ. ಈಗಾಗಲೇ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿಕೊಂಡ ರೈತರು ಆತಂಕಕ್ಕೊಳಗಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹಮದ್ ರಫಿ.

ಮಳೆ ಕೊರತೆಯಿಂದಾಗಿ ಕಳೆದ 15 ದಿನಗಳ ಹಿಂದೆ ಬಿತ್ತಿದೆ ಪಾಪ್‌ಕಾರ್ನ್ ಜೋಳಕ್ಕೆ ಸುಳಿರೋಗ ಕಂಡುಬಂದಿದೆ. ಕಾರ್ಬೋಫಿರಾನ್ ಹರಳುಗಳನ್ನು ಪ್ರತಿ ಸಸಿ ಮೇಲೆ ಎರಡರಿಂದ ಮೂರು ಹರಳು ಉದುರಿಸುವ ಮೂಲಕ ಅಥವಾ ಮೊನೊಕ್ರೊಟೋಫಾಸ್ ಸಿಂಪಡಿಸಿ ತಡೆಗಟ್ಟಬೇಕು.

ಬತ್ತಕ್ಕೆ ಕಾಂಡಕೊರಕ ಹುಳ: ನೀರಾವರಿ ಪ್ರದೇಶದ ಮಳೆಗಾಲದ ಬತ್ತದ ಬೆಳೆಗಾಗಿ ಸಸಿಮಡಿ ಮಾಡಲಾಗಿದೆ. ಹಲವೆಡೆ ಕಾಂಡಕೊರಕ ಹುಳಗಳ ಬಾಧೆ ಕಾಡುತ್ತಿದೆ. ಪ್ರೊಫೇನೋಫಾಸ್ ಔಷಧಿಯನ್ನು 1 ಲೀಟರ್ ನೀರಿಗೆ 2 ಎಂ.ಎಲ್. ಬೆರೆಸಿ ಸಿಂಪಡಿಸಿ ತಡೆಗಟ್ಟಬೇಕು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಮಳೆಯಿಲ್ಲದೇ ಬಿತ್ತನೆ ಮಾಡಲಾಗಿಲ್ಲವಾದ್ದರಿಂದ ಬರದ ಕರಿ ನೆರಳು ಆವರಿಸಿದೆ. ಹಾಗಾಗಿ, ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತರಾದ ತಿಪ್ಪೇಶ್, ನಾಗರಾಜ್, ಚನ್ನಬಸಪ್ಪ ಆಗ್ರಹಿಸಿದ್ದಾರೆ.
 

          
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT