ಜಗಳೂರು: ಬಿಸಿಯೂಟದಲ್ಲಿ ಹುಳುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಿಳಿಚೋಡು ಗ್ರಾಮದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿನಗಳಿಂದ ಮಧ್ಯಾಹ್ನದ ಬಿಸಿಯೂಟ  ಸ್ಥಗಿತಗೊಳಿಸಲಾಗಿದೆ.
ಗ್ರಾಮದ ಸಂಯುಕ್ತ ಕಾಲೇಜಿನ ಪ್ರೌಢಶಾಲೆಯಲ್ಲಿ ಎರಡು ದಿನಗಳ ಹಿಂದೆ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುತ್ತಿದ್ದ ಸಮಯದಲ್ಲಿ ಹಲವು ವಿದ್ಯಾರ್ಥಿಗಳ ತಟ್ಟೆಗಳಲ್ಲಿ  ಹುಳುಗಳು ಪತ್ತೆಯಾಗಿವೆ.  ಹೊರಗಿನ ಸಂಸ್ಥೆಯೊಂದರಿಂದ ಶಾಲೆಗೆ ಪ್ರತಿದಿನ ಬಿಸಿಯೂಟ ಪೂರೈಕೆಯಾಗುತ್ತಿದೆ. ಊಟದಲ್ಲಿ ಹುಳುಗಳು ಕಂಡುಬಂದಿದ್ದರಿಂದ ಶಾಲೆಯಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸುತ್ತಿದ್ದಾರೆ. ಆಗಾಗ್ಗೆ ಈ ಸಮಸ್ಯೆ ಎದುರಾಗುತ್ತಿದ್ದು, ವಿದ್ಯಾರ್ಥಿಗಳ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ಧನ್ಯಕುಮಾರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
 ಗ್ರಾಮದ ಪ್ರೌಢಶಾಲೆಯಲ್ಲಿ 186 ವಿದ್ಯಾರ್ಥಿಗಳಿದ್ದು,  ಶಾಲೆಯಲ್ಲಿ ಎರಡು ದಿನಗಳಿಂದ ಬಿಸಿಯೂಟ ಇಲ್ಲದೆ ಬಡ ಮಕ್ಕಳಿಗೆ ಸಮಸ್ಯೆಯಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್ ಅವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗ್ರಾ.ಪಂ. ಸದಸ್ಯರಾದ ಹರ್ಷವರ್ಧನ್, ವೀರೇಶ್, ಅಂಜಿನಪ್ಪ, ಮಾಜಿ ಅಧ್ಯಕ್ಷ ಗಿರೀಶ್ ಒಡೆಯರ್  ಅವರು  ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.