ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಸರ್ಕಾರ ಆಹಾರ ಧಾನ್ಯ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದು, ಖರೀದಿ ಕೇಂದ್ರ ತೆರೆಯಲು ಸಂಬಂಧಿಸಿದ ಏಜೆನ್ಸಿಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 2012-13ನೇ ಸಾಲಿನ ಬೆಂಬಲ ಬೆಲೆ ಯೋಜನೆ ಕುರಿತು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ, ಎಪಿಎಂಸಿ ಹಾಗೂ ಸಂಬಂಧಿಸಿದ ಇತರ ಅಧಿಕಾರಿಗಳು ತಂಡದ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು.
ಯಾವುದೇ ಸಂದರ್ಭದಲ್ಲಿ ಏಜೆನ್ಸಿಗಳು ಖರೀದಿ ಕೇಂದ್ರ ತೆರೆಯಲು ಸನ್ನದ್ಧವಾಗಿರಬೇಕು. ಈ ನಿಟ್ಟಿನಲ್ಲಿ ರೈತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಅಗತ್ಯ ಬಿದ್ದಲ್ಲಿ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಮಾತನಾಡಿ, 2011-12ನೇ ಸಾಲಿನಲ್ಲಿ ಖರೀದಿ ಏಜೆನ್ಸಿಗಳಲ್ಲಿ ಹಲವು ನ್ಯೂನತೆ ಉಂಟಾಗಿದ್ದವು. ಸರಿಯಾದ ಕಾರ್ಯಯೋಜನೆ ತಯಾರಿಸಿರಲಿಲ್ಲ. ಅಗತ್ಯ ಸಿಬ್ಬಂದಿ ಹಾಗೂ ಉಗ್ರಾಣಗಳ ಕೊರತೆ ಇತ್ತು.
ಗುತ್ತಿಗೆದಾರರು ಸಕಾಲದಲ್ಲಿ ಲಾರಿ ಒದಗಿಸಿರಲಿಲ್ಲ. ಮುಖ್ಯವಾಗಿ ಖರೀದಿ ಕೇಂದ್ರಗಳಲ್ಲಿ ತೂಕದ ಯಂತ್ರಗಳೇ ಇರಲಿಲ್ಲ. ರೈತರಿಗೆ ಏಜೆನ್ಸಿಗಳು ಕಿರುಕುಳ ನೀಡಿದವಲ್ಲದೇ, ಖರೀದಿಸಿದ ಬೆಳೆಗೆ ಸಕಾಲದಲ್ಲಿ ಹಣವನ್ನೂ ಪಾವತಿ ಮಾಡಿರಲಿಲ್ಲ. ಮಧ್ಯವರ್ತಿಗಳ ಜತೆ ಷಾಮೀಲಾಗಿ ನೇರವಾಗಿ ಹೊಲಗಳಿಂದಲೇ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಆಹಾರ ಧ್ಯಾನ ಖರೀದಿಸಿದ ಆರೋಪಗಳೂ ಕೇಳಿಬಂದಿವೆ ಎಂದು ಸಭೆಯ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.