ADVERTISEMENT

ಮತಗಟ್ಟೆ ಕೊಡದಿದ್ದರೆ ಮತದಾನ ಬಹಿಷ್ಕಾರ

ಮಾಯಕೊಂಡದ ಕರಿಲಕ್ಕೇನಹಳ್ಳಿ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಎಚ್ಚರಿಕೆ

ಬಾಲಚಂದ್ರ ಎಚ್.
Published 29 ಮಾರ್ಚ್ 2018, 9:39 IST
Last Updated 29 ಮಾರ್ಚ್ 2018, 9:39 IST

ದಾವಣಗೆರೆ: ‘ನಮ್ಮೂರಿಗೆ ರಸ್ತೆ, ಚರಂಡಿ ಸೌಲಭ್ಯ ಕೇಳಿಲ್ಲ. ಪ್ರತ್ಯೇಕ ಮತಗಟ್ಟೆ ಕೊಡಿ ಎಂದಷ್ಟೇ ಕೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ನಾವ್ಯಾರೂ ಮತದಾನ ಮಾಡುವುದಿಲ್ಲ’...

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡು ಹೋಬಳಿಯ ಕರಿಲಕ್ಕೇನಹಳ್ಳಿ ಗ್ರಾಮಸ್ಥರು ನೀಡಿರುವ ಎಚ್ಚರಿಕೆ ಇದು.‘ಗ್ರಾಮದಲ್ಲಿ 500 ಮತದಾರರಿದ್ದೇವೆ. ಇವರಲ್ಲಿ ವೃದ್ಧರ, ಅಂಗವಿಕಲರ ಸಂಖ್ಯೆಯೇ 100ರ ಆಸುಪಾಸಿನಲ್ಲಿದೆ. ಆದರೂ ಚುನಾವಣೆ ಬಂದಾಗ ಗ್ರಾಮದಲ್ಲಿ ಮತಗಟ್ಟೆ ತೆರೆಯುವುದಿಲ್ಲ. ವಯಸ್ಸಾದವರು, ಗರ್ಭಿಣಿಯರು ನಾಲ್ಕು ಕಿ.ಮೀ ದೂರದ ಮಲ್ಲಶೆಟ್ಟಿಹಳ್ಳಿಯ ಮತಗಟ್ಟೆಗೆ ಮತಹಾಕಲು ಹೋಗಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು ಗ್ರಾಮದ ಓಂಕಾರಪ್ಪ.

‘ಪ್ರತಿ ಚುನಾವಣೆ ಬಂದಾಗಲೂ ಗ್ರಾಮಕ್ಕೆ ದೌಡಾಯಿಸುವ ಅಧಿಕಾರಿಗಳು ಮುಂದಿನ ಬಾರಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡುತ್ತಾರೆ. ಮತ ಹಾಕುವಂತೆ ಮನವೊಲಿಸುತ್ತಾರೆ. ಈ ಬಾರಿ ಒಮ್ಮತದಿಂದ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಬೇಡಿಕೆ ಈಡೇರಿದರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲವಾದರೆ ಮತ ಬಹಿಷ್ಕಾರ ಹಾಕುತ್ತೇವೆ’ ಎಂದರು ಓಂಕಾರಪ್ಪ.

ADVERTISEMENT

ಕಳೆದ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ಪಕ್ಕದ ಮಲ್ಲಶೆಟ್ಟಿಹಳ್ಳಿಗೆ ಹೋಗಿ ವೋಟ್‌ ಮಾಡಿದ್ದೆವು. ಆಗಲೂ ಅಧಿಕಾರಿಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಮತಗಟ್ಟೆ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿದ್ದರು. ಅಂದು ದೇವಸ್ಥಾನದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ ಅಂದಿನ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮಾತು ಸಹ ಕೊಟ್ಟಿದ್ದರು. ಅದರಂತೆ ನಡೆದುಕೊಳ್ಳಲೇಬೇಕು ಎಂದು ಊರಿನವರು ಒತ್ತಾಯಿಸಿದರು.

‘ಚುನಾವಣೆಗಳಲ್ಲಿ ಮತಹಾಕಲು ಮಲ್ಲಶೆಟ್ಟಿಹಳ್ಳಿಗೆ ಹೋಗಲು ಕೆಲವು ರಾಜಕೀಯ ಮುಖಂಡರು ವಾಹನಗಳ ವ್ಯವಸ್ಥೆ ಮಾಡುತ್ತಾರೆ. ಮನೆಯಲ್ಲಿ ವಾಹನಗಳು ಇಲ್ಲದವರು ಅನಿವಾರ್ಯವಾಗಿ ಅವರ ವಾಹನಗಳಲ್ಲಿ ಹೋಗಬೇಕಾಗುತ್ತದೆ. ಅದಕ್ಕೆ ಪ್ರತಿಯಾಗಿ ವಾಹನ ಮಾಲೀಕರ ಮುಲಾಜಿಗೆ ಬಿದ್ದು ಮತ ಚಲಾಯಿಸಲೇಬೇಕಾಗುತ್ತದೆ. ಆತ್ಮಗೌರವದಿಂದ, ಸ್ವತಂತ್ರವಾಗಿ ಮತ ಹಾಕಲು ನಮ್ಮೂರಿಗೆ ಮತಗಟ್ಟೆ ಬೇಕೇ ಬೇಕು ಎಂದು ಪ್ರತಿಪಾದಿಸುತ್ತಾರೆ ಇಲ್ಲಿನ ಜನರು.

ಬುಧವಾರ ಗ್ರಾಮಸ್ಥರೆಲ್ಲ ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ. ‘ಮತ ಹಾಕಿ’ ಎಂದು ಜಾಗೃತಿ ಮೂಡಿಸಲು ಬರುವ ಅಧಿಕಾರಿಗಳನ್ನು ಗ್ರಾಮದೊಳಗೆ ಬಿಟ್ಟುಕೊಳ್ಳದಿರಲು ನಿರ್ಧರಿಸಲಾಗಿದೆ. ರಾಜಕೀಯ ನಾಯಕರಿಗೂ ಪ್ರಚಾರ ನಡೆಸಲು ನಿರ್ಬಂಧ ಹೇರಲಾಗುವುದು’ ಎಂದು ತಿಳಿಸಿದರು.

ಅಧಿಕಾರಿಗಳು ಗ್ರಾಮ ಪ್ರವೇಶಿಸದಂತೆ ತಡೆಯಲು ಊರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಮುಳ್ಳಿನ ಬೇಲಿ ಹಾಕಲಾಗಿದೆ. ಪ್ರತ್ಯೇಕ ಮತಗಟ್ಟೆ ನೀಡುವ ಬಗ್ಗೆ ಅಧಿಕೃತ ಘೋಷಣೆಯಾಗಬೇಕು. ಅಲ್ಲಿಯವರೆಗೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗ್ರಾಮಕ್ಕೆ ಬರುವಂತಿಲ್ಲ. ಬಂದರೆ ಊರಿನ ದೇವಸ್ಥಾನದಲ್ಲಿ ಕೂಡಿಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

‘ಗ್ರಾಮದಲ್ಲಿ ಸರ್ಕಾರಿ ಶಾಲೆ ಇದೆ. ಮತಗಟ್ಟೆ ನಿರ್ಮಾಣಕ್ಕೆ ಸಮರ್ಪಕ ವ್ಯವಸ್ಥೆ ಇದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಬಾರಿ ಭರವಸೆಗಳಿಗೆ ಮಣಿಯುವುದಿಲ್ಲ. ಬೇಡಿಕೆ ಈಡೇರಿದರೆ ಮಾತ್ರ ಪಟ್ಟು ಸಡಿಲಿಸುತ್ತೇವೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಸರ್ಕಾರದ ನಿರ್ಲಕ್ಷ್ಯ’

‘ಕಡ್ಡಾಯವಾಗಿ ಮತದಾನ ಮಾಡಿ’ ಎಂದು ಸರ್ಕಾರ ಜಾಹೀರಾತು ನೀಡುತ್ತದೆ. ಜಾಗೃತಿ ಮೂಡಿಸುತ್ತದೆ. ಆದರೆ, ಮತದಾನ ಮಾಡಲು ನಾವು ಸಿದ್ಧರಿದ್ದರೂ ಮತಗಟ್ಟೆ ವ್ಯವಸ್ಥೆ ಮಾಡುತ್ತಿಲ್ಲ. 2013ರಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹೊನ್ನೂರು ಗ್ರಾಮ ಪಂಚಾಯ್ತಿ ಸದಸ್ಯ ಓಂಕಾರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.