ADVERTISEMENT

ಮದುವೆಗೆ ಅಡ್ಡಿಯಾದ ಅಪ್ರಾಪ್ತ ವಯಸ್ಸು

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 7:15 IST
Last Updated 10 ಜೂನ್ 2011, 7:15 IST

ನ್ಯಾಮತಿ: ಬಾಲ್ಯವಿವಾಹ ತಡೆಗಟ್ಟಿದ ಸುದ್ದಿಗಳು, ಕಾನೂನಿನ ಕಟ್ಟುಪಾಡು ಇದ್ದರೂ ಸಹಾ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆಗೆ ಪೋಷಕರು ಮುಂದಾಗುತ್ತಿರುವುದು ಹೆಚ್ಚುತ್ತಿದ್ದು, ಸಮೀಪದ ಚೀಲೂರು ಕಡದಕಟ್ಟೆ ಗ್ರಾಮದಲ್ಲಿ. ವಧುವಿನ ಅಪ್ರಾಪ್ತ ವಯಸ್ಸು ಮದುವೆಯ ಸಂಭ್ರಮಕ್ಕೆ ಅಡ್ಡಿ ಮಾಡಿ ವಧು-ವರರನ್ನು ದೂರವಾಗಿಸಿತು. ಇದರಿಂದ ಪೋಷಕರು, ಬಂಧು -ಮಿತ್ರರ-ಸಾರ್ವಜನಿಕರ ಎದುರು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಸಂದೇಶ  ರವಾನೆಯಾಯಿತು.

ಚೀಲೂರು ಕಡದಕಟ್ಟೆ ಗ್ರಾಮದ ದಿವಂಗತ ತಿಪ್ಪೇಸ್ವಾಮಿ, ತಾಯಿ ಸುಲೋಚನಮ್ಮ ಅವರ ಪುತ್ರ ಅಣ್ಣಯ್ಯ (27) ಅವರ ವಿವಾಹ ಚನ್ನಗಿರಿ ತಾಲ್ಲೂಕು ಶಿವಕುಳೆನೂರು ಗ್ರಾಮದ ಸುಮಂಗಲ-ನಾಗರಾಜಪ್ಪ ಅವರ ಪುತ್ರಿ  ಕರಿಯಮ್ಮ (ವೇದಾವತಿ) (16) ಅವರ ವಿವಾಹ ನಿಶ್ಚಯವಾಗಿತ್ತು. ಮಂಗಳವಾರ ರಾತ್ರಿ ಮದುವೆ ಶಾಸ್ತ್ರಗಳು ಮುಗಿದು ಬುಧವಾರ ಮುಹೂರ್ತದ ವೇಳೆಗೆ ಎಲ್ಲರೂ ನೆರೆದಿದ್ದರು. ಆ ಸಂದರ್ಭಕ್ಕೆ ಸರಿಯಾಗಿ ಅಲ್ಲಿಗೆ ಆಗಮಿಸಿದ ಹೊನ್ನಾಳಿ ತಾಲ್ಲೂಕು ಸ್ಫೂರ್ತಿ ಸಂಸ್ಥೆಯ ಮಕ್ಕಳ ಸಹಾಯವಾಣಿ ಸಿಬ್ಬಂದಿ ಮತ್ತು ನ್ಯಾಮತಿ ಪೊಲೀಸ್ ಅಧಿಕಾರಿಗಳು ಕರಿಯಮ್ಮನ ವಯಸ್ಸು 16 ದಾಟದ ಕಾರಣ ಮದುವೆ ತಡೆದರು.

ಈ ಅಪ್ರಾಪ್ತ ವಯಸ್ಸಿನ ಮದುವೆಯ ಬಗ್ಗೆ ದಾವಣಗೆರೆಯ ಡಾನ್‌ಬಾಸ್ಕೋ ಮಕ್ಕಳ ಸಹಾಯವಾಣಿಯಿಂದ ಜೂನ್ 6ರಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ 7ರಂದು ನ್ಯಾಮತಿ ಠಾಣೆಗೆ ದೂರು ದಾಖಲಿಸಿ, 8ರಂದು ಮದುವೆಯ ಮನೆಗೆ ಹೋಗಿ ವಧುವಿನ ವಯಸ್ಸಿನ ದಾಖಲೆ ಪರಿಶೀಲಿಸಿದ ನಂತರ, ಪೋಷಕರಿಗೆ ವಯಸ್ಸಿನ ಬಗ್ಗೆ ತಿಳಿವಳಿಕೆ ನೀಡಿ ಮದುವೆ ತಡೆದೆವು ಎಂದು ಹೊನ್ನಾಳಿ ತಾಲ್ಲೂಕು ಸ್ಫೂರ್ತಿ ಸಂಸ್ಥೆಯ ಮಕ್ಕಳ ಸಹಾಯವಾಣಿಯ ಸಿಬ್ಬಂದಿ ರೇಷ್ಮಾ ಮತ್ತು ದಾಕ್ಷಾಯಣಮ್ಮ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನ್ಯಾಮತಿ ಠಾಣಾಧಿಕಾರಿ ಟಿ.ಎಸ್. ಮುರುಗೇಶ್ ಮತ್ತು ಸಿಬ್ಬಂದಿ ಸಹಕರಿಸಿದರು

ಇನ್ನೊಂದು ಪ್ರಕರಣ...
ಸಮೀಪದ ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ  ಮದುವೆಗೆ ಸಿದ್ಧತೆ ನಡೆಯುತ್ತಿದ್ದನ್ನು ಅಧಿಕಾರಿಗಳು ತಡೆಗಟ್ಟಿದ ಪ್ರಸಂಗ ಗುರುವಾರ ನಡೆದಿದೆ.

ದೊಡ್ಡೆತ್ತಿನಹಳ್ಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ಹುಡುಗ ಅದೇ ಗ್ರಾಮದ ಅಪ್ರಾಪ್ತ ವಯಸ್ಸಿನ
ಹುಡುಗಿಯನ್ನು ಪ್ರೀತಿಸಿದ್ದ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಮದುವೆ ಮಾತುಕತೆ ನಡೆಸಲು ಸಿದ್ಧತೆಯಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಚೀಲೂರಿನ ಮಹಾತ್ಮ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪುರುವಂತರ ಪರಮೇಶ್ವರಪ್ಪ, ಹೊನ್ನಾಳಿ ಸಿಡಿಪಿಒ ರಾಮಲಿಂಗಪ್ಪ ಅರಳಗುಪ್ಪಿ ಮತ್ತು ನ್ಯಾಮತಿಯ ಠಾಣಾಧಿಕಾರಿ ಟಿ.ಎಸ್. ಮುರುಗೇಶ್ ಮತ್ತು ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ  ಎರಡು ಕುಟುಂಬದ ಪೋಷಕರಿಗೆ ಬಾಲ್ಯ ವಿವಾಹದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ವಿವಾಹದ ಮಾತುಕತೆಗೆ ತೆರೆ ಎಳೆದರು.

 ಬಾಲಕಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 85ರಷ್ಟು ಅಂಕ ಗಳಿಸಿರುವುವುದನ್ನು, ತಿಳಿದ ಅಧಿಕಾರಿಗಳು ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರಿಸುವಂತೆ ಸಲಹೆ ನೀಡಿದ ಘಟನೆ ನಡೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.