ADVERTISEMENT

ಮನಸ್ಸು ಸನ್ಮಾರ್ಗದ ಕಡೆ ಸಾಗಲಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:55 IST
Last Updated 22 ಏಪ್ರಿಲ್ 2013, 8:55 IST

ಚನ್ನಗಿರಿ: ವೇದ-ಉಪನಿಷತ್ತುಗಳನ್ನು ಬದುಕಿನಲ್ಲಿ ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಜಾತಿಭೇದಗಳನ್ನು ಎಣಿಸದೇ ಸರ್ವರು ಸಮಾನರಾಗಿ ಸಮಾಜದಲ್ಲಿ ಬಾಳುವಂತಾಗಬೇಕು. ಮನುಷ್ಯನ ಮನಸ್ಸು ಸನ್ಮಾರ್ಗದ ಕಡೆಗೆ ಸಾಗಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಶನಿವಾರ ನಡೆದ 747ನೇ ಮಾಸಿಕ ಶಿವಾನುಭವ ಹಾಗೂ ಮಹಾಜ್ಞಾನಿ ಅಲ್ಲಮಪ್ರಭು ದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಧವೆಯ ಸರಳ ಕಲ್ಯಾಣ ಮಹೋತ್ಸವ ನೆರವೇರಿಸಿ ಅವರು ಮಾತನಾಡಿದರು.

ವರ್ಣರಂಜಿತ ಬದುಕಿಗೆ ಬೆಲೆ ಕೊಡದೇ ಆದರ್ಶ ಜೀವನಕ್ಕೆ ಹೊಂದಿಕೊಂಡು ಹೋಗುವುದೇ ಜೀವನವಾಗಿದೆ. ವಿಧವೆಯರ ಮರು ವಿವಾಹಕ್ಕೆ ಹೆಚ್ಚು ಮನ್ನಣೆ ಸಿಗುವಂತಾಗಬೇಕು. ವಿಧವೆಯರನ್ನು ವಿವಾಹವಾಗಲು ಯುವಕರು ಮುಂದೆ ಬರಬೇಕು. ಬದುಕಿನಲ್ಲಿ ಶರಣರ ಆದರ್ಶಗಳನ್ನು ಮೈಗೂಡಿಸಿಗೊಂಡು ನಡೆದರೆ ಬಾಳು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ಸಾಣೇಹಳ್ಳಿಯ ವಿಧವೆ ಎಸ್.ಎಂ. ಆಶಾ ಅವರನ್ನು ಕಾಲ್ಕೆರೆಯ ಎಂ. ವೇದಮೂರ್ತಿ ಮದುವೆಯಾಗುವ ಮೂಲಕ ಮರು ವೈವಾಹಿಕ ಜೀವನ ಸಾಗಿಸಲು ಅವಕಾಶ ಕಲ್ಪಿಸಿಕೊಟ್ಟರು.

ಬೆಂಗಳೂರಿನ ಸನ್ ಪ್ರಾಜೆಕ್ಟ್ ಅಧಿಕಾರಿ ಎಚ್.ಸಿ. ಪ್ರಭಾಕರ್, ರಕ್ತದಾನಿ ಸಿದ್ದೇಶ್ ಉಪಸ್ಥಿತರಿದ್ದರು. ಹಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು ಉಪನ್ಯಾಸ ನೀಡಿದರು.

ಎಂ.ಯು. ಚನ್ನಬಸಪ್ಪ ಸ್ವಾಗತಿಸಿದರು. ಎಂ.ಜಿ. ಧನಂಜಯ ವಂದಿಸಿದರು. ಎಂ.ಬಿ. ನಾಗರಾಜ್ ಕಾಕನೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.