ದಾವಣಗೆರೆ: ಮನೆಯನ್ನು ಗ್ರಂಥಾಲಯ ಮಾಡಿಕೊಳ್ಳಬೇಕು ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಲ್ಲಿಗೆ ಸಮೀಪದ ತೊಳಹುಣಸೆಯಲ್ಲಿರುವ ದಾವಣಗೆರೆ ವಿವಿಯಲ್ಲಿ ಭಾನುವಾರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ನಾನು ಮನೆಯಲ್ಲಿ ಗ್ರಂಥಾಲಯ ಮಾಡುತ್ತೇನೆ. ನಾನು 20 ಪುಸ್ತಕಗಳನ್ನು ಇಡುತ್ತೇನೆ. ನನ್ನ ಮಗ 200 ಪುಸ್ತಕ ಇಡುತ್ತಾನೆ. ಅವನ ಮಗ 2 ಸಾವಿರ ಪುಸ್ತಕ ಸೇರಿಸುತ್ತಾನೆ. ಆಗ, ಅದರು ಮನೆಗೆ ದೊಡ್ಡ ಸಂಪತ್ತಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ 20 ಪುಸ್ತಕಗಳನ್ನು ಮೊದಲು ಇಡಬೇಕು. ಮಕ್ಕಳು ಸದಾ ಉತ್ತಮ ಪುಸ್ತಕಗಳನ್ನು ನೋಡುತ್ತಿದ್ದರೆ, ವಿಶ್ವಾಸ ಬೆಳೆಯುತ್ತದೆ. ಸದ್ಗುಣಗಳು ಮೂಡುತ್ತವೆ. ಮನೆಯಲ್ಲಿ ಚಿಕ್ಕದಾದ ಗ್ರಂಥಾಲಯ ಹೊಂದುವುದು; ಬೆಳಿಗ್ಗೆ ಕೆಲ ಕಾಲ ಪ್ರಾರ್ಥನೆ ಮಾಡುವುದು ಆತ್ಮವಿಶ್ವಾಸ ತರಿಸುತ್ತದೆ~ ಎಂದು ತಿಳಿಸಿದರು. `ಇಂದೇ ಪುಸ್ತಕ ಇಡುತ್ತೇನೆ~ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.
ಶಿಕ್ಷಣ ಹೊಂದುವುದು ನಮ್ಮ ಇಡೀ ಜೀವನದ ಅಭಿಯಾನ. ಇದಕ್ಕಾಗಿ ಅವಿರತವಾಗಿ ಶ್ರಮಿಸುತ್ತೇನೆ. ಈ ಮೂಲಕ ಯಶಸ್ಸು ಸಾಧಿಸುತ್ತೇನೆ. ಏನಾದರೂ ವಿಶೇಷವಾಗಿ ಅನ್ವೇಷಣೆ ಮಾಡಬಹುದೆ ಎಂದು ನಿರಂತರವಾಗಿ ಆಲೋಚಿಸುತ್ತಿರುತ್ತೇನೆ. ದೊಡ್ಡದಾದ ಗುರಿಗಳತ್ತ ನೋಟ ನೆಟ್ಟಿರುತ್ತೇನೆ. ಅದ್ಭುತ ವ್ಯಕ್ತಿಗಳು, ಶಿಕ್ಷಕರು ಹಾಗೂ ಪುಸ್ತಕಗಳನ್ನು ಸ್ನೇಹಿತರನ್ನಾಗಿ ಹೊಂದಿರುತ್ತೇನೆ ಎಂಬ ಸಂಕಲ್ಪ ತೊಡಬೇಕು. ಈ ನಿಟ್ಟಿನಲ್ಲಿ ನಿರಂತರ ಅವಲೋಕನ ಮಾಡಿಕೊಳ್ಳುತ್ತಿರಬೇಕು ಎಂದು ಕರೆ ನೀಡಿದರು.
ಎದೆಗುಂದಬೇಡಿ...
ಸಮಸ್ಯೆ ಎನ್ನುವುದು `ಸೈಥಾನ್~ ಇದ್ದಂತೆ; ಎಂದಿಗೂ ಸಮಸ್ಯೆಯೇ ನಾಯಕ ಆಗುವುದಕ್ಕೆ ಬಿಡಬಾರದು. ನಾವು ಸಮಸ್ಯೆಗಳಿಗೆ ನಾಯಕರಾಗಬೇಕು. ಹೇಳಿದಂತೆ ಕೇಳುವಂತೆ ಮಾಡಿಕೊಳ್ಳಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ದೇಶದಲ್ಲಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ತಮ್ಮ ಗುರು ಸತೀಶ್ ದವನ್ ಅವರನ್ನು ನೆನೆದರು. ನನ್ನೆಲ್ಲ ಏಳು-ಬೀಳುಗಳ ಸಂದರ್ಭದಲ್ಲಿ ಈ ಮಾತುಗಳನ್ನು ನೆನೆಯುತ್ತೇನೆ ಎಂದು ಹೇಳಿದರು.
ಜೈವಿಕ, ಇನ್ಫೋ, ನ್ಯಾನೋ ತಂತ್ರಜ್ಞಾನಗಳು ಒಟ್ಟಾಗಿ ಕಾರ್ಯ ನಿರ್ವಹಿಸಿದರೆ, ಇನ್ನೆರಡು ದಶಕಗಳಲ್ಲಿ ಅವು ದೇಶವನ್ನು ಮುಂಚೂಣಿಗೆ ತಂದು ನಿಲ್ಲಿಸಬಲ್ಲವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಪೂರ್ವವಲಯ ಐಜಿಪಿ ಸಂಜಯ್ ಸಹಾಯ್, ಜಿ.ಪಂ. ಸಿಇಒ ಗುತ್ತಿ ಜಂಬುನಾಥ್, ವಿಶ್ರಾಂತ ಕುಲಪತಿ ಪ್ರೊ.ಮಾದಯ್ಯ, ಹೋರಾಟಗಾರ ಎಂ.ಎಸ್.ಕೆ. ಶಾಸ್ತ್ರಿ ಉಪಸ್ಥಿತರಿದ್ದರು.
ಕುಂದವಾಡ ಕೆರೆಗೆ ಕಲಾಂ `ಸಲಾಂ~!
ಎರಡು ದಿನಗಳ ಕಾಲ ನಗರ ಪ್ರವಾಸ ಕೈಗೊಂಡಿದ್ದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಇಲ್ಲಿನ ಕುಂಡವಾಡ ಕೆರೆಯ ಸೌಂದರ್ಯಕ್ಕೆ `ಕ್ಲೀನ್ ಬೋಲ್ಡ್~ ಆಗಿದ್ದಾರೆ!
- ಹೌದು, ಈ ಸಂಗತಿಯನ್ನು ಸ್ವತಃ ಕಲಾಂ ಅವರು ಇಲ್ಲಿಗೆ ಸಮೀಪದ ತೊಳಹುಣಸೆಯಲ್ಲಿರುವ ದಾವಣಗೆರೆ ವಿವಿ- ಶಿವಗಂಗೋತ್ರಿ ಕ್ಯಾಂಪಸ್‌ನಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು.
ನಗರಕ್ಕೆ ಸಮೀಪದ ಹಳ್ಳಿ ಕುಂದವಾಡ ಗ್ರಾಮದಲ್ಲೊಂದು ಕೆರೆ ಇದೆ. ಅದೊಂದು ಸುಂದರವಾದ ಕೆರೆ. 270 ಎಕರೆ ಪ್ರದೇಶದಲ್ಲಿ ಹರಡಿದೆ. ಕೆರೆಯ ಸುತ್ತಲೂ 5 ಕಿ.ಮೀ. ರಸ್ತೆ ಇದೆ. ಅದನ್ನು ವೀಕ್ಷಿಸಿ ಬಹಳ ಸಂತೋಷವಾಯಿತು. ಅಷ್ಟೊಂದು ವಿಶಾಲವಾದ ಆ ಕೆರೆಯನ್ನು ಹೇಗೆ ಕಟ್ಟಲಾಯಿತು? ಕೆರೆಯ ಸೌಂದರ್ಯ ನನ್ನ ಮನಸೂರೆಗೊಂಡಿದೆ. ಹಿಂದೆ ಇದೊಂದು `ಕೊಳಕು ಕೆರೆ~ಯಾಗಿತ್ತಂತೆ; ಅಂದಿನ ಸಚಿವರು ಹಾಗೂ ಜಿಲ್ಲಾಧಿಕಾರಿ ಪ್ರಯತ್ನದಿಂದ ಈಗ `ಸುಂದರವಾದ ಕೆರೆ~ಯಾಗಿದೆ. ಇಂತಹ ಕೆರೆ ಇರುವುದಕ್ಕೆ ಇಲ್ಲಿನವರು ಹೆಮ್ಮೆ ಪಡಬೇಕು ಎಂದು ಮೆಚ್ಚುಗೆ ಸೂಚಿಸಿದರು.
ಕುಂದವಾಡ ಕೆರೆಯ ದಂಡೆಯ ಮೇಲೆ ಪ್ರತಿಯೊಬ್ಬರೂ 5 ಸಸಿಗಳನ್ನು ನೆಟ್ಟು ಬೆಳೆಸುತ್ತೇವೆ. ಈ ಮೂಲಕ ಸೌಂದರ್ಯವನ್ನು ವೃದ್ಧಿಸುತ್ತೇವೆ ಎಂದು ನೆರೆದಿದ್ದವರಿಗೆ ಪ್ರಮಾಣವಚನ ಬೋಧಿಸಿದರು.
ಸಂವಾದದ `ಪಕ್ಕ ನೋಟ~...
* ಇದೇ ಪ್ರಥಮ ಬಾರಿಗೆ ದಾವಣಗೆರೆ ವಿವಿಗೆ ಭೇಟಿ ನೀಡಿದ ಮಾಜಿ ರಾಷ್ಟ್ರಪತಿ ಅವರು ಸಸಿಗೆ ನೀರೆರೆದರು. ಅಲ್ಲಿನ ವಾತಾವರಣಕ್ಕೆ ಮೆಚ್ಚುಗೆ ಸೂಚಿಸಿದರು.
* ವಿವಿಯಲ್ಲಿ ದೊಡ್ಡದಾದ ಸಭಾಂಗಣ ಇಲ್ಲದಿರುವುದರಿಂದ, ಮೂರು ಉಪನ್ಯಾಸ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು. ಒಂದು ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳಿಗೆ ಕಲಾಂ ಅವರ ನೇರ ಭಾಷಣ ಕೇಳುವ ಅವಕಾಶ ದೊರೆಯಿತು. ಇತರ ವಿದ್ಯಾರ್ಥಿಗಳು, ಎಲ್‌ಸಿಡಿ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಿ ಸಮಾಧಾನಪಡಬೇಕಾಯಿತು. ಇತರ ಕೊಠಡಿಗಳಲ್ಲಿದ್ದ ವಿದ್ಯಾರ್ಥಿಗಳು ಹೊರಬಾರದಂತೆ ಸಿಬ್ಬಂದಿ ಕಾವಲು ಕಾದಿದ್ದರು!
* ಕಲಾಂ ಅವರಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕೆ 9-10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಸಮಯದ ಅಭಾವದಿಂದಾಗಿ ಕಲಾಂ ಅವರು 7 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದರು. ಉಳಿದ ಪ್ರಶ್ನೆಗಳನ್ನು ಇ-ಮೇಲ್ ಮಾಡುವಂತೆ ತಿಳಿಸಿದರು. ಇದರಿಂದ ಹಲವು ವಿದ್ಯಾರ್ಥಿಗಳು ನಿರಾಸೆ ಅನುಭವಿಸಿದರು.
* ಕಲಾಂ ಅವರು ತಮ್ಮ ಕನಸಿನ ಯೋಜನೆ `ಪುರ~ ಅನುಷ್ಠಾನಕ್ಕೆ ಸಹಕರಿಸುವಂತೆ ಕೋರಿದರು. ದಾವಣಗೆರೆ ವಿವಿಯೂ ಸಹ ಸುತ್ತಮತ್ತಲಿನ 30-35 ಹಳ್ಳಿಗಳಲ್ಲಿ, ಉತ್ತಮ ಗುಣಮಟ್ಟದ ಮೂಲಸೌಲಭ್ಯ ಕಲ್ಪಿಸುವ ಯೋಜನೆಯ ನೇತೃತ್ವ ವಹಿಸಬೇಕು ಎಂದು ಸಲಹೆ ಮಾಡಿದರು.
* ಕ್ಯಾಂಪಸ್‌ಗೆ ಆಗಮಿಸಿದ ಕಲಾಂ ಅವರನ್ನು ಪೂರ್ಣಕುಂಭದೊಂದಿಗೆ ವಿದ್ಯಾರ್ಥಿನಿಯರು ಬರಮಾಡಿಕೊಂಡರು ಹಾಗೂ ಚಿಣ್ಣರು ಹೂವು ನೀಡಿ ಕೈಕುಲುಕಿ ಖುಷಿಪಟ್ಟರು.
* ಕಲಾಂ ಅವರಿಗೆ ಲಲಿತಕಲಾ ವಿದ್ಯಾಲಯದ ವಿದ್ಯಾರ್ಥಿ ದೀಪಕ್ ವಿಜಯ್ ಅವರು ಕಲಾಂ ಅವರ ಕಲಾಕೃತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.