ADVERTISEMENT

ಮಳೆಗಾಗಿ ಪೂಜೆ: ಜಿಲ್ಲೆಯಲ್ಲಿ ರೂ 27.85 ಲಕ್ಷ ವೆಚ್ಚ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 8:00 IST
Last Updated 22 ಜುಲೈ 2012, 8:00 IST

ದಾವಣಗೆರೆ: ಮಳೆಗಾಗಿ ಪ್ರಾರ್ಥಿಸಿ ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವಂತೆ ಸರ್ಕಾರ ಆದೇಶಿಸಿದ್ದು, ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ ರೂ 27.85 ಲಕ್ಷ ಖರ್ಚಾಗಲಿದೆ!

`ಸಮೃದ್ಧ ಮಳೆ-ಬೆಳೆ ಆಗಲಿ~ ಎಂದು ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಹೋಮ-ಹವನ ಮತ್ತು ವಿಶೇಷ ಪೂಜೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಆಯಾ ದೇವಸ್ಥಾನಗಳ ನಿಧಿಯಿಂದ ರೂ 5 ಸಾವಿರದವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 557 ದೇವಸ್ಥಾನಗಳಿದ್ದು, ಇಲ್ಲಿ ರೂ 5 ಸಾವಿರ ವೆಚ್ಚ ಮಾಡಿದರೆ ಒಟ್ಟು ರೂ 27.87 ಲಕ್ಷ ಆಗಲಿದೆ.

ಸರ್ಕಾರ ಮಳೆಗಾಗಿ ಮಂತ್ರದ ಮೊರೆ ಹೋಗಿರುವುದಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. `ಮಂತ್ರಕ್ಕೆ ಮಾವಿನಕಾಯಿ ಬೀಳುತ್ತದೆಯೇ~ ಎಂದು ಕೆಲವರು ಪ್ರಶ್ನಿಸಿದರೆ, `ಅವರವರ ನಂಬಿಕೆ ಅವರವರಿಗೆ~ ಎಂಬ ಮಾತುಗಳು ಕೇಳಿಬರುತ್ತಿದೆ. ಸರಿಯಾಗಿ ಮಳೆಯಾಗದೇ, ಬೆಳೆಯೂ ಆಗದೆ ಬರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಮಾತ್ರ, `ಹೇಗಾದರೂ ಆಗಲಿ ಮಳೆ ಬಂದರೆ ಸಾಕು~ ಎಂಬ ಚಿಂತೆಯಲ್ಲಿದ್ದಾರೆ; ಆಗಸದತ್ತ ಮುಖ ಮಾಡಿದ್ದಾರೆ.

ಸರ್ಕಾರದ ಆದೇಶವೇನು?
ಸರ್ಕಾರದ ಆದೇಶದ ಪ್ರಕಾರ, ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ನದಿ ತೀರ, ಕಲ್ಯಾಣಿ, ಪುಷ್ಕರಣಿಗಳನ್ನು ಹೊಂದಿರುವ ಪ್ರಮುಖ ದೇವಾಲಯಗಳಲ್ಲಿ ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಪರ್ಜನ್ಯ ಜಪ, ಹೋಮ, ವಿಶೇಷ ಪೂಜೆಗಳನ್ನು ನಡೆಸಬೇಕು. `ಎ~, `ಬಿ~ ಮತ್ತು `ಸಿ~ ವರ್ಗದ ದೇವಾಲಯಗಳಲ್ಲಿ `ಜಲಾಭಿಷೇಕ~, ಜುಲೈ 27 ಮತ್ತು  ಆಗಸ್ಟ್ 2ರಂದು ವಿಶೇಷ ಪೂಜೆ ಮಾಡುವಂತೆ ಆದೇಶಿಸಲಾಗಿದೆ. ಸರ್ಕಾರದ ಈ ನಿರ್ಧಾರ, ವೈಚಾರಿಕ ಚಿಂತಕರ ಅಪಹಾಸ್ಯಕ್ಕೆ ಗುರಿಯಾಗಿದೆ.

ಜಿಲ್ಲೆಯಲ್ಲಿ ಹರಿಹರದ ಹರಿಹರೇಶ್ವರ, ಕೊಮಾರನಹಳ್ಳಿಯ ರಂಗನಾಥ ದೇಗುಲ, ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಉತ್ಸವಾಂಬ ದೇವಸ್ಥಾನ, ಹೊನ್ನಾಳಿ ತಾಲ್ಲೂಕಿನ ಮಂಜುನಾಥ ಮತ್ತು ನರಸಿಂಹಸ್ವಾಮಿ ದೇವಸ್ಥಾನ, ಮಾರಿಕೊಪ್ಪ ಹಳದಮ್ಮ ದೇವಸ್ಥಾನ, ಕೂಲಹಳ್ಳಿಯ ಗೋಣಿಬಸವೇಶ್ವರ ದೇವಸ್ಥಾನ ಮೊದಲಾದವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಪ್ರಮುಖ ದೇವಾಲಯಗಳೆನಿಸಿವೆ.

ಜಿಲ್ಲೆಯಲ್ಲಿ ಹರಪನಹಳ್ಳಿ, ಜಗಳೂರು, ದಾವಣಗೆರೆ, ಹೊನ್ನಾಳಿ ತಾಲ್ಲೂಕುಗಳನ್ನು `ಬರಗಾಲಪೀಡಿತ ತಾಲ್ಲೂಕುಗಳು~ ಎಂದು ಸರ್ಕಾರ ಗುರುತಿಸಿದೆ. 2011-12ನೇ ಸಾಲಿನಲ್ಲಿ ಮಳೆ ಬಾರದೇ 68,478 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ರೂ 63.83 ಕೋಟಿ ನಷ್ಟವಾಗಿದೆ. ಜಿಲ್ಲೆಯಲ್ಲಿರುವ 933 ಗ್ರಾಮಗಳಲ್ಲಿ 519 ಗ್ರಾಮಗಳನ್ನು ಕುಡಿಯುವ ನೀರಿನ `ಸಮಸ್ಯಾತ್ಮಕ ಗ್ರಾಮ~ಗಳೆಂದು ಗುರುತಿಸಲಾಗಿದೆ. ವಿವಿಧೆಡೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಗಿ ಪ್ರಾರ್ಥನೆಯ ಮೊರೆ ಹೋಗುವ ಬದಲಿಗೆ, ಬರ ಪರಿಸ್ಥಿತಿ ನಿರ್ವಹಣೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವತ್ತ ಸರ್ಕಾರ ಗಮನಹರಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

`ಮುಜರಾಯಿ ದೇವಸ್ಥಾನಗಳಲ್ಲಿ ಮಳೆಗಾಗಿ ಪೂಜೆ ಸಲ್ಲಿಸಬೇಕು ಎಂದು ಸುದ್ದಿ ನೋಡಿದ್ದೇವೆ. ಈ ಸಂಬಂಧ ಸರ್ಕಾರದಿಂದ ಅಧಿಕೃತ ಆದೇಶ ಇನ್ನೂ ಬಂದಿಲ್ಲ; ಬರಬಹುದು~ ಎಂದು ಮುಜರಾಯಿ ಅಧೀಕ್ಷಕ ಸಮೀ ಉಲ್ಲಾ `ಪ್ರಜಾವಾಣಿ~ ಗೆ ಪ್ರತಿಕ್ರಿಯಿಸಿದರು.

ಇವರೇನಂತಾರೆ?
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಕಬ್ಬು ಬೆಳಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್, ಮಳೆಗಾಗಿ ಮಂತ್ರದ ಮೊರೆ ಹೋಗಿರುವ ಸರ್ಕಾರದ ಕ್ರಮ ಮೂರ್ಖತನದ ಪರಮಾವಧಿ ಎಂದಿದ್ದಾರೆ.

ಬಿಜೆಪಿ ತನ್ನ `ರಹಸ್ಯ ಕಾರ್ಯಸೂಚಿ~ ಏನು ಎಂಬುದನ್ನು ಈ ಮೂಲಕ ತೋರಿಸಿದೆ. ದೇವರು, ಧರ್ಮ ನಂಬುವುದಾದರೆ, ಪ್ರಸ್ತುತ ಆಡಳಿತ ನಡೆಸುತ್ತಿರುವವರಿಂದಲೇ ಬರಗಾಲ ಬಂದಿದೆ ಎನ್ನಬೇಕಾಗುತ್ತದೆ. ಪೂಜಿಸಿದ ಕೂಡಲೇ ಮಳೆ ಬರುವುದಾದರೆ, ಸರ್ಕಾರವೇಕೆ? ಆಡಳಿತವೇಕೆ? ಎಲ್ಲವನ್ನೂ ಪೂಜೆಯಿಂದಲೇ ಮಾಡಬಹುದಲ್ಲವೇ? ಪೂಜೆ ಬದಲಿಗೆ, ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಆಗ, ಮುಂದಿನ ದಿನಗಳಲ್ಲಿ ಬರಬಹುದಾದದ `ಬರ~ ತಪ್ಪಿಸಬಹುದು. ಪೂಜೆಗೆ ವೆಚ್ಚ ಮಾಡುತ್ತಿರುವ ರೂ 17 ಕೋಟಿಯನ್ನು ಬರ ಪರಿಹಾರ ಕಾರ್ಯಕ್ಕೆ ಬಳಸಬಹುದು ಎಂದು ಹೇಳಿದರು.

`ವೈಜ್ಞಾನಿಕವಾಗಿ ಯೋಚಿಸಬೇಕು ಎಂಬುದು ಸರಿ. ಆದರೆ, ಯಾರ ನಂಬಿಕೆಯನ್ನೂ ಪ್ರಶ್ನಿಸಲಾಗದು. ಸಮಾಜದಲ್ಲಿ ಎಲ್ಲ ರೀತಿಯ ಜನರೂ ಇದ್ದಾರಲ್ಲವೇ~ ಎಂದು ಬಿಐಇಟಿ ನಿರ್ದೇಶಕ ಡಾ.ವೃಷಭೇಂದ್ರಪ್ಪ ಪ್ರತಿಕ್ರಿಯಿಸಿದರು.

ಒಂದು ನಂಬಿಕೆ ವಿಫಲವಾದಾಗ ಮತ್ತೊಂದನ್ನು ನಂಬುತ್ತೇವೆ. ಹಿಂದೆ ಸುಂಟರಗಾಳಿ, ಬಿರುಗಾಳಿ ಉಂಟಾಗಿ ದೂಳಿನ ಕಣಗಳು ಮೋಡದ ಮೇಲೆ ಕೂರುತ್ತಿದ್ದವು. ಇದರಿಂದ ಮಳೆಯಾಗುತ್ತಿತ್ತು. ಇತ್ತೀಚೆಗೆ ಸುಂಟರಗಾಳಿ ಕಂಡುಬರುತ್ತಿಲ್ಲ. ಮಳೆ ಬರಬೇಕು ಎಂದರೆ, ವೈಜ್ಞಾನಿಕವಾಗಿ `ಮೋಡಬಿತ್ತನೆ~ ನಡೆಸಬೇಕು. ಪೂಜಿಸಿದರೆ ಮಳೆ ಬರಬಹುದು ಎಂಬುದು ಒಂದು ನಂಬಿಕೆ. ಆದರೆ, ಮೂಢನಂಬಿಕೆ ಇರಬಾರದು ಎಂದು ತಿಳಿಸಿದರು.

ಸರ್ಕಾರ ಪೂಜೆಯನ್ನಾದರೂ ಮಾಡಲಿ; ಮೋಡ ಬಿತ್ತನೆಯನ್ನಾದರೂ ಮಾಡಲಿ, ನಮಗೆ ಮಳೆ ಬರಬೇಕಷ್ಟೆ. ರೈತರ ಸಂಕಷ್ಟಗಳು ನಿವಾರಣೆಯಾಗಬೇಕು ಎಂಬುದಷ್ಟೇ ನಮ್ಮ ಒತ್ತಾಯ ಎಂದು ಹರಪನಹಳ್ಳಿ ತಾಲ್ಲೂಕು ಸಿಂಗ್ರಿಹಳ್ಳಿಯ ರೈತ ಬಸವರಾಜ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.