ADVERTISEMENT

ಮಳೆ ಕೊರತೆ: ಚುರುಕುಗೊಳ್ಳದ ಬಿತ್ತನೆ ಕಾರ್ಯ

ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸದಾಶಿವ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 6:01 IST
Last Updated 15 ಜೂನ್ 2017, 6:01 IST
ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ನಡೆಯಿತು. ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌, ಸಿಇಒ ಎಸ್‌.ಅಶ್ವತಿ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ನಡೆಯಿತು. ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌, ಸಿಇಒ ಎಸ್‌.ಅಶ್ವತಿ ಉಪಸ್ಥಿತರಿದ್ದರು.   

ದಾವಣಗೆರೆ: ಜಿಲ್ಲೆಯಲ್ಲಿ ವಾಡಿಕೆಯಂತೆ ಮುಂಗಾರು ಮಳೆ ಆರಂಭವಾಗಿಲ್ಲ. ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ತಾಲ್ಲೂಕಿನಲ್ಲಿ ಭೂಮಿ ಹದವಾಗುವಷ್ಟು ಮಾತ್ರ ಮಳೆಯಾಗಿದ್ದು, ಈ ತಾಲ್ಲೂಕುಗಳಲ್ಲಿ ರೈತರು ಜೋಳ ಹಾಗೂ ಶೇಂಗಾ ಬಿತ್ತನೆ ಮಾಡಿದ್ದಾರೆ. ಉಳಿದೆಡೆ ಇನ್ನೂ ಮಳೆಯಾಗಬೇಕಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜೂನ್‌ ಆರಂಭದಲ್ಲಿಯೇ ವಾಡಿಕೆಯಂತೆ ಉತ್ತಮ ಮಳೆಯಾಗಬೇಕಿತ್ತು. ಆದರೆ, ಇದುವರೆಗೂ ಆಗಿಲ್ಲ. ಜಿಲ್ಲೆಯಲ್ಲಿ ಕೇವಲ ಶೇ 8ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ತಿಳಿಸಿದರು.

ಹೊದ ವರ್ಷದ ಬೆಳೆ ವಿಮೆ ಹಣ ಕೆಲವು ರೈತರ ಬ್ಯಾಂಕ್‌ ಖಾತೆಗೆ ಇನ್ನೂ ಜಮಾ ಆಗಿಲ್ಲ. ಆ ಬಗ್ಗೆ ಪರಿಶೀಲನೆ ನಡೆಸಬೇಕು. ಜೊತೆಗೆ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ಕೃಷಿ ಅಭಿಯಾನ ನಡೆಸಿ, ರೈತರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್‌, ಸದಾಶಿವ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಿರ್ಮಿಸುತ್ತಿರುವ ಶೌಚಾಲಯ ಹಾಗೂ ಅಂಗನವಾಡಿ ಕಟ್ಟಡ, ಮನೆ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಕೊರತೆ ಇದೆ. ಅಧಿಕಾರಿಗಳು ಕೆಲವೆಡೆ ವಶಪಡಿಸಿಕೊಂಡಿರುವ ಅಕ್ರಮ ಮರಳನ್ನು ಕೊಡಿಸಿದರೆ, ಕಾಮಗಾರಿಗಳನ್ನು ಮುಗಿಸಲು ಅನುಕೂಲವಾಗುತ್ತದೆ ಎಂದು ಯೋಜನಾ ನಿರ್ದೇಶಕ ಎಸ್‌.ರಂಗನಾಥ, ಸಿಇಒ ಎಸ್‌.ಅಶ್ವತಿ ಅವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಸರ್ಕಾರದ ಯೋಜನೆಯ ಕಾಮಗಾರಿಗಳು ನಿಲ್ಲಬಾರದು. ವಶಪಡಿಸಿಕೊಂಡಿರುವ ಮರಳು ಇದ್ದಲ್ಲಿ ಯೋಜನೆಯ ಕಾಮಗಾರಿಗಳಿಗೆ ನೀಡಿ ಎಂದು ಲೋಕೋಪಯೋಗಿ ಇಲಾಖೆ ಎಇಇ ರಮೇಶ್‌ಗೆ ಸೂಚಿಸಿದರು.

ಪಠ್ಯಪುಸ್ತಕ ವಿತರಣೆಗೆ ಕ್ರಮ: ಸರ್ಕಾರಿ ಶಾಲೆಗಳಿಗೆ ಈಗಾಗಲೇ ಶೇ 60ರಷ್ಟು ಪಠ್ಯಪುಸ್ತಕ, ಸಮವಸ್ತ್ರ ಬಂದಿದೆ ಶೀಘ್ರದಲ್ಲಿಯೇ ವಿತರಣೆ ಮಾಡಲಾಗುವುದು. ಸೈಕಲ್‌ ಬಿಡಿ ಭಾಗಗಳೂ ಬಂದಿದ್ದು, ಜೋಡಣೆ ಕಾರ್ಯ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಕೆಲವು ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ ಮಾಡಲಾಗಿದೆ ಎಂದು ಡಿಡಿಪಿಐ ಎಚ್‌.ಎಂ.ಪ್ರೇಮಾ ಸಭೆಗೆ ಮಾಹಿತಿ ನೀಡಿದರು.

5 ವರ್ಷ 5 ತಿಂಗಳು ಆಗಿರುವ ಮಕ್ಕಳನ್ನು 1ನೇ ತರಗತಿಗೆ ಪ್ರವೇಶ ಮಾಡಿಸಿಕೊಳ್ಳಲಾಗುತ್ತಿದ್ದು, ಮಗುವಿನ ಜನ್ಮ ದಿನಾಂಕ ದಾಖಲೆಗೆ ಸಂಬಂಧಿಸಿದಂತೆ ಪೋಷಕರು ನೀಡುವ ದಿನಾಂಕದ ಮುಚ್ಚಳಿಕೆಯೇ ಪ್ರಮುಖವಾಗಿರುತ್ತದೆ ಎಂದು ಡಿಡಿಪಿಐ ತಿಳಿಸಿದರು.

ಜೂನ್‌ 1ರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿನ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ವಾರದಲ್ಲಿ ಎರಡು ದಿನ ಬೇಯಿಸಿದ ಕೋಳಿ ಮೊಟ್ಟೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌ ಮಾಹಿತಿ ನೀಡಿದರು.

ಹತ್ತಿ, ಬಿಲ್ವಪತ್ರೆ, ಬನ್ನಿ, ಬೇವು ಹಾಗೂ ಹರಳಿ ಸಸಿಗಳನ್ನು ವಾಸ್ತುಪ್ರಕಾರ ಒಂದೇ ಕಡೆ ನೆಡುವುದರಿಂದ ಉತ್ತಮ ಮಳೆ ಬರುತ್ತದೆ ಎಂಬ ನಂಬಿಕೆಯಿದ್ದು, ಈ ಸಸಿಗಳನ್ನು ಹಲೆವೆಡೆ ಒಂದೇ ಕಡೆ ನೆಟ್ಟು ಪೋಷಿಸುವ ಚಿಂತನೆ ನಡೆದಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಎಸ್‌.ಷಡಕ್ಷರಪ್ಪ, ಮುಖ್ಯ ಯೋಜನಾಧಿಕಾರಿ ಬಸವನಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿ
ಗಳು ಉಪಸ್ಥಿತರಿದ್ದರು.

ಇಂದಿನಿಂದ ಪೂರಕ ಪರೀಕ್ಷೆ
ಜೂನ್‌ 15ರಿಂದ 22ರ ವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಡೆಯಲಿದೆ. ಕಳೆದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 4,500 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಡಿಡಿಪಿಐ ಪ್ರೇಮಾ ಮಾಹಿತಿ ನೀಡಿದರು.

‘ಪ್ರಜಾವಾಣಿ’ ವರದಿ ಪ್ರಸ್ತಾಪ..
ಬಸವಾಪಟ್ಟಣದ ಕಣಿವೆಬಿಳಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿಯುವ ಸ್ಥಿತಿಯಲ್ಲಿದೆ ಎನ್ನುವ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಜಿ.ಪಂ. ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ, ಡಿಡಿಪಿಐ ಪ್ರೇಮಾ ಅವರಿಗೆ ಸೂಚಿಸಿದರು. ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಪ್ರತಿಕ್ರಿಯಿಸಿದರು.

ಡೆಂಗಿ ಶಂಕೆ: 381 ಪ್ರಕರಣ ಪತ್ತೆ
ಜಿಲ್ಲೆಯಲ್ಲಿ ಇದುವರೆಗೆ 381 ಶಂಕಿತ ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 89 ಪ್ರಕರಣಗಳು ದೃಢಪಟ್ಟಿವೆ. ಹರಿಹರ ತಾಲ್ಲೂಕಿನ ಜಿಗಳಿ ಹಾಗೂ ಜಗಳೂರು ತಾಲ್ಲೂಕಿನ ಲಕ್ಕಂಪುರ ಗ್ರಾಮದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಜಿಗಳಿ ಗ್ರಾಮದಲ್ಲಿ ಮೇನಲ್ಲಿ 14 ವರ್ಷದ ಮಗು ಡೆಂಗಿ ಜ್ವರದಿಂದ ಮೃತಪಟ್ಟಿದೆ. ಈಗಾಗಲೇ ಜಿಲ್ಲೆಯಾದಾದ್ಯಂತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತ್ರಿಪುಲಾಂಬಾ ಮಾಹಿತಿ ನೀಡಿದರು.

ADVERTISEMENT

ಮಳೆಗಾಲ ಆರಂಭವಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಥಾ ಮಾಡಿ, ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಉಮಾ ಎಂ.ಪಿ.ರಮೇಶ್‌, ಡಿಎಚ್‌ಒಗೆ ಸೂಚಿಸಿದರು.

‘ಮಾಹಿತಿ ಇಲ್ಲದಿದ್ದರೆ ಸಭೆಗೆ ಬರಬೇಡಿ’
‘ಕೆಡಿಪಿ ಸಭೆ ನಡೆಯುವುದೇ ತಿಂಗಳಿಗೊಮ್ಮೆ. ಸರಿಯಾದ ಮಾಹಿತಿ ಇಲ್ಲದಿದ್ದರೆ ಸಭೆಗೆ ಬರಬೇಡಿ. ಎಲ್ಲರೂ ನಿಮ್ಮ ಇಲಾಖೆಯ ಅಧಿಕಾರಿಗಳ ಪರವಾಗಿ ಬಂದಿದ್ದೀರಿ. ಈ ರೀತಿ ಮಾಡಿದರೆ ಸಭೆ ನಡೆಸುವುದಾದರೂ ಹೇಗೆ?’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರಬೇಕು ಎಂದು ಸೂಚಿಸಿದರು.

1 ಗಂಟೆ 30 ನಿಮಿಷದಲ್ಲೇ ಮುಗಿದ ಸಭೆ: ಕೆಡಿಪಿ ಸಭೆಗೆ ವಿವಿಧ ಇಲಾಖೆಯ ಬಹುತೇಕ ಹಿರಿಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಕೇವಲ 1 ಗಂಟೆ 30 ನಿಮಿಷದಲ್ಲಿಯೇ 40 ವಿಷಯಗಳನ್ನು ಚರ್ಚೆ ಮಾಡಿ, ಮುಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.