ADVERTISEMENT

ಮುಖ್ಯಶಿಕ್ಷಕಿ ವರ್ತನೆಗೆ ಗ್ರಾಮಸ್ಥರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:02 IST
Last Updated 4 ಸೆಪ್ಟೆಂಬರ್ 2013, 5:02 IST

ಮಲೇಬೆನ್ನೂರು: ಇಲ್ಲಿನ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಕಾರ್ಯವೈಖರಿ ಸಮರ್ಪಕವಾಗಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬಿಇಒ ಬಿ.ಆರ್. ಬಸವರಾಜಪ್ಪ ವಿಚಾರಣೆ ನಡೆಸಿದರು.

ಮುಖ್ಯಶಿಕ್ಷಕಿ ಶಾಂತಾಬಾಯಿ ಅಧಿಕಾರ ವಹಿಸಿಕೊಂಡ ನಂತರ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ ಎಂದು ಪೋಷಕರು ಹಾಗೂ ಮಕ್ಕಳು ದೂರು ನೀಡುತ್ತಿದ್ದಾರೆ. ಶಾಲೆ ಪ್ರಾರಂಭವಾಗಿ 2 ತಿಂಗಳಾದರೂ ವೇಳಾಪಟ್ಟಿ ರೂಪಿಸಿಲ್ಲ. ಶಿಕ್ಷಕರೊಂದಿಗೆ ಸೌಹಾರ್ದ ಸಂಬಂಧ ಹೊಂದಿಲ್ಲ. ಮುಖ್ಯ ಶಿಕ್ಷಕರು ಈವರೆಗೂ ತರಗತಿ ತೆಗೆದುಕೊಂಡಿಲ್ಲ, ಪ್ರಯೋಗಾಲಯದ ಬಾಗಿಲು ತೆಗೆಸಿಲ್ಲ. ಶೈಕ್ಷಣಿಕವಾಗಿ ಉತ್ತಮವಾಗಿ ಸಾಧನೆ ಮಾಡಿರುವ ಶಾಲೆ ಹೆಸರು ಕೆಡುತ್ತಿದೆ ಎಂದು ಸ್ಥಳೀಯರು ದೂರಿದರು. ನಂತರ, ಮುಖ್ಯಶಿಕ್ಷಕಿ ಶಾಂತಾಬಾಯಿ ಹೇಳಿಕೆ ಹಾಗೂ ಉತ್ತರಕ್ಕೆ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು.

`ನಿಮ್ಮ ಹಿಂದಿನ ಸೇವೆ ವಿವರ ಗೊತ್ತಾಗಿದೆ. ಶಾಲೆಯ ಸಮಸ್ಯೆ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ, ವರ್ತನೆ ತಿದ್ದಿಕೊಂಡು ಸಹೋದ್ಯೋಗಿಗಳ ಮನವೊಲಿಸಿ ಕೆಲಸ ಮಾಡಿಸಿಕೊಳ್ಳಿ' ಎಂದು ತಾಕೀತು ಮಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತಪ್ಪ, ಎಪಿಎಂಸಿ ನಿರ್ದೇಶಕ ಮಂಜುನಾಥ್, ಫೈಜ್‌ಮೊಹ್ಮದ್, ಸೈಫುಲ್ಲಾ, ಅಕ್ಬರ್ ಅಲಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ. ತಿರುಕಪ್ಪ, ಸದಸ್ಯ ಓ.ಜಿ. ಪ್ರಭು ಇದ್ದರು.

ಬಿಇಒ ಪ್ರತಿಕ್ರಿಯೆ: ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆ ಮಾಡಲಾಯಿತು.  ಮುಖ್ಯಶಿಕ್ಷಕರ ವರ್ತನೆ ತಿದ್ದಿಕೊಳ್ಳಲು, ನೂತನ ವೇಳಾಪಟ್ಟಿ ಹಾಗೂ ವಿಷಯವಾರು ಕ್ಲಬ್ ರಚಿಸಲು ತಿಳಿಸಿದ್ದೇನೆ. ವಾರದಲ್ಲಿ ಪ್ರತಿಯೊಬ್ಬ ಶಿಕ್ಷಕ 28 ಅವಧಿ ಬೋಧನೆ ಮಾಡುವುದು ಕಡ್ಡಾಯ. ಇಲ್ಲಿ ಮಕ್ಕಳ ಸಂಖ್ಯೆ, ಸೆಕ್ಷನ್ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ.

ಅನುಸರಿಸಿಕೊಂಡು ಪಾಠ ಮಾಡಲು ಆದೇಶಿಸಿದ್ದೇನೆ. ಆದೇಶ ಪಾಲಿಸದಿದ್ದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಬಿಇಒ ಬಸವರಾಜಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.