ADVERTISEMENT

ಮುಳುಗಿದ ರಸ್ತೆ, ಕೊಚ್ಚಿಹೋದ ಮೋಟರ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 4:47 IST
Last Updated 5 ಜುಲೈ 2013, 4:47 IST

ಮಲೇಬೆನ್ನೂರು: ಸಮೀಪದ ಗಡಿಗ್ರಾಮ ಉಕ್ಕಡಗಾತ್ರಿ ಸಂಪರ್ಕಿಸುವ ರಸ್ತೆ, ಸೇತುವೆ, ತಗ್ಗು ಹಾಗೂ ದಂಡೆಯ ಸೊಪ್ಪಿನ ತೋಟ ಗುರುವಾರ ತುಂಗಭದ್ರಾ ನದಿ ಪ್ರವಾಹದಲ್ಲಿ ಮುಳುಗಿವೆ.

ನದಿ ನೀರಿನ ಸೆಳವಿಗೆ ಮೋಟರ್, ಪ್ಯಾನಲ್‌ಬೋರ್ಡ್, ಕೇಬಲ್ ಕೊಚ್ಚಿ ಕೊಂಡು ಹೋಗಿವೆ. ನದಿದಂಡೆ ಕೊಚ್ಚಿ ಕೊಂಡು ಹೋಗಿದೆ.
ಹಳ್ಳ ಪ್ರದೇಶದ ಅಕ್ಕಪಕ್ಕದ ಮೂಲಂಗಿ, ಹರಿವೆ, ಮೆಂತ್ಯ, ಪಾಲಕ್, ಕೊತ್ತಂಬರಿ ಸೊಪ್ಪಿನ ತೋಟದಲ್ಲಿ ಒಂದು ಆಳು ನೀರು ನಿಂತು ಬೆಳೆ ನಷ್ಟವಾಗಿದೆ ಎಂದು ರೈತರು ತಿಳಿಸಿದರು.

ಸಾಮಾನ್ಯವಾಗಿ ಜುಲೈನಲ್ಲಿ ಪ್ರವಾಹ ಬರುತ್ತಿರಲಿಲ್ಲ. ಈ ಬಾರಿ ಮುಂಚಿತ ವಾಗಿಯೇ ತುಂಗಾ ನದಿಯಲ್ಲಿ ಪ್ರವಾಹ  ಬಂದಿದೆ. ಭದ್ರಾ ನದಿ ನೀರು ಬಂದರೆ ತೊಂದರೆ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು.

ಮುಳುಗಿದ ರಸ್ತೆ: ಫತ್ಯಾಪುರದ ಮೂಲಕ ಉಕ್ಕಡಗಾತ್ರಿ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆ, ಚಿಕ್ಕ ಸೇತುವೆ ಮುಳುಗಿದ ಕಾರಣ ತುಮ್ಮಿನಕಟ್ಟೆ ಮೂಲಕ ಸುತ್ತಿಕೊಂಡು ವಾಹನಗಳು ಚಲಿಸುತ್ತಿವೆ.

ಪ್ರತಿ ಬಾರಿ ಮಳೆಗಾಲದಲ್ಲಿ ಜನರು, ಗ್ರಾಮಕ್ಕೆ ಬರುವ ಭಕ್ತರು, ಪ್ರವಾಸಿಗರು ತೊಂದರೆ ಅನುಭವಿಸಬೇಕಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿ ವೃಂದ ನೀರಿನ ಹರಿವು ಕಡಿಮೆಯಾದನಂತರ ವೀಕ್ಷಣೆ ಮಾಡಿ ರಸ್ತೆ ಸೇತುವೆ ನಿರ್ಮಿಸುವ ಆಶ್ವಾಸನೆ ನೀಡಿ ಹೋಗುತ್ತಾರೆ.

ಇಲ್ಲಿ ಸಾಕಷ್ಟು ವರ್ಷಗಳಿಂದ ಸಮಸ್ಯೆಯಿದೆ. ಜಿಲ್ಲಾಡಳಿತ, ಹರಿಹರ ತಾಲ್ಲೂಕಿನ ಗಡಿ ಆಚೆಗಿನ ಗ್ರಾಮವನ್ನು ನಿರ್ಲಕ್ಷಿಸಿದೆ. ಪ್ರವಾಹ ಮುನ್ಸೂಚನೆ ನೀಡಿಲ್ಲ, ಸೇತುವೆ ಮುಳುಗಡೆ ಕುರಿತು ನಂದಿಗುಡಿ ಬಳಿ ಎಚ್ಚರಿಕೆ ಫಲಕ ಬರೆಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.