ADVERTISEMENT

ಮೂಲಸೌಲಭ್ಯ ಕಲ್ಪಿಸಲು ಆಗ್ರಹ

ಬೀಡಿ ಕಾರ್ಮಿಕರ ಬಡಾವಣೆ ನಿವಾಸಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:53 IST
Last Updated 5 ಸೆಪ್ಟೆಂಬರ್ 2013, 6:53 IST

ದಾವಣಗೆರೆ: ನಗರದ ಬೀಡಿ ಕಾರ್ಮಿಕರ ಬಡಾವಣೆಯಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಅಗ್ರಹಿಸಿ ಅಲ್ಲಿನ ನಿವಾಸಿಗಳು ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

`ಕಾಲೊನಿಯಲ್ಲಿ ನೀರಿಲ್ಲ, ವಿದ್ಯುತ್ ಇಲ್ಲ, ರಸ್ತೆ ಸರಿಯಾಗಿಲ್ಲ. ಮಳೆ ಬಂದಾಗ ರಾಜಕಾಲುವೆಯಿಂದ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ನಗರದಲ್ಲಿದ್ದರೂ ಕಾಡಿನಲ್ಲಿ ಇರುವಂಥ ಸ್ಥಿತಿ ನಮ್ಮದಾಗಿದೆ. ಅನೈರ್ಮಲ್ಯದಿಂದಾಗಿ ಹಲವು ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ' ಎಂದು ಅಳಲು ತೋಡಿಕೊಂಡರು.

`ಬೀಡಿ ಕಾರ್ಮಿಕರ ಹಾಗೂ ಅಮಾನತ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಂ.ರಾಜಾಸಾಬ್ 450ರಿಂದ 500 ಬೀಡಿ ಕಾರ್ಮಿಕರ ಬಳಿ ರೂ 1.50 ಲಕ್ಷದಿಂದ  ರೂ 2 ಲಕ್ಷದವರೆಗೆ ಹಣ ವಸೂಲಿ ಮಾಡಿದ್ದಾರೆ. ಹಣ ಕಟ್ಟಿದವರಿಗೆಲ್ಲಾ ಕ್ವಾರ್ಟಸ್ ಕೊಡಿಸುತ್ತೇನೆ ಎಂದು ಹೇಳಿ, ಮತ್ತೆ ಹಣ ಕೇಳುತ್ತಿದ್ದಾರೆ. ಪ್ರಶ್ನಿಸಲು ಹೋದರೆ, ರೌಡಿಗಳನ್ನು ಕರೆದುಕೊಂಡು ಬಂದು ಹಲ್ಲೆ ನಡೆಸುತ್ತಾರೆ' ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರದೇಶ ಯುವ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಟಿ.ಮಹಮ್ಮದ್ ಗೌಸ್ ಆರೋಪಿಸಿದರು.

ಇಲ್ಲಿ ಈಗಾಗಲೇ ನಿರ್ಮಿಸಿರುವ ಮನೆಗಳ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ. ಆರ್‌ಸಿಸಿಯಿಂದ ನೀರು ಸೋರುತ್ತದೆ. ಕ್ವಾರ್ಟಸ್ ಕೊಡಿಸುವುದಾಗಿ ಹೇಳಿ, ಹಲವರಿಂದ 8ರಿಂದ 10 ವರ್ಷಗಳಿಂದ ಹಣ ಪಡೆದು ಯಾವುದೇ ಮನೆ ಕೊಟ್ಟಿಲ್ಲ ಎಂದು ದೂರಿದರು.

ಬೀಡಿ ಕಾರ್ಮಿಕರಿಗೆ ನ್ಯಾಯ ದೊರಕಿಸಬೇಕು. ಹಣ ಕಟ್ಟಿರುವವರಿಗೆ ಕ್ವಾರ್ಟಸ್ ಕೊಡಿಸಬೇಕು. ರಾಜಾಸಾಬ್ ನೇತೃತ್ವದ ಸಹಕಾರ ಸಂಘ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸಂಬಂಧಿಸಿದ ಅಧಿಕಾರಿಗಳು 15ರಿಂದ 20 ದಿನಗಳ ಒಳಗೆ ಸಮಸ್ಯೆ ನಿವಾರಣೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಅಲ್ಲಿನ ನಿವಾಸಿಗಳೆಲ್ಲಾ ಜಿಲ್ಲಾಧಿಕಾರಿ ನಿವಾಸದ ಬಳಿ ಬಂದು ವಾಸಿಸಬೇಕಾಗುತ್ತದೆ; ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕೆ.ಸಿ.ನಾಗರಾಜ್, ಅಮಾನುಲ್ಲಾ, ಸಿದ್ದನಗೌಡ, ಖಲೀಲ್ ಅಹಮದ್, ಸನಾವುಲ್ಲಾ, ಶಫಿವುಲ್ಲಾ, ಕೆ.ಬಿ.ರವಿಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.