ADVERTISEMENT

ಮೆಕ್ಕೆಜೋಳ ಚೀಲಗಳಲ್ಲಿ ಬರೀ ಕಸಕಡ್ಡಿ!

ಚನ್ನಗಿರಿ ಎಪಿಎಂಸಿ ಕರಾಮತ್ತು: ವಶಕ್ಕೆ ಪಡೆಯಲು ಸಿಬ್ಬಂದಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:47 IST
Last Updated 21 ಡಿಸೆಂಬರ್ 2013, 9:47 IST

ಬಸವಾಪಟ್ಟಣ:  ಸಾಗರಪೇಟೆಯ ರಾಜ್ಯ ಉಗ್ರಾಣ ನಿಗಮದ ಉಗ್ರಾಣಕ್ಕೆ ಚನ್ನಗಿರಿ ಎಪಿಎಂಸಿಯಿಂದ ತರಲಾಗಿದ್ದ 350 ಕ್ವಿಂಟಲ್‌ ಮೆಕ್ಕಜೋಳ ತುಂಬಾ ಕಸಕಡ್ಡಿ ತುಂಬಿದ್ದು, ಅದನ್ನು ಸಂಗ್ರಹಿಸಿಡಲು ಉಗ್ರಾಣದ ಅಧಿಕಾರಿಗಳು ನಿರಾಕರಿಸಿದ ಘಟನೆ ಶುಕ್ರವಾರ ನಡೆಯಿತು.

‘ಚನ್ನಗಿರಿಯಲ್ಲಿ ರೈತರಿಂದ ಖರೀದಿಸಲಾದ ಮೆಕ್ಕೆಜೋಳವನ್ನು ಸಾಗರಪೇಟೆಯ ರಾಜ್ಯ ಉಗ್ರಾಣ ನಿಗಮದ ಬೃಹತ್‌ ಉಗ್ರಾಣದಲ್ಲಿ ಸಂಗ್ರಹಿಸಲಾಗುತ್ತಿದೆ.

ಆದರೆ, ಇತ್ತೀಚೆಗೆ ಕಸ ಕಡ್ಡಿ, ಕಲ್ಲು ಮಣ್ಣುಗಳಿಂದ ಕೂಡಿದ ಕಲ್ಮಶ ಮೆಕ್ಕೆಜೋಳದ ಸಂಗ್ರಹವನ್ನು  ನಮ್ಮ ಉಗ್ರಾಣಕ್ಕೆ ತರಲಾಗುತ್ತಿದ್ದು, ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಇಂದು ಎರಡು ಲಾರಿಗಳಲ್ಲಿ ತರಲಾಗಿದ್ದ 350 ಕ್ವಿಂಟಲ್‌ ಮೆಕ್ಕೆಜೋಳವನ್ನು ಪರೀಕ್ಷಿಸಿದಾಗ ಅದರಲ್ಲಿ ಹೇರಳವಾಗಿ ಸುಟ್ಟು ಕರಕಲಾಗಿದ್ದ ಮತ್ತು ತುಂಬಾ ಕಸಕಡ್ಡಿಗಳಿಂದ ಕೂಡಿದ ಚೀಲಗಳು ಬಂದಿವೆ. ಒಂದುವೇಳೆ ನಾವು ಈಬಗ್ಗೆ ಪರಿಶೀಲನೆ ಮಾಡದೇ ಸಂಗ್ರಹಿಸಿದರೆ, ಅದರ ನಷ್ಟವೆಲ್ಲವೂ ಬಡಪಾಯಿಗಳಾದ ನಮ್ಮ ಮೇಲೆ ಬರುತ್ತದೆ.

  350 ಕ್ವಿಂಟಲ್‌ಗೆ ಸುಮಾರು ₨ 4.5 ಲಕ್ಷ ಬೆಲೆ ಇದ್ದು, ಇಂತಹ ಧಾನ್ಯಗಳ ಸಂಗ್ರಹ ಅಸಾಧ್ಯವಾಗಿದೆ. ಆದ್ದರಿಂದ ಈಲಾರಿಗಳಲ್ಲಿ ಬಂದಿರುವ ಚೀಲಗಳನ್ನು ಇಳಿಸಿಕೊಂಡಿಲ್ಲ’ ಎಂದು ಉಗ್ರಾಣದ ಮೇಲ್ವಿಚಾರಕ ಕೆ.ಎಂ.ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಈ ದಿನ ಬಂದಿರುವ ಮೆಕ್ಕೆಜೋಳದ ಗುಣಮಟ್ಟ ತುಂಬಾ ಕಡಿಮೆ ಇದ್ದು ತೇವಾಂಶವೂ ಹೆಚ್ಚಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ವಿ.ಜಿ.ಕೇಶವ ಮೂರ್ತಿನಾಯ್ಕ ತಿಳಿಸಿದರು. ನಮ್ಮ ಉಗ್ರಾಣಕ್ಕೆ ಪ್ರತಿದಿನ ಸಾವಿರಾರು ಕ್ವಿಂಟಲ್‌ ಮೆಕ್ಕಜೋಳ ಬರುತ್ತಿದ್ದು, ಪ್ರತಿಯೊಂದು ಚೀಲವನ್ನೂ ಪರೀಕ್ಷಿಸಿ ನೋಡಬೇಕಾದ ತೊಂದರೆ   ಎದುರಾಗಿದೆ ಎನ್ನುತ್ತಾರೆ ನೌಕರ ಎಂ.ಎಚ್‌.ಸ್ವಾಮಿ.
ಕಣಿವೆಬಿಳಚಿಯ ಮಂಜುನಾಥ ಜಾದವ್‌, ನಾಗರಾಜ ಸ್ವಾಮಿ ಸ್ಥಳದಲ್ಲಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.