ADVERTISEMENT

ಮೊದಲನೇ ಸ್ಥಾನ ಘೋಷಿಸಲು ಮೀನಮೇಷ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೌಲ್ಯಮಾಪಕರ ಅಚಾತುರ್ಯ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೇಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 11:02 IST
Last Updated 1 ಆಗಸ್ಟ್ 2013, 11:02 IST
ಪ್ರೇರಣಾ
ಪ್ರೇರಣಾ   

ಶಿವಮೊಗ್ಗ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಹಂಚಿಕೊಂಡ ಮೂವರಲ್ಲಿ ಶಿವಮೊಗ್ಗ ನಗರದ ಆದಿಚುಂಚನಗಿರಿ ಸಂಯುಕ್ತ ಆಂಗ್ಲಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಆರ್.ಪ್ರೇರಣಾ ಕೂಡ ಒಬ್ಬಳು.  

ಒಟ್ಟು 625 ಅಂಕಗಳಿಗೆ 621 ಅಂಕ ಪಡೆದ ಪ್ರೇರಣಾ, ಈಗ ಹೆಚ್ಚುವರಿ 2 ಅಂಕ ಪಡೆದಿದ್ದು ಬಹಿರಂಗಗೊಂಡಿದ್ದರೂ ಒಂದನೇ ಸ್ಥಾನ ಘೋಷಿಸುವುದಕ್ಕೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮೀನಮೇಷ ಎಣಿಸುತ್ತಿದೆ.

ವಿಜ್ಞಾನ ಉತ್ತರಪತ್ರಿಕೆಯ ಭೌತಶಾಸ್ತ್ರದ ಹೊಂದಿಸಿ ಬರೆಯಿರಿ ಪ್ರಶ್ನೆಗೆ ಉತ್ತರಗಳನ್ನು ಸರಿಯಾಗಿ ಬರೆದಿದ್ದರೂ ತಪ್ಪು ಹಾಕಿ ಎರಡು ಅಂಕಗಳನ್ನು ಕಳೆದಿರುವುದು ಉತ್ತರಪತ್ರಿಕೆಯ ಫೋಟೊ ಪ್ರತಿಯಲ್ಲಿ ಕಂಡು ಬಂದಿದೆ. ಆದರೆ, ಮರು ಮೌಲ್ಯಮಾಪನಕ್ಕೆ ಹಾಕಿದಾಗ ತಾವು ನೀಡಿದ ಅಂಕವೇ ಸರಿ ಎಂಬ ಉತ್ತರವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೀಡಿದೆ ಎಂದು ಪ್ರೇರಣಾ ಪೋಷಕರು ಆರೋಪಿಸಿದ್ದಾರೆ.

ರಾಜ್ಯಕ್ಕೆ ಮೊದಲ ಸ್ಥಾನ ಪಡೆದವರ ಅಂಕ 622. ಪ್ರೇರಣಾಗಳಿಗೆ ಸಂಸ್ಕೃತದಲ್ಲಿ 125, ಇಂಗ್ಲಿಷ್ 100, ಕನ್ನಡ 99, ಗಣಿತ 100, ವಿಜ್ಞಾನ 98 ಹಾಗೂ ಸಮಾಜ ವಿಜ್ಞಾನದಲ್ಲಿ 99 ಅಂಕಗಳು ಬಂದಿದ್ದವು. ವಿಜ್ಞಾನದಲ್ಲಿ 100ಕ್ಕೆ 100 ಅಂಕ ನಿರೀಕ್ಷಿಸಿದ್ದ ಪ್ರೇರಣಾಗಳಿಗೆ ಅನುಮಾನ ಇದ್ದೇ ಇತ್ತು. ಹಾಗಾಗಿ ವಿಜ್ಞಾನ ಉತ್ತರಪತ್ರಿಕೆಯ ಫೋಟೊ ಪ್ರತಿ ತರಿಸಿಕೊಳ್ಳಲಾಯಿತು. ಅದರಲ್ಲಿ ಭೌತವಿಜ್ಞಾನದ ಹೊಂದಿಸಿ ಬರೆಯುವುದರಲ್ಲಿ ಒಂದು ಅಂಕದ ಪ್ರಶ್ನೆಗಳಿರುವ ನಾಲ್ಕಕ್ಕೇ ನಾಲ್ಕೂ ಉತ್ತರ ಸರಿ ಇದ್ದರೂ ಮೌಲ್ಯಮಾಪಕರು ಮಾತ್ರ ಎರಡು ಉತ್ತರಗಳನ್ನು ತಪ್ಪು ಎಂದು ಕಾಟು ಹಾಕಿ, ಕೇವಲ 2 ಅಂಕ ನೀಡಿದ್ದಾರೆ. ಇದರಿಂದಾಗಿ ನೂರಕ್ಕೆ ನೂರು ಅಂಕ ಬರುವಲ್ಲಿ ಪ್ರೇರಣಾಳಿಗೆ 98 ಅಂಕ ಬಂದಿವೆ.

ವಿಜ್ಞಾನ ಉತ್ತರಪತ್ರಿಕೆಯ ಫೋಟೊ ಪ್ರತಿ ನೋಡಿದ ತಕ್ಷಣ ವಿಜ್ಞಾನ ಉತ್ತ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಲಾಯಿತು. ಆದರೆ,  ಪರೀಕ್ಷಾ ಮಂಡಳಿಯಿಂದ ಬಂದಿದ್ದು ಈ ಹಿಂದೆ ಮೌಲ್ಯಮಾಪನ ಮಾಡಿದ್ದೇ ಸರಿ ಎಂಬ ಉತ್ತರ.

`ನನ್ನ ಮಗಳು ಪ್ರಥಮ ಸ್ಥಾನದಲ್ಲಿ ಬರಬೇಕು ಎಂದೇನೂ ಹಟ ಇಲ್ಲ. ಆದರೆ, ದಾಖಲೆ ಇದ್ದರೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಾನು ಮಾಡಿದ್ದೇ ಸರಿ ಎಂದು ಉತ್ತರ ಬರೆದಿರುವುದು ಬೇಸರ ತಂದಿದೆ. ನಾವೇನು ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವುದಿಲ್ಲ. ನಮ್ಮ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ ಕೋ-ಆಪರೇಟಿವ್ ಸೊಸೈಟಿ ಯೊಂದರಲ್ಲಿ ಪಿಗ್ಮಿ ಸಂಗ್ರಹಕಾರರಾದ ಪ್ರೇರಣಾಳ ತಂದೆ ಎಂ.ವಿ.ರವೀಂದ್ರ.    

`ಪ್ರೇರಣಾಳ ವಿಜ್ಞಾನ ಉತ್ತರಪತ್ರಿಕೆಯನ್ನು ಮೂರು ಜನ ವಿಷಯ ತಜ್ಞರ ಬಳಿ ಶಾಲೆಯಿಂದ ಮರು ಮೌಲ್ಯಮಾಪನ ಮಾಡಿಸಲಾಯಿತು. ಹೊಂದಿಸಿ ಬರೆಯಿರಿ ಪ್ರಶ್ನೆಗಳಲ್ಲಿ ನಾಲ್ಕಕ್ಕೇ ನಾಲ್ಕೂ ಸರಿ ಉತ್ತರ ಇವೆ ಎಂದೇ ಎಲ್ಲರೂ ಅಭಿಪ್ರಾಯಪಟ್ಟರು. ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ದೂರವಾಣಿ ಕರೆ ಮಾಡಿಯೂ ಗಮನಕ್ಕೆ ತರಲಾಯಿತು. ಆ ಕಡೆಯಿಂದ, ನಮ್ಮ ಕಮಿಟಿ ತೀರ್ಮಾನ ಮಾಡಿದ ಮೇಲೆ ಮುಗಿಯಿತು ಎಂಬ ಉತ್ತರ ಬಂತು. ಇದು ಬೇಸರ ತಂದಿದೆ' ಎನ್ನುತ್ತಾರೆ ಪ್ರೇರಣಾ ಓದಿದ ಆದಿಚುಂಚನಗಿರಿ ಸಂಯುಕ್ತ ಆಂಗ್ಲಪ್ರೌಢಶಾಲೆಯ ಪ್ರಾಂಶುಪಾಲರಾದ ನಂದಾ.

`ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ ನಿರೀಕ್ಷೆ ಮಾಡಿದ್ದೆ. ಎರಡು ಅಂಕ ಕಳೆದಿರುವುದು ಬೇಸರ ತಂದಿದೆ' ಎಂಬ ನೋವಿನ ನುಡಿ ಎಂ.ಆರ್.ಪ್ರೇರಣಾಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.