ADVERTISEMENT

ರಸ್ತೆ ಅಭಿವೃದ್ಧಿಗೆ ₹ 600 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 9:40 IST
Last Updated 16 ಸೆಪ್ಟೆಂಬರ್ 2017, 9:40 IST

ಮಾಯಕೊಂಡ: ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹ 40 ಕೋಟಿ ಸೇರಿ ವಿವಿಧ ಯೋಜನೆಯಡಿ ₹ 600 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ’ ಎಂದು ಶಾಸಕ ಕೆ. ಶಿವಮೂರ್ತಿ ಮಾಹಿತಿ ನೀಡಿದರು. ಇಲ್ಲಿನ ಉಪ್ಪಾರಹಟ್ಟಿಯಲ್ಲಿ ಈಚೆಗೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

₹ 40 ಕೋಟಿ ವೆಚ್ಚದಲ್ಲಿ ಗಂಗನಕಟ್ಟೆಯ ಪಿಸ್ಸಾರಹಟ್ಟಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ, ಬಾಡಾ– ಸಂತೇಬೆನ್ನೂರು ರಸ್ತೆಯಿಂದ ಕಂದಗಲ್ಲು, ನಲ್ಕುದರೆ ಗೋಮಾಳ ಮಾರ್ಗ ತ್ಯಾವಣಿಗೆವರೆಗೆ, ಶ್ಯಾಗಲೆ ಯಿಂದ ಶ್ಯಾಗಲೆ ಕ್ಯಾಂಪ್ ವರೆಗೆ ಪಿಎಂಜಿಎಸ್ ವೈ ಯೋಜನೆಯಡಿ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು.

ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ನ್ಯಾಯಾಲಯದ ತಡೆಯಾಜ್ಞೆ ಯಿದ್ದು, ಶೀಘ್ರ ತೆರವುಗೊಳ್ಳಲಿದೆ. ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಆರಂಭಗೊಂಡಿದ್ದೇ ಮಾಯಕೊಂಡ ಕ್ಷೇತ್ರದಿಂದ. ದೊಡ್ಡ ಗಾತ್ರದ ಯಂತ್ರ ಮತ್ತು ಪೈಪ್ ಲೈನ್ ಅಳವಡಿಸಿ, ಬ್ಯಾರೇಜ್ ನಿರ್ಮಿಸಿ ಕೆರೆ, ಚೆಕ್ ಡ್ಯಾಂಗಳಿಗೂ ನೀರು ಹರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ADVERTISEMENT

ದೇವರಾಜ್ ಅರಸು ಉಳುವವನೇ ನೆಲದೊಡೆಯ ಎಂಬ ಕಾಯ್ದೆ ತಂದು ರೈತರ ಹಿತಕಾಯ್ದರು. ರಾಜ್ಯ ಸರ್ಕಾರ ವಾಸಿಸುವವನಿಗೇ ನೆಲದ ಹಕ್ಕು ನೀಡುತ್ತಿದೆ. ಭೂಸುಧಾರಣೆ ತಿದ್ದಪಡಿ ಮಸೂದೆ ಅಂಗೀಕಾರ ವಾಗದಂತೆ ಭೂಮಾಲೀಕರು, ಪಕ್ಷದ ಹೊರಗಿನ, ಒಳಗಿನ ಶಕ್ತಿಗಳು ತಡೆಯುತ್ತಿವೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ. ಆರ್. ಲಕ್ಷ್ಮಣ, ಸದಸ್ಯರಾದ ರಾಜಶೇಖರ ಸಂಡೂರು, ಗಂಗಾಧರಪ್ಪ, ರುದ್ರೇಶ್, ಮಲ್ಲಿಕಾರ್ಜುನಪ್ಪ, ಪರುಶುರಾಂ, ಪಿಡಿಒ ನಾಗರಾಜ, ಮುಖಂಡರಾದ ಗೋಪಾಲ್, ಪರಮೇಶ್ವರಪ್ಪ, ಬಸವರಾಜಪ್ಪ, ಜೆಡಿಎಸ್ ಮುಖಂಡ ಬಿ.ಸಿ. ಬಸವರಾಜಪ್ಪ, ಚಾಟಿ ಹನುಮಂತಪ್ಪ, ಕನ್ನಡ ಯುವಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ರವಿ ಗ್ರಾಮದ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.