ADVERTISEMENT

ರಸ್ತೆ ತುಂಬೆಲ್ಲ ತಗ್ಗು ಗುಂಡಿಗಳು!

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 9:10 IST
Last Updated 11 ಏಪ್ರಿಲ್ 2011, 9:10 IST

ಹುಬ್ಬಳ್ಳಿ: ‘ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸಲಹೆ ನೀಡಿದರು.ರಾಜ್ಯ ಎಸ್‌ಸಿ/ಎಸ್‌ಟಿ ಪ್ರಾಥಮಿಕ ಶಿಕ್ಷಕರ-ನೌಕರರ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಗರದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಎಸ್‌ಸಿ/ಎಸ್‌ಟಿ ಪ್ರಾಥಮಿಕ ಶಿಕ್ಷಕರ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಪರಿವರ್ತನೆ ತರುವ ವೃತ್ತಿ ಶಿಕ್ಷಕರದು. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕಿದೆ. ಸಾಂಸ್ಕೃತಿಕವಾಗಿ ಹಾಗೂ ವೈಚಾರಿಕವಾಗಿ ಬೆಳೆಯಲು ವಿದ್ಯಾರ್ಥಿಗಳನ್ನು ರೂಪಿಸಿ. ಉತ್ತಮ ಸೇವೆ ಸಲ್ಲಿಸಿ ಜೊತೆಗೆ ಹಕ್ಕುಗಳನ್ನೂ ಕೇಳಿರಿ’ ಎಂದು ಅವರು ಕಿವಿಮಾತು ಹೇಳಿದರು.

‘ಸಮಾಜದ ಹಿತಾಸಕ್ತಿಗೆ ಸಂಘಟನೆ ಮೂಲಕ ಬೇಡಿಕೆ ಈಡೇರಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಶಿಕ್ಷಕರ ಸಮಾವೇಶ ಹಮ್ಮಿಕೊಂಡಿದ್ದೀರಿ. ಸಂಘಟನೆ ಇದ್ದರೆ ಸರ್ಕಾರ ಎಚ್ಚರಿಸಲು ಸಾಧ್ಯವಾಗುತ್ತದೆ. ಮೀಸಲಾತಿಗೆ ತೆಗೆದಿರಿಸಿದ ದುಡ್ಡು ಸದುಪಯೋಗವಾಗಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೆ ಅನುದಾನ ಬಿಡುಗಡೆಗೆ ಅನುಕೂಲವಾಗುತ್ತದೆ’ ಎಂದರು.
‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮೀಸಲಾತಿ ಕೊಡದೆ ಚುನಾವಣೆ ನಡೆಯುತ್ತಿದೆ. ಇದನ್ನು ಸರಿಪಡಿಸಲಾಗುತ್ತದೆ. ಜೊತೆಗೆ ಪ್ರಶಸ್ತಿ ನೀಡುವಲ್ಲಿ ತಾರತಮ್ಯ ಆಗುತ್ತಿದೆ. ಈ ತಾರತಮ್ಯ ಹೋಗಲಾಡಿಸುವೆ. ನ್ಯಾಯಯುತ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳೊಂದಿಗೆ, ಸಂಬಂಧಿಸಿದ ಸಚಿವರೊಂದಿಗೆ ಹಾಗೂ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವೆ’ ಎಂದು ಅವರು ಭರವಸೆ ನೀಡಿದರು.

‘ಧಾರವಾಡ ಜಿಲ್ಲಾ ಘಟಕದ ಎಸ್‌ಸಿ/ಎಸ್‌ಟಿ ಪ್ರಾಥಮಿಕ ಶಿಕ್ಷಕರ-ನೌಕರರ ಸಂಘಕ್ಕೆ ಹುಬ್ಬಳ್ಳಿಯಲ್ಲಿ ನಿವೇಶನ ಕೇಳಿದ್ದೀರಿ. ಅನುಕೂಲವಾದ ಜಾಗ ಸಿಕ್ಕರೆ ಖಂಡಿತ ಕೊಡಿಸುವೆ’ ಎಂದು  ಆಶ್ವಾಸನೆ ನೀಡಿದರು.ಮುಖ್ಯ ಅತಿಥಿಗಳಾಗಿ ಗಡಿ ಅಭಿವೃದ್ಧಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ಡಿಡಿಪಿಐ ಭಾಸ್ಕರ ವಿಷ್ಣು ಭಟ್, ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಎಸ್.ಡಿ. ನೀಲಣ್ಣವರ, ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ, ಕ.ರಾ.ಸ.ಸೌ.ಸಂಘದ ರಾಜ್ಯ ಪರಿಷತ್ ಸದಸ್ಯ ಟಿ.ಆರ್. ಶಿರೋಳ ಮೊದಲಾದವರು ಹಾಜರಿದ್ದರು. ಶಾಸಕ ವೀರಭದ್ರಪ್ಪ ಹಾಲಹರವಿ ಅಧ್ಯಕ್ಷತೆ ವಹಿಸಿದ್ದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಮೋಹನ ನಾಗಮ್ಮನವರ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಸಿ/ಎಸ್‌ಟಿ ಪ್ರಾ.ಶಿ.ನೌ.ಕ್ಷೇ.ಸಂಘದ ಅಧ್ಯಕ್ಷ ವಿ.ಟಿ. ವೆಂಕಟೇಶಯ್ಯ, ‘ಎಸ್‌ಸಿ/ಎಸ್‌ಟಿ ಪ್ರಾಥಮಿಕ ಶಿಕ್ಷಕರ ರಾಜ್ಯಮಟ್ಟದ ಸಮಾವೇಶವನ್ನು ಬೆಂಗಳೂರಿನಲ್ಲಿ ಸೆಪ್ಟೆಂಬರ್ 25ರಂದು ಏರ್ಪಡಿಸಲಾಗುತ್ತದೆ. ಸಮಾವೇಶದಲ್ಲಿ ಪ್ರತಿ ಜಿಲ್ಲೆಯ ಒಬ್ಬರನ್ನು ಉತ್ತಮ ಶಿಕ್ಷಕರೆಂದು ಆಯ್ಕೆಗೊಳಿಸಿ ರೂ. 10 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಮುಂದಿನ ವರ್ಷದಿಂದ ಇಬ್ಬರನ್ನು ಆಯ್ಕೆ ಮಾಡಿ ರೂ. 25 ಸಾವಿರ ನಗದು ಬಹುಮಾನ ಕೊಡಲಾಗುತ್ತದೆ’ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಎಸ್‌ಸಿ/ಎಸ್‌ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ. ಕುಂದರಗಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.