ADVERTISEMENT

ರಾಜೀವ್ ಗಾಂಧಿ ಸಬ್‌ಮಿಷನ್ ಯೋಜನೆ ವಿಫಲ

ನಿರ್ಮಾಣಗೊಳ್ಳದ ಪ್ರತ್ಯೇಕ ಜಲ ಸಂಗ್ರಹಗಾರ; 18 ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2013, 5:54 IST
Last Updated 23 ಜನವರಿ 2013, 5:54 IST
ಮಾಯಕೊಂಡ ಹೋಬಳಿಯ ಹೊಸಕೆರೆ ಕೊರತೆಯಿಂದ ಕೆರೆ ಬರಿದಾಗಿರುವ ದೃಶ್ಯ.
ಮಾಯಕೊಂಡ ಹೋಬಳಿಯ ಹೊಸಕೆರೆ ಕೊರತೆಯಿಂದ ಕೆರೆ ಬರಿದಾಗಿರುವ ದೃಶ್ಯ.   

ಮಾಯಕೊಂಡ: ಸಮೀಪದ ಹೊಸಕೆರೆಯಲ್ಲಿ ರೂ 14ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾದ 18 ಹಳ್ಳಿಗಳಿಗೆ ಶುದ್ಧೀಕರಿಸಿದ ನೀರು ಒದಗಿಸುವ ರಾಜೀವ್ ಗಾಂಧಿ ಸಬ್‌ಮಿಷನ್ ಯೋಜನೆ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಯೋಜನೆಯ ಘಟಕ  ಕಾರ್ಯಾರಂಭ ಮಾಡಿ 3ವರ್ಷ ಕಳೆದಿವೆ. ಕೆರೆಯಲ್ಲಿ ನೀರು  ಸಂಗ್ರಹಿಸಲು ಸಾಧ್ಯವಿಲ್ಲದ ಕಾರಣ ಭದ್ರಾ ನಾಲೆಯ ನೀರನ್ನು ನಿಲುಗಡೆ ಮಾಡಿದಾಗ ಕುಡಿಯುವ ನೀರು ಒದಗಿಸಲಾಗದ ಸ್ಥಿತಿ ಉಂಟಾಗಿದೆ. ನಿರ್ವಹಣೆಗೆ ಇದುವರೆಗೂ ಟೆಂಡರ್ ಕರೆಯದೇ ಕಾಲತಳ್ಳಲಾಗಿದೆ. ಫ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿರುವ ಹೋಬಳಿಯ ಜನರಿಗೆ ಕನಿಷ್ಠ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. 

ನೀರು ನಿಲ್ಲದ ಕೆರೆ
ಈ ಹಿಂದೆ ಕೆರೆಯಲ್ಲಿ ತುಂಬಿದ ಮಳೆ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಿ ಖಾಲಿ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೂ ಸಾಕಷ್ಟು ನೀರು ಸಂಗ್ರಹವಾಗಿಲ್ಲ. 12 ಇಂಚು ವ್ಯಾಸದ ಕೊಳವೆಯಲ್ಲಿ ನೀರು ಸರಬರಾಜಾಗಬೇಕಿದ್ದು, ಕೇವಲ 5-6 ಇಂಚಿನಷ್ಟು ಮಾತ್ರ ನೀರು ಮಾತ್ರ  ಕೆರೆಗೆ ಸರಬರಾಜಾಗುತ್ತಿದೆ. ಕೆರೆಯಲ್ಲಿ ಹೂಳು ತುಂಬಿದ್ದು ಒಂದೆಡೆಯಾದರೆ, ಭದ್ರಾ ನಾಲೆಯಿಂದ ಹರಿದು ಬಂದ ನೀರು ಜಾಕ್‌ವೆಲ್ ಕಡೆಗೂ ಸಾಗದೇ ಹಿಂದಕ್ಕೆ ಸಾಗಿ ವ್ಯರ್ಥವಾಗುತ್ತಿದೆ. ಇದನ್ನು ಸರಿಪಡಿಸಲು  ಪ್ರಯತ್ನ ನಡೆಯುತ್ತಿಲ್ಲ. ಭದ್ರಾ ನಾಲೆಯಲ್ಲಿ ನೀರು ಹರಿಯುವಾಗ ಮಾತ್ರ ಬಹುಗ್ರಾಮಗಳಿಗೆ ನೀರು ಎನ್ನುವ ಸ್ಥಿತಿ ಇದೆ. ಕನಿಷ್ಠ ತಿಂಗಳಿಗೆ ಸಾಕಾಗುವಷ್ಟು ನೀರನ್ನಾದರೂ ಸಂಗ್ರಹಿಸಲಾಗುತ್ತಿಲ್ಲ. ಯೋಜನೆಯ ಹಣ ಪೋಲಾದರೂ ಯಾರೂ ಕೇಳುವವರಿಲ್ಲದಾಗಿದೆ ಎಂದು ಗ್ರಾಮದ ಮುಖಂಡ ದಾಸರ ಗಂಗಾಧರಪ್ಪ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ಬೀರಗೊಂಡ್ರ ಹನುಮಂತಪ್ಪ ಅಕ್ರೋಶ ವ್ಯಕ್ತಪಡಿಸುತ್ತಾರೆ.  

ನಿರ್ವಹಣೆಯನ್ನು ಕಾಮಗಾರಿ ಮಾಡಿದ ಗುತ್ತಿಗೆದಾರರಿಗೇ ವಹಿಸಿದ್ದು, ಅನುದಾನ ದೊರೆಯದ ಕಾರಣ ಸೂಕ್ತ ನಿರ್ವಹಣೆ ಇಲ್ಲವಾಗಿದೆ. ಜಾಕ್‌ವೆಲ್ ಕಡೆ ಹರಿಸುವ ನೆಪದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆಸಿ ಹಣ ಪೋಲು ಮಾಡಲಾಯಿತೇ ಹೊರತು ನೀರು ನಿಲ್ಲಿಸಲಾಗಲಿಲ್ಲ. ಪ್ರತ್ಯೇಕ ಜಲ ಸಂಗ್ರಹಗಾರ ನಿರ್ಮಿಸಲು ರೂ 1.35 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕರು ಭರವಸೆ ನೀಡಿದ್ದೂ, ಈಡೇರಿಲ್ಲ. ಪ್ರತಿವರ್ಷ ಬತ್ತದ ಬೆಳೆ ಕೊಯ್ಲಿಗಾಗಿ ಭದ್ರಾ ನೀರನ್ನು ನಿಲ್ಲಿಸಿದಾಗ 2 ತಿಂಗಳು ಗ್ರಾಮಗಳಿಗೆ ನೀರಿನ ಬವಣೆಯುಂಟಾಗುತ್ತದೆ. ಆಗ ಪೂರೈಸುವ  ಅಶುದ್ಧ ನೀರು ಬಳಕೆಯಿಂದಾಗಿ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕಾಳಜಿ ಇಲ್ಲ.

ಅಧಿಕಾರಿಗಳು ಕೆರೆಯ ನೀರು ಬಸಿದು ಹೋಗುತ್ತಿದೆ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಶೀಘ್ರ ಕಾಯಕಲ್ಪ ಕಲ್ಪಿಸದಿದ್ದರೆ ಹೋರಾಟ ಹಮ್ಮಿಕೊಳ್ಳುತ್ತೇವೆ ಎನ್ನುತ್ತಾರೆ ಜೆಡಿಎಸ್ ಮುಖಂಡರಾದ ಸಿ.ಕೆ. ಚಂದ್ರಪ್ಪ, ಎಚ್. ನಾಗರಾಜಪ್ಪ, ಎಂ.ಜಿ. ಮಾಲತೇಶ್, ರಾಘವೇಂದ್ರ ಸ್ವಾಮಿ, ರಮೇಶ್, ಮಹಮದ್ ಉಮ್ಮರ್ ಮತ್ತು ಪೋಸ್ಟ್ ಚಂದ್ರಪ್ಪ. 

ರಾಜ್ಯ ಸರ್ಕಾರಕ್ಕೆ ಪ್ರತ್ಯೇಕ ಜಲ ಸಂಗ್ರಹಗಾರ ನಿರ್ಮಿಸಲು ರೂ 1.75 ಕೋಟಿ ಮತ್ತು  ನಿರ್ವಹಣೆಗೂ ಕೂಡಾ  ಟೆಂಡರ್ ಕರೆಯಲು ಅನುಮತಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ  ಎನ್ನುತ್ತಾರೆ  ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್. ನಾಗರಾಜ್.

ಹಣ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಿದ ಕಡತ ಸರ್ಕಾರದ ಪರಿಶೀಲನೆಯಲ್ಲಿದ್ದು, ಶೀಘ್ರ ಹಣ ಮಂಜೂರು ಮಾಡಿಸಿ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ ಶಾಸಕ ಎಂ. ಬಸವರಾಜ ನಾಯ್ಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.