ADVERTISEMENT

ರಾಜ್ಯದ ಗೌರವ ರಕ್ಷಣೆಗೆ ಪಕ್ಷ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 7:08 IST
Last Updated 23 ಏಪ್ರಿಲ್ 2013, 7:08 IST

ಮಾಯಕೊಂಡ: ಬಿಜೆಪಿಯಿಂದ ಹಾಳಾದ ರಾಜ್ಯದ ಗೌರವ ರಕ್ಷಿಸಲು ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ಇಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ 5 ವರ್ಷಗಳಲ್ಲಿ ಇತಿಹಾಸ ಕಂಡರಿಯದ ಅತ್ಯಂತ ಭ್ರಷ್ಟ ಸರ್ಕಾರ ನಡೆಸಿತು. ಸ್ವತಃ ಮುಖ್ಯಮಂತ್ರಿಯೇ 24 ದಿನ ಜೈಲುವಾಸ ಅನುಭವಿಸಿದರು. ಅನೇಕ ಮಂತ್ರಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ರಾಮಚಂದ್ರೇಗೌಡ, ಹರತಾಳು ಹಾಲಪ್ಪ, ಕೃಷ್ಣಯ್ಯ ಶೆಟ್ಟಿ ಮುಂತಾದವರು ಮಂತ್ರಿಗಿರಿ ಕಳೆದುಕೊಂಡರು. ಸೋಮಶೇಖರ ರೆಡ್ಡಿ ನ್ಯಾಯಧೀಶರಿಗೇ ಲಂಚ ನೀಡಲು ಹೋಗಿದ್ದರು. ಸಿ. ಸಿ.ಪಾಟೀಲ್, ಲಕ್ಷ್ಮಣ ಸವದಿ ಸದನದಲ್ಲಿ ಬ್ಲೂ ಫಿಲಂ ನೋಡಿ ಮಂತ್ರಿ ಸ್ಥಾನ ಕಳೆದುಕೊಂಡರು. ಹೀಗೆ ಇಡೀ ರಾಜ್ಯದ ಗೌರವ ಕಳೆದು ಅಕ್ರಮ ಆಸ್ತಿ ಸಂಪಾದಿಸಿದರು ಎಂದು ಸ್ಮರಿಸಿದರು.

ಜೆಡಿಎಸ್ ತಂದೆ ಮಕ್ಕಳ ಪಕ್ಷ. ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಇವರಿಗೆ ಅಧಿಕಾರ ನೀಡದಿರಿ. ರಾಜ್ಯದ ಎಲ್ಲ ಜನಾಂಗಗಳ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿರಿ. ಡಾ.ವೈ. ರಾಮಪ್ಪ ಅವರಿಗೆ ಪಕ್ಷದ ಬಿ-ಫಾರಂ ನಿಡಿಲ್ಲ, ಅವರು ಅಧಿಕೃತ ಅಭ್ಯರ್ಥಿಯಲ್ಲ. ಅಧಿಕೃತ ಅಭ್ಯರ್ಥಿಯಾದ ಶಿವಮೂರ್ತಿಗೆ ಮತನಿಡಲು ಮನವಿ ಮಾಡಿದರು.

ಅಭ್ಯರ್ಥಿ ಶಿವಮೂರ್ತಿ ಮಾತನಾಡಿ, ಬ್ಯಾಂಕ್ ರಾಷ್ಟ್ರೀಕರಣ ಮಾಡಿ, ದಲಿತರಿಗೆ ಭೂ ಒಡೆತನ ನೀಡಿ ದೇಶದ ಉದ್ಧಾರ ಮಾಡಿದ್ದು ಕಾಂಗ್ರೆಸ್. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಲು ಅವರು ಮನವಿ ಮಾಡಿದರು. ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ರೈತರ ಶೋಷಣೆ ನಿಲ್ಲಬೇಕಿದೆ. ರೈತರ ಹಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸುತ್ತೇನೆ. ಮಾತಿಗೆ ತಪ್ಪಿದರೆ ಹೋರಾಟ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಮುಖಂಡರಾದ ವೆಂಕಟೇಶ್, ರಾಜೇಂದ್ರ, ಲಕ್ಷ್ಮಣ್, ಆರ್. ಮಾದಪ್ಪ, ರುದ್ರೇಶ್, ಪಿ. ರಾಜಕುಮಾರ್, ರವಿ, ನಾಗರಾಜ್, ಸೈಯದ್‌ಸಾಬ್, ಸುಭಾಷ್‌ಚಂದ್ರ, ಮೋಹನ್ ಕೊಂಡಜ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.