ADVERTISEMENT

ರಾಜ್ ಅಭಿನಯದಲ್ಲಿ ತಾಯ್ತನದ ಸೆಳೆತ : ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:25 IST
Last Updated 14 ಫೆಬ್ರುವರಿ 2011, 8:25 IST

ಸಾಗರ: ಅಭಿನಯದಲ್ಲಿ ತಾಯ್ತನದ ಸೆಳೆತ ಇರಬೇಕು ಎಂದು ಬಯಸಿದ್ದರಿಂದ ರಾಜ್‌ಕುಮಾರ್ ಅವರ ಚಿತ್ರಗಳು ಸದಭಿರುಚಿಯ ಎಲ್ಲೆ ಮೀರಿರಲಿಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಇಲ್ಲಿನ ಪರಸ್ಪರ ಸಾಹಿತ್ಯ ವೇದಿಕೆ, ಚಿತ್ರಸಿರಿ ಸಿರಿವಂತೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭಾನುವಾರ ಏರ್ಪಡಿಸಿದ್ದ ‘ಡಾ.ರಾಜ್ ಎಂಬ ಕನ್ನಡದ ಅಭಿಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ ಅವರಿಗೆ ಅಭಿನಯ ಎಂಬುದು ಒಂದು ಕಸುಬು ಆಗಿತ್ತು. ಪಾತ್ರಕ್ಕೆ ಅವರ ಪ್ರವೇಶವಾಗದೇ ಪಾತ್ರವೇ ಅವರೊಳಗೆ ಪ್ರವೇಶಿಸುವುದು ವಿಶಿಷ್ಟವಾಗಿತ್ತು. ನಾಡಿನ ಎಲ್ಲಾ ಸಾಮಾಜಿಕ ವರ್ಗಗಳನ್ನು ಸಂಕೇತಿಸುವ ಪಾತ್ರ ನಿರ್ವಹಿಸಿದ್ದು, ರಾಜ್‌ರ ವಿಶೇಷತೆ ಎಂದರು.

ವೈಯಕ್ತಿಕವಾಗಿ ತಾವು ಅನುಭವಿಸಿದ ಸಾಮಾಜಿಕ ಸಂಕಟ, ಅವಮಾನಗಳನ್ನು  ಸವಾಲಾಗಿ ಸ್ವೀಕರಿಸಿ ತಮ್ಮ ಪ್ರತಿಭೆ, ಸಂಕಲ್ಪ, ಶ್ರದ್ಧೆಯ ಮೂಲಕ ಬೆಳೆದದ್ದು, ರಾಜ್‌ರ ಪ್ರತಿರೋಧದ ಮಾದರಿಯಾಗಿದೆ. ಚಿತ್ರರಂಗದಲ್ಲಿ ಸಾರ್ವಭೌಮ ಪಟ್ಟ ಪಡೆದರೂ ಸಂವೇದನಶೀಲತೆಯನ್ನು ಕಳೆದುಕೊಳ್ಳದೇ ಪಂಚೇಂದ್ರಿಯಗಳನ್ನು ಬೇರೆಯವರಿಗೆ ಒಪ್ಪಿಸದೇ ಬದುಕಿದ ವಿಶಿಷ್ಟ ವ್ಯಕ್ತಿತ್ವ ರಾಜ್ ಎಂದು ಬಣ್ಣಿಸಿದರು.

ಅಸಮಾನತೆಯ ಈ ಸಮಾಜದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಒಬ್ಬ ವ್ಯಕ್ತಿ ಸಾಧಿಸಿದ ಸಾಧನೆ  ಕೇವಲ ವೈಯಕ್ತಿಕ ಸಾಧನೆಯಾಗದೇ ಸಾಮಾಜಿಕ ಸಾಧನೆಯಾಗುತ್ತದೆ ಎಂಬ ಮಾತಿಗೆ ರಾಜ್ ಅಪ್ಪಟ ಉದಾಹರಣೆ. ರಾಜ್‌ರ ಬೆಳವಣಿಗೆಯಲ್ಲಿ ಹಳ್ಳಿಗಾಡಿನ ಆತ್ಮವಿಶ್ವಾಸ ವಿಕಾಸ ಹೊಂದಿದ ಬಗೆಯನ್ನು ಕಾಣಬಹುದು. ಶ್ರದ್ಧೆ ಇದ್ದರೆ ತಳ ಸಮುದಾಯದ ಜನ ಕೂಡ ಉನ್ನತ ಸಾಧನೆ ಮಾಡಬಹುದು ಎನ್ನುವುದಕ್ಕೆ ರಾಜ್ ಮಾದರಿ ಎಂದು ಹೇಳಿದರು.

ಒಂದರ್ಥದಲ್ಲಿ ರಾಜ್ ಕನ್ನಡ ನಾಡಿನ ಜಾನಪದ ನಾಯಕ. ಜಾನಪದ ಕತೆಗಳಲ್ಲಿ ಸಾಮಾನ್ಯ ವ್ಯಕ್ತಿ ಅಸಾಮಾನ್ಯವಾದದ್ದನ್ನು ಸಾಧಿಸುವ ರೀತಿಯಲ್ಲಿ ರಾಜ್ ಕೂಡ ಅಂತಹದ್ದೇ ಸಾಧನೆ ಮಾಡಿ ಶ್ರಮಜೀವಿ ವರ್ಗದವರ ಕನಸನ್ನು ನನಸು ಮಾಡಿದವರು. ತಮ್ಮ ಕ್ರಿಯಾಶಕ್ತಿಯ ವಿಸ್ತರಣೆ ಕಾರಣಕ್ಕಾಗಿ ಸಿನಿಮಾ ಕ್ಷೇತ್ರವನ್ನು ಮೀರಿ ಬೆಳೆದವರು ಎಂದು ವಿಶ್ಲೇಷಿಸಿದರು.

ಕುವೆಂಪು ನಿಸರ್ಗದಲ್ಲಿ ದೇವರನ್ನು ಕಂಡರೆ, ರಾಜ್ ತಮ್ಮ ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಅವರು ಆಡಂಬರದ ಪೂಜಾ ಪ್ರಧಾನ ಪರಂಪರೆ ಅಥವಾ ಬಂಡವಾಳದ ಸ್ಥಾವರ ಭಕ್ತಿಪಂಥಕ್ಕೆ ಸೇರದೇ ಜಂಗಮ ಪಂಥಕ್ಕೆ ಸೇರಿದ್ದ ಮಂತ್ರ, ಶಾಸ್ತ್ರ ಗೊತ್ತಿಲ್ಲದ ಭಕ್ತರಾಗಿದ್ದರು. ಚಿತ್ರರಂಗದಲ್ಲಿ ಸಹಪಂಕ್ತಿ ಭೋಜನವನ್ನು ಆರಂಭಿಸುವ ಮೂಲಕ ಮಾನಸಿಕ ಸಮಾನತೆಯನ್ನು ತಂದದ್ದು ರಾಜ್‌ರ ಹೆಗ್ಗಳಿಕೆ ಎಂದರು.

ರಾಜ್‌ಕುಮಾರ್ ಎಂಬ ಹೆಸರಿನ ಒಳಗೆ ಯಾವತ್ತೂ ‘ಮುತ್ತುರಾಜ್’ ಮನಸ್ಸು ಜಾಗೃತವಾಗಿದ್ದ ಕಾರಣಕ್ಕೆ ಶ್ರೀಮಂತಿಕೆ ಎಂಬುದು ಅವರಿಗೆ ಢಂಬಾಚಾರವಾಗಿ ಕಾಣುತ್ತಿತ್ತು. ಹೀಗಾಗಿ, ಮತ್ತೆ ಮತ್ತೆ ನೆಲಕ್ಕೆ ಹತ್ತಿರವಾಗಬೇಕು ಎಂಬ ತುಡಿತದಿಂದಸರಳ ವ್ಯಕ್ತಿತ್ವ, ವಿನಯವಂತಿಕೆಯನ್ನು ಮೈಗೂಡಿಸಿಕೊಂಡಿದ್ದ ಶಿಖರಪ್ರಾಯ ಪ್ರತಿಭೆ ರಾಜ್ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ದಸಂಸದ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು ವೇದಿಕೆಯಲ್ಲಿದ್ದರು. ವೈ.ಎನ್. ಹುಬ್ಬಳ್ಳಿ ಪ್ರಾರ್ಥಿಸಿದರು. ಸಿರಿವಂತೆ ಚಂದ್ರಶೇಖರ್ ಸ್ವಾಗತಿಸಿದರು. ಡಾ.ಸರ್ಫ್ರಾಜ್ ಚಂದ್ರಗುತ್ತಿ ಪ್ರಾಸ್ತಾವಿಕ ಮಾತನಾಡಿದರು. ಹಾ. ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ರಾಜ್ ಅಭಿನಯದ ದೃಶ್ಯಗಳ ಏಕಪಾತ್ರಾಭಿನಯ, ರಾಜ್ ಹಾಡಿದ ಗೀತೆಗಳ ಗಾಯನ ಹಾಗೂ ರಾಜ್ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಾಜ್ ಅಭಿನಯಿಸಿದ ದೃಶ್ಯಗಳ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.