ADVERTISEMENT

‘ರಾಜ ರಸ್ತೆ’ಗೆ ವಿದೇಶಿ ಗಿಡಗಳ ಅಲಂಕಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 7:45 IST
Last Updated 3 ಜುಲೈ 2017, 7:45 IST
ದಾವಣಗೆರೆ ನಗರದ ಪಿ.ಬಿ ರಸ್ತೆಯಲ್ಲಿ ನಾಟಿ ಮಾಡಲಾಗಿರುವ ವಿದೇಶಿ ಅಲಂಕೃತ ಸಸಿಗಳು.
ದಾವಣಗೆರೆ ನಗರದ ಪಿ.ಬಿ ರಸ್ತೆಯಲ್ಲಿ ನಾಟಿ ಮಾಡಲಾಗಿರುವ ವಿದೇಶಿ ಅಲಂಕೃತ ಸಸಿಗಳು.   

ದಾವಣಗೆರೆ: ನಗರದ ಪ್ರಧಾನ ರಸ್ತೆಯಾಗಿರುವ ಬೆಂಗಳೂರು –ಪುಣೆ (ಪಿ.ಬಿ.) ರಸ್ತೆ ವಿಸ್ತರಣೆ ಬಹುತೇಕ ಮುಗಿದಿದ್ದು ರಾಜರಸ್ತೆಯ ನೋಟ ಬೀರುತ್ತಿದೆ. ಆಕರ್ಷಕ ಶೈಲಿಯ ವಿದ್ಯುತ್‌ ಕಂಬಗಳ ಸಾಲಿನಲ್ಲೇ ರಸ್ತೆ ವಿಭಜಕದಲ್ಲಿ ಸಾಲಾಗಿ ನೆಟ್ಟಿರುವ ವಿದೇಶಿ ಗಿಡಗಳು ರಸ್ತೆಗೆ ಇನ್ನಷ್ಟು ಮೆರುಗು ನೀಡುತ್ತಿವೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಿ.ಬಿ ರಸ್ತೆ ಮಧ್ಯದ ವಿಭಜಕಗಳಲ್ಲಿ ನಾಟಿ ಮಾಡಲಾಗಿರುವ ಆಸ್ಟ್ರೇಲಿಯಾ, ಸ್ಪೇನ್‌, ಜಪಾನ್‌ ತಳಿಗಳಾದ ಫೈಕಸ್‌ ಬೆಂಜುಮಿನಾ, ಫೈಕಸ್ ಮ್ಯಾಕ್ರೋಕಾರ್ಫಾ, ಫೈಕಸ್‌ ಮಲ್ಟಿ ಹೆಡ್ಡೇಡ್‌, ಪೊಂಗ್‌ ಪೊಂಗ್‌ ಹೆಸರಿನ ವಿದೇಶಿ ಗಿಡಗಳು ಹಸಿರುಹೊದಿಕೆ ಹುಲ್ಲಿನ ಮಧ್ಯೆ ಕಂಗೊಳಿಸುತ್ತಿವೆ.

ಗಾತ್ರದಲ್ಲಿ ಇವು ಚಿಕ್ಕವಾಗಿದ್ದರೂ ಸದೃಢ ರೆಂಬೆ, ಎಲೆ, ಹೂಗಳಿಂದ ಮೈದುಂಬಿಕೊಂಡಿದ್ದು ರಸ್ತೆಯ ಸೌಂದರ್ಯ ಹೆಚ್ಚಿಸಿವೆ. ಈ ಆಕರ್ಷಕ ಮಾದರಿಯ ಗಿಡಗಳನ್ನು ಬೆಂಗಳೂರು, ಹೈದರಾಬಾದ್ ಹಾಗೂ ಊಟಿಗಳಲ್ಲಿ ಮಾತ್ರ ಕಾಣಬಹುದಾಗಿತ್ತು.  ಅಂತಹ ಭಾಗ್ಯ ಈಗ ದಾವಣಗೆರೆಗೂ ದೊರಕಿದೆ.

ADVERTISEMENT

ಖರ್ಚು–ವೆಚ್ಚ: 2017–18ನೇ ಸಾಲಿನ ತೋಟಗಾರಿಕೆ ‘ಉದ್ಯಾನಗಳು ಹಾಗೂ ತೋಟಗಳು’ ಯೋಜನೆಯ ಅನುದಾನದಡಿ ಬೆಂಗಳೂರಿನ ನರ್ಸರಿಮನ್‌ ಕೋ–ಆಪರೇಟಿವ್‌ ಸೊಸೈಟಿಯಿಂದ ತೋಟಗಾರಿಕೆ ಇಲಾಖೆ 350 ವಿದೇಶಿ ಅಲಂಕಾರಿಕ ಗಿಡಗಳನ್ನು ಖರೀದಿಸಿದೆ. ಇದಕ್ಕೆ ಒಟ್ಟು ₹ 84.96 ಲಕ್ಷ ಖರ್ಚು ಮಾಡಲಾಗಿದೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ ರಾಮಕೃಷ್ಣ.

ಪರಿಸರ ಸ್ನೇಹಿ ಗಿಡಗಳು: ಪರಿಸರದಲ್ಲಿನ ಕಾರ್ಬನ್‌ ಡೈ ಆಕ್ಸೈಡ್‌, ವಿಷಕಾರಕ ಅನಿಲವನ್ನು ಹೀರಿ ಶುದ್ಧಗಾಳಿ ಒದಗಿಸುವಲ್ಲಿ ಇವು ಸಹಕಾರಿ. ಈ ಪರಿಸರ ಸ್ನೇಹಿ ವಿದೇಶಿ ತಳಿಯ ಗಿಡಗಳನ್ನು ಬೃಹತ್‌ ಆಗಿ ಬೆಳೆಯದಂತೆ ಆಗಾಗ ಕತ್ತರಿಸಿ ನಿರ್ವಹಣೆ ಮಾಡಿದರೆ, ಸುಂದರವಾಗಿ ಕಾಣುತ್ತವೆ. 

ಫಲವತ್ತಾದ ಮಣ್ಣು ಪೂರೈಕೆ: ವಿದೇಶಿ ಅಲಂಕಾರಿಕ ಗಿಡಗಳು ಉತ್ತಮವಾಗಿ ಬೆಳವಣಿಗೆ ಕಾಣುವ ನಿಟ್ಟಿನಲ್ಲಿ ನಾಟಿ ಮಾಡಲು ಹರಿಹರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದಿಂದ ಉತ್ಕೃಷ್ಟವಾದ ಕೆಂಪು ಮೆತ್ತನೆಯ ಮಣ್ಣನ್ನು ತರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು

ವೈಶಿಷ್ಯತೆ: ಭೂಮಿಯಲ್ಲಿ ಕಡಿಮೆ ಬೇರು ಬಿಟ್ಟು ಸದೃಢವಾಗಿ ಬೆಳೆಯುವ ಈ ವಿದೇಶಿ ಗಿಡಗಳನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡಿದರೆ ಸಾಕು. ಇಲ್ಲಿನ ಹವಾಮಾನಕ್ಕೂ, ಮಣ್ಣಿಗೂ ಹೊಂದಿಕೊಡು ಉತ್ತಮವಾಗಿ ಬೆಳೆಯುವ ವಿಶಿಷ್ಟ ಗುಣ ಹೊಂದಿವೆ. 

ಕೆಎಸ್‌ಆರ್‌ಟಿಸಿ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಪಿ.ಬಿ ರಸ್ತೆಯ ಮಧ್ಯ ವಿಭಜಕಗಳಲ್ಲಿ ಸಸಿಗಳನ್ನು ನೆಡಲು ಪಿಡಬ್ಲೂಡಿ ಇಲಾಖೆ ₹ 15 ಲಕ್ಷ ವೆಚ್ಚದಲ್ಲಿ ಫಲವತ್ತಾದ ಮಣ್ಣು ಪೂರೈಕೆ ಮಾಡಿದೆ. ವಿಶಾಲವಾದ ಪೂನಾ– ಬೆಂಗಳೂರು ರಸ್ತೆಯಲ್ಲಿ ಚೀನಾ ಮಾದರಿಯ ಹೈಮಾಸ್ಟ್‌ ದೀಪಗಳ ನಡುವೆ ಕಂಗೊಳಿಸುವ ವಿದೇಶಿ ಮರಗಳು, ನಿಯಮಿತ ನಿರ್ವಹಣೆಯಾದಲ್ಲಿ ಸ್ಮಾರ್ಟ್‌ಸಿಟಿಯ ಅಂದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿವೆ.\

ವಿಜಯ ಸಿ ಕೆಂಗಲಹಳ್ಳಿ

* *

ವಿದೇಶಿ ಮಾದರಿಯಲ್ಲಿ ರಸ್ತೆ ಯನ್ನು ಸುಂದರಗೊಳಿಸ ಲಾಗುವುದು. ಇದು  ಸಚಿವ ಮಲ್ಲಿಕಾರ್ಜುನ,  ಶಾಸಕ ಶಾಮನೂರು ಶಿವಶಂಕರಪ್ಪ  ಕನಸೂ ಹೌದು.
ಟಿ.ಆರ್.ವೇದಮೂರ್ತಿ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.