ADVERTISEMENT

ರೇಷ್ಮೆ ಬೆಲೆ ಕುಸಿತ: ಕಂಗಾಲಾದ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 8:25 IST
Last Updated 13 ಜೂನ್ 2011, 8:25 IST

ಹರಪನಹಳ್ಳಿ: ಆಮದು ಸುಂಕದ ಭಾರೀ ಕಡಿತದೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಚೀನಾ ದೇಶದ ರೇಷ್ಮೆಯ ಮುಂದೆ ದೇಸಿ ರೇಷ್ಮೆ ಬೆಳೆಗಾರನ ಬದುಕಿಗೆ ಗರ ಬಡಿದಿದೆ. ಆರ್ಥಿಕ ಸದೃಢತೆಗೆ ವರದಾನವಾಗಿದ್ದ ರೇಷ್ಮೆಯನ್ನೇ ನಂಬಿಕೊಂಡಿದ್ದ ರೈತಾಪಿ ಕುಟುಂಬಗಳು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕಂಗಾಲಾಗಿವೆ.

ತಾಲ್ಲೂಕಿನ ಕಸಬಾ ಹೋಬಳಿಯ ಹರಪನಹಳ್ಳಿ, ಗೋವೇರಹಳ್ಳಿ, ತೊಗರಿಕಟ್ಟೆ, ಕೆ. ಕಲ್ಲಹಳ್ಳಿ, ಅರಸೀಕೆರೆ ಹೋಬಳಿಯ ಅಣಜಿಗೆರೆ, ಚಿಗಟೇರಿಯ ಹಾಗೂ ತೆಲಿಗಿ ಹೋಬಳಿಯ ಕೆಲ ಭಾಗಗಳು ಸೇರಿದಂತೆ ಸುಮಾರು 45.9ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಸುಮಾರು 67 ರೈತಾಪಿ ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿವೆ.

ಕೆಂಪು ಹಾಗೂ ಕೆಂಪುಮಿಶ್ರಿತ ಕಪ್ಪುಮಣು ರೇಷ್ಮೆ ಬೆಳೆಗೆ ಹೇಳಿಮಾಡಿಸಿದ ಭೂಪ್ರದೇಶ. ಹಾಗಾಗಿಯೇ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಮೂರ‌್ನಾಲ್ಕು ಎಕರೆಯಷ್ಟು ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆಯತೊಡಗಿದ್ದಾರೆ.

ಆರಂಭದಲ್ಲಿ ಕಸಬಾ ಹೋಬಳಿ ವ್ಯಾಪ್ತಿಯ ಗೋವೇರಹಳ್ಳಿ ಹಾಗೂ ಚಿಗಟೇರಿ ಹೋಬಳಿಯಲ್ಲಿ ಮಾತ್ರ ರೇಷ್ಮೆಯನ್ನು ಬೆಳೆಯಲಾಗುತ್ತಿತ್ತು. ಸಾಂಪ್ರದಾಯಿಕ ಬೆಳೆ ಹಾಗೂ ಬೀಜೋತ್ಪಾದನೆ ಎರಡು ಪ್ರಕಾರಗಳ ಬೆಳೆಯಲ್ಲಿ ತೊಡಗಿಸಿಕೊಂಡಿದ್ದ ರೈತರಿಗೆ ಲಾಭಕ್ಕಿಂತ ವೆಚ್ಚವೇ ಅಧಿಕವಾಗಿರುತ್ತಿತ್ತು. ಇದರಿಂದ ಬೇಸತ್ತ ಕೆಲ ರೈತರು, ಸಣ್ಣ ಪ್ರಮಾಣದ ನೀರಿನ ಪೂರೈಕೆ ಹಾಗೂ ಕಡಿಮೆ ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕರಹಿತವಾದ ರೇಷ್ಮೆ ಪ್ರತಿ 45ದಿನಕ್ಕೊಮ್ಮೆ ಆದಾಯದ ಮೂಲ ದೊರಕಿಸುವ ಸಂಜೀವಿನಿಯಾಗಿ ಕಾಣಿಸಿಕೊಂಡಿದ್ದರಿಂದ ಕೆಲ ರೈತರು ರೇಷ್ಮೆ ಕೃಷಿಯತ್ತ ಆಕರ್ಷಿತರಾದರು.

ಉತ್ತಮ ಗುಣಮಟ್ಟದ ನೂಲು ಮತ್ತು ಬಣ್ಣದಲ್ಲಿಯೂ ತಾಜಾತನ ಹೊಂದಿರುವ ಇಲ್ಲಿನ ರೇಷ್ಮೆಗೂಡಿಗೆ ರಾಮನಗರದಂತಹ ಬೃಹತ್ ಮಾರುಕಟ್ಟೆಯಲ್ಲಿ ಆಗ್ರಸ್ಥಾನವಿದೆ. ಭಾರೀ ಬೇಡಿಕೆಯೂ ಇದೆ.

ಒಂದು ಎಕರೆ ವಿಸ್ತ್ರೀರ್ಣದಲ್ಲಿ ಪ್ರತಿ ಕೆಜಿ ಗೂಡಿಗೆ 200ರಿಂದ 225ರೂಗಳ ತನಕ ಯೋಜನಾ ವೆಚ್ಚದೊಂದಿಗೆ ಕನಿಷ್ಠ 90ಕೆಜಿಯಷ್ಟು ಗೂಡಿನ ಇಳುವರಿಯನ್ನು ರೈತರು ತೆಗೆಯುತ್ತಿದ್ದಾರೆ. ಕಾರ್ಮಿಕರ ವೇತನ, ಸಾರಿಗೆ ಸೇರಿದಂತೆ ಇತರೆ ಖರ್ಚುವೆಚ್ಚ ತೆಗೆದರೂ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ರೂ 300ರಿಂದ 400ತನಕ ದರ ಸಿಗುತ್ತಿದ್ದರಿಂದ ರೈತರ ಬದುಕು ಹಸನಾಗುತ್ತಿತ್ತು.

ನೇಕಾರರಿಗೆ ಅನುಕೂಲ ಒದಗಿಸುವ ನಿಟ್ಟನಲ್ಲಿ ಕೇಂದ್ರ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ರೇಷ್ಮೆ ಆಮದು ಮೇಲಿನ ಸುಂಕವನ್ನು ಶೇ. 31ರಿಂದ ಕೇವಲ ಶೇ. 6ಕ್ಕೆ ಇಳಿಕೆ ಮಾಡಿದ್ದರಿಂದ ರೇಷ್ಮೆ ಬೆಳೆಗಾರರ ಕನಸಿಗೆ ಕಾರ್ಮೋಡ ಕವಿದಂತಾಗಿದೆ. ಪ್ರತಿ ಕೆಜಿ ಗೂಡಿಗೆ ರೂ 400ತನಕ ಸಿಗುತ್ತಿದ್ದ ದರ, ಈಗ 150ರಿಂದ 200 ರೂಗಳಿಗೆ ಇಳಿದಿದೆ.

ಚೀನಾ ದೇಶದಲ್ಲಿನ ತಾಂತ್ರಿಕತೆಯ ಕ್ರಾಂತಿ ಹಾಗೂ ಅತೀ ಕಡಿಮೆ ಪ್ರಮಾಣದ ಯೋಜನಾವೆಚ್ಚ ಮತ್ತು ಕೇಂದ್ರದ ಹೊಸ ಆಮದು ನೀತಿಯಿಂದಾಗಿ ದೇಸೀ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದಾನೆ ಎನ್ನುತ್ತಾರೆ 5 ಎಕರೆ ವಿಸ್ತೀರ್ಣದಲ್ಲಿ ಕಳೆದ 7ವರ್ಷಗಳಿಂದಲೂ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತ ಶಿಕಾರಿ ಬಾಲಪ್ಪ.

ಪ್ರತಿವರ್ಷ ಕಾರ್ಮಿಕರ ಕೂಲಿ ಹಾಗೂ ಸಾರಿಗೆ ವೆಚ್ಚದಲ್ಲಿ ಎಷ್ಟೇ ಏರಿಕೆಯಾದರೂ ರೇಷ್ಮೆ ಎಂದೂ ಕೈಬಿಟ್ಟಿರಲಿಲ್ಲ. ಹಾಗಾಗಿಯೇ ರೇಷ್ಮೆಯನ್ನು ನಂಬಿಕೊಂಡು ಹುಳು ಸಾಕಾಣಿಕೆಗೆ ಅವಶ್ಯಕವಾಗಿರುವ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ  ಹಾಗೂ ಪರಿಕರಗಳ ಖರೀದಿಗೆ ನಾಲ್ಕಾರು ಲಕ್ಷ ರೂಪಾಯಿ ಸಾಲ ಮಾಡಿದ್ದೇವೆ. ಈಗ ಏಕಾಏಕಿ ಕೇಂದ್ರ ಸರ್ಕಾರ ಆಮದು ಸುಂಕ ಕಡಿತಗೊಳಿಸಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಂದೇನು ಮಾಡಬೇಕೆಂಬುದೇ ತೋಚುತ್ತಿಲ್ಲ ಎನ್ನುತ್ತಾರೆ ಕಳೆದ 28ವರ್ಷಗಳಿಂದ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಗೋವೇರಹಳ್ಳಿಯ ಕೆ.ಎಂ. ಸದ್ಯೋಜಾತಯ್ಯ.

ನೇಕಾರರಿಗೆ ಭದ್ರತೆ ಒದಗಿಸುವ ಸಲುವಾಗಿ ಆಮದು ಸುಂಕವನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರ, ರೇಷ್ಮೆ ಬೆಳೆಗಾರರ ಹಿತಾಸಕ್ತಿ ಕಾಪಾಡದಿರುವುದು ರೈತರನ್ನು ಕಂಗೆಡಿಸಿದೆ.
ಮಂಜುನಾಥ ಯಲ್ಲಾಪುರದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.