ADVERTISEMENT

ರೈತರ ಸಾಲಮನ್ನಾಕ್ಕಾಗಿ ಬಂದ್‌: ಕೆಲವೆಡೆ ಯಶಸ್ವಿ, ಹಲವೆಡೆ ನೀರಸ

​ಪ್ರಜಾವಾಣಿ ವಾರ್ತೆ
Published 29 ಮೇ 2018, 7:12 IST
Last Updated 29 ಮೇ 2018, 7:12 IST

ಚನ್ನಗಿರಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ಐದು ದಿನಗಳು ಕಳೆದರೂ ಸಾಲಮನ್ನಾ ಮಾಡದೇ ಇರುವುದನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಬಂದ್ ಮಾಡಿ ಪ್ರತಿಭಟಿಸಿದರು.

‘ಆರೂವರೆ ಕೋಟಿ ಕನ್ನಡಿಗರ ಮುಲಾಜಿಗೆ ಒಳಗಾಗಿಲ್ಲ. ಕಾಂಗ್ರೆಸ್ ಪಕ್ಷದ ಮುಲಾಜಿಗೆ ಒಳಗಾಗಿದ್ದೇನೆ. ರಾಜ್ಯದ ಜನರು ಜೆಡಿಎಸ್ ಪಕ್ಷಕ್ಕೆ ಸಂಪೂರ್ಣವಾದ ಅಧಿಕಾರವನ್ನು ನೀಡಿಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮತ್ತೊಮ್ಮೆ ವಚನ ಭ್ರಷ್ಟರಾಗಿದ್ದಾರೆ. ರೈತರ ಸಾಲ ಮನ್ನಾ ಆಗುವವರೆಗೆ ಬಿಜೆಪಿ ಹೋರಾಟ ನಡೆಸುತ್ತದೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಚ್ಚರಿಸಿದರು.

ಸಾಮಾಜಿಕ ಭದ್ರತೆ ಯೋಜನೆ ಫಲಾನುಭವಿಗಳಿಗೆ ₹ 6 ಸಾವಿರ ಮಾಸಿಕ ಪ್ರೋತ್ಸಾಹಧನ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ 24 ಗಂಟೆ ವಿದ್ಯುತ್ ನೀಡಲಾಗುವುದು ಎಂಬ ಭರವಸೆಯನ್ನು ನೀಡಿದ್ದು, ಕುಮಾರಸ್ವಾಮಿ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವಾಹನಗಳ ಸಂಚಾರ ಎಂದಿನಂತೆ ಇತ್ತು. ಸರ್ಕಾರಿ ಕಚೇರಿ, ಬ್ಯಾಂಕ್, ಶಾಲಾ ಕಾಲೇಜುಗಳು ಕಾರ್ಯ
ನಿರ್ವಹಿಸಿದವು. ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಿ.ಎಸ್. ಸಿದ್ದೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ. ವಾಗೀಶ್, ಯಶೋದಮ್ಮ ಮರುಳಪ್ಪ, ಎನ್. ಲೋಕೇಶ್, ಪುರಸಭೆ ಸದಸ್ಯರಾದ ಮಾಲತೇಶ್, ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪುಷ್ಪಾವತಿ, ಕೆ.ಸಿ. ರವಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲಾ ಹರೀಶ್, ಯಶೋದಮ್ಮ ಬುಳ್ಳಿ, ಎಂ.ಎನ್. ಮರುಳಪ್ಪ, ಟಿ.ವಿ. ರಾಜು ಪಟೇಲ್, ಎನ್.ಬಿ. ಹಾಲೇಶಪ್ಪ, ರುದ್ರೇಗೌಡ್ರು. ಎ.ಎಸ್. ಬಸವರಾಜ್, ಜಿಲ್ಲಾ ಪರಿಶಿಷ್ಟ ವಿಭಾಗದ ಅಧ್ಯಕ್ಷ ಪಿ. ಲೋಹಿತ್ ಕುಮಾರ್ ಭಾಗವಹಿಸಿದ್ದರು.

ಬಸವಾಪಟ್ಟಣ ವರದಿ

ಕರ್ನಾಟಕ ಬಂದ್‌ ಕರೆಯಿಂದ ಈ ಭಾಗದಲ್ಲಿ ಯಾವ ಪರಿಣಾಮವೂ ಉಂಟಾಗಿಲ್ಲ. ವಹಿವಾಟುಗಳು ಎಂದಿನಂತೆ ನಡೆದವು.

ಅಂಗಡಿ, ಹೋಟೆಲ್‌, ಬ್ಯಾಂಕ್‌, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಪ್ರತಿ ಸೋಮವಾರ ನಡೆಯುವ ಸಂತೆಗೂ ಬಂದ್‌ನ ಬಿಸಿ ತಾಕಲಿಲ್ಲ. ಖಾಸಗಿ ಬಸ್‌ಗಳ ಸಂಚಾರ ಎಂದಿನಂತಿತ್ತು.

ಶಾಲೆಗಳ ಆರಂಭದ ದಿನದ ಅಂಗವಾಗಿ ಶಾಲಾ ಕಟ್ಟಡಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಸಿಹಿಯೂಟದೊಂದಿಗೆ ಮಕ್ಕಳನ್ನು ಸ್ವಾಗತಿಸಲು ಸಿದ್ಧರಾಗಿದ್ದ ಶಿಕ್ಷಕರಿಗೆ ಮಾತ್ರ ಮಕ್ಕಳು ಶಾಲೆಗೆ ಬಾರದೇ ನಿರಾಶೆ ಉಂಟುಮಾಡಿದರು.

ಹರಪನಹಳ್ಳಿ ವರದಿ

ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡದಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಘಟಕ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹರಪನಹಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಿರಲಿಲ್ಲ. ಎಂದಿನಂತೆ ಕಾರ್ಯನಿರ್ವಹಿಸಿದವು. ಬಸ್ ಸಂಚಾರ ಸುಗಮವಾಗಿ ನಡೆಯಿತು.

ಪಟ್ಟಣಕ್ಕೆ ಬರುವ, ಹೋಗುವ ಗ್ರಾಮೀಣ ಜನರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಅಂಗಡಿಗಳು ಯಥಾಪ್ರಕಾರ ತೆರೆದಿದ್ದವು. ಬಂದ್ ಬಗ್ಗೆ ಮೊದಲೇ ಘೋಷಣೆ ಮಾಡಿದ್ದರಿಂದ ಸೋಮವಾರ ಪಟ್ಟಣಕ್ಕೆ ಬರುವವರ ಸಂಖ್ಯೆ ಕಡಿಮೆ ಆಗಿತ್ತು. ಪಟ್ಟಣದ ಆಚಾರ ಬಡಾವಣೆಯಲ್ಲಿರುವ ಬಿಜೆಪಿ ಕಾರ್ಯಾಲಯದಿಂದ ಪ್ರತಿಭಟನೆ ಆರಂಭಿಸಿದ ತಾಲ್ಲೂಕು ಬಿಜೆಪಿ ಘಟಕ ಹಾಗೂ ಬಿಜೆಪಿ ರೈತ ಮೋರ್ಚಾದ ಮುಖಂಡರು, ಕಾರ್ಯಕರ್ತರು, ಐಬಿ ವೃತ್ತ, ಹಳೇ ಬಸ್ ನಿಲ್ದಾಣ ಮೂಲಕ ತೆರಳಿ ಶಿರಿಸಪ್ಪ ಇಜಾರಿ ವೃತ್ತದಲ್ಲಿ ಟೈರ್ ಸುಟ್ಟು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹರಿಹರ ವೃತ್ತ, ಕೊಟ್ಟೂರು ರಸ್ತೆ ಮೂಲಕ ತೆರಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಐಬಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಿತು. ಪ್ರತಿಭಟನೆಯಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಉಪಾಧ್ಯಕ್ಷ ಸತ್ಯನಾರಾಯಣ, ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಕಣವಿಹಳ್ಳಿ ಮಂಜುನಾಥ, ತಾಲ್ಲೂಕು ಪಂಚಾಯ್ತಿ ಎಲ್.ಮಂಜ್ಯಾನಾಯ್ಕ, ಮುಖಂಡರಾದ ನಿಟ್ಟೂರು ಸಣ್ಣಹಾಲಪ್ಪ, ತೆಲಗಿ ಕರಿಬಸಪ್ಪ, ಕರಿಗೌಡ, ವೆಂಕಟೇಶ್ ನಾಯ್ಕ, ಟಿ.ಲೋಕೇಶ್, ರವಿ ಅಧಿಕಾರ, ಸುವರ್ಣಮ್ಮ, ರೇಖಾ ಅವರೂ ಇದ್ದರು.

ಮಲೇಬೆನ್ನೂರು ವರದಿ

ಭಾರತೀಯ ಜನತಾ ಪಕ್ಷ ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಸೋಮವಾರ ಕರೆದಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಅಂಗಡಿ, ಮುಂಗಟ್ಟು ಎಂದಿನಂತೆ ಕಾರ್ಯನಿರ್ವಹಿಸಿದವು. ವಾಹನ ಸಂಚಾರ ಎಂದಿನಂತೆ ಇತ್ತು. ಪೊಲೀಸರು ಭದ್ರತೆ ಒದಗಿಸಿದ್ದರು.

ಬಂದ್‌ಗೆ ಒತ್ತಾಯ

ಚನ್ನಗಿರಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿದರು. ಕೆಲವರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದರೆ, ಇನ್ನೂ ಕೆಲವರು ಅಂಗಡಿಗಳನ್ನು ಮುಚ್ಚಲು ವಿರೋಧ ವ್ಯಕ್ತಪಡಿಸಿದರು. ನೃಪತುಂಗ ರಸ್ತೆಯಲ್ಲಿ ಇರುವ ಚಪ್ಪಲಿ ಅಂಗಡಿಯ ಮಾಲೀಕರ ಜತೆ ಅಂಗಡಿ ಮುಚ್ಚುವಂತೆ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಅಂಗಡಿಯ ಮುಂದೆ ಇದ್ದ ಚಪ್ಪಲಿ ಬಾಕ್ಸ್ ಗಳನ್ನು ಕೆಲವು ಕಿಡಿಗೇಡಿಗಳು ನೆಲಕ್ಕೆ ಬೀಳಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.