ADVERTISEMENT

ಲಂಚ ಪಡೆದರೆ ಅಮಾನತು: ಎಂಪಿಆರ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 5:40 IST
Last Updated 6 ಆಗಸ್ಟ್ 2012, 5:40 IST

ಹೊನ್ನಾಳಿ: ವಸತಿ ಫಲಾನುಭವಿಗಳಿಂದ ಹಣ ಪಡೆಯುವ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಪಿಡಿಒ ಸೇರಿದಂತೆ ಯಾವುದೇ ಹಂತದ ನೌಕರರನ್ನು ತಕ್ಷಣ ಅಮಾನತು ಮಾಡಲಾಗುವುದು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದರು.

ಪಟ್ಟಣದ ಕನಕ ರಂಗಮಂದಿರದಲ್ಲಿ ಶನಿವಾರ ಗೋವಿಕೋವಿ 2ನೇ ಹೋಬಳಿಯ 37ನೇ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಒಂದೇ ಒಂದು ಬಿಪಿಎಲ್ ಪಡಿತರ ಚೀಟಿ ರದ್ದತಿಗೆ ತಾವು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಸಚಿವ- ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸುವರ್ಣ ಭೂಮಿ ಯೋಜನೆಯಡಿ ಹಂತ ಹಂತವಾಗಿ ಎಲ್ಲಾ ರೈತರಿಗೂ ರೂ 10 ಸಾವಿರ ಸಹಾಯಧನ ನೀಡಲಾಗುವುದು. ಬರದ  ಹಿನ್ನೆಲೆಯಲ್ಲಿ ರೂ 25 ಸಾವಿರದವರೆಗಿನ ಸಾಲ ಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ. ಮುಂದೆಯೂ ಯಾವುದೇ ಪರಿಸ್ಥಿತಿಯಲ್ಲೂ ಸರ್ಕಾರ ರೈತರ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದರು. 

ವಿಧಾನ ಪರಿಷತ್ ಸಭಾಪತಿ  ಡಿ.ಎಚ್. ಶಂಕರಮೂರ್ತಿ ಜನಸ್ಪಂದನ ಸಭೆ ಉದ್ಘಾಟಿಸಿ ಮಾತನಾಡಿದರು. ಸದಸ್ಯ ಗಣೇಶ್ ಕಾರ್ಣಿಕ್, ಡಿ.ಜಿ. ಸೋಮಶೇಖರಪ್ಪ, ರೇವಮ್ಮ, ಫರ್ಜಾನಾ ಬಾನು, ಸುಶೀಲಮ್ಮ ದುರುಗಪ್ಪ, ಮಂಜುಳಾ ಮಂಜಪ್ಪ, ಪಟ್ಟಣಶೆಟ್ಟಿ ಪರಮೇಶ್ವರಪ್ಪ ಇತರರು ಇದ್ದರು. ತಹಶೀಲ್ದಾರ್ ಶೈಲಜಾ ಪ್ರಿಯದರ್ಶಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಮತಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.