ADVERTISEMENT

ಲೇಖಕನಿಗೆ ಜನರ ಪ್ರೀತಿ, ವಿಶ್ವಾಸ ಮುಖ್ಯ

ಅಭಿನಂದನಾ ಸಮಾರಂಭದಲ್ಲಿ ನಾ.ಡಿಸೋಜ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:36 IST
Last Updated 5 ಡಿಸೆಂಬರ್ 2013, 6:36 IST
ಸಾಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಹಾಗೂ ಅವರ ಪತ್ನಿ ಫಿಲೋಮಿನಾ ಡಿಸೋಜ ಅವರನ್ನು ಅಭಿನಂದಿಸಲಾಯಿತು.
ಸಾಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಹಾಗೂ ಅವರ ಪತ್ನಿ ಫಿಲೋಮಿನಾ ಡಿಸೋಜ ಅವರನ್ನು ಅಭಿನಂದಿಸಲಾಯಿತು.   

ಸಾಗರ: ಯಾವುದೇ ಒಬ್ಬ ಲೇಖಕ ಜನರ ಪ್ರೀತಿ, ವಿಶ್ವಾಸ ಗಳಿಸುವುದು ಮುಖ್ಯ. ಅದಕ್ಕಿಂತ ದೊಡ್ಡ ಪ್ರಶಸ್ತಿ, ಪುರಸ್ಕಾರ ಅಥವಾ ಸನ್ಮಾನ ಮತ್ತೊಂದಿಲ್ಲ ಎಂದು ಮಡಿಕೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಓರ್ವ ಲೇಖಕನಿಗೆ ಯಾವ ಮಟ್ಟದ ಗೌರವ ನೀಡಲು ಸಾಧ್ಯ, ಅದನ್ನು ನನ್ನ ಊರು ಹಾಗೂ ನಾಡು ನೀಡಿರುವುದು ಅತ್ಯಂತ ಸಾರ್ಥಕ ಹಾಗೂ ಧನ್ಯತೆಯ ಮನೋಭಾವ ಮೂಡಿಸಿದೆ ಎಂದರು.

ಕರ್ನಾಟಕದ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಸಾಗರಕ್ಕೆ ವಿಶಿಷ್ಟವಾದ ಸ್ಥಾನವಿದೆ. ಹೆಗ್ಗೋಡಿನ ‘ನೀನಾಸಂ’, ಚರಕ ಸಂಸ್ಥೆ ಮಾಡುತ್ತಿರುವ ಕೆಲಸವನ್ನು ಇಡೀ ದೇಶದ ಜನ ಮೆಚ್ಚುಗೆಯಿಂದ ನೋಡುತ್ತಿದ್ದಾರೆ. ಪ್ರಮುಖ ಹೋರಾಟಗಳು ನಡೆದ ಇಂತಹ ಸ್ಥಳದಲ್ಲಿ ಬದುಕು ಸಾಗಿಸುವುದೇ ಒಂದು ವಿಶೇಷ ಅನುಭವ ಎಂದು ಹೇಳಿದರು.

‘ನನ್ನ ಪ್ರತಿಯೊಂದು ಬರಹಗಳ ಹಿಂದೆ ಈ ಪ್ರದೇಶದ ಜನರು ಇದ್ದಾರೆ. ಮುಳುಗಡೆಯಂತಹ ಒಂದು ವಿಷಯ ಸಾಹಿತ್ಯ ಕೃತಿಗೆ ವಸ್ತುವಾಗುವಲ್ಲಿ ಜನರ ನೋವು ಮತ್ತು ನಿಟ್ಟುಸಿರು ಕೆಲಸ ಮಾಡಿದೆ ವಿನಾ ಇದರಲ್ಲಿ ಲೇಖಕನ ಹೆಚ್ಚುಗಾರಿಕೆ ಏನೂ ಇಲ್ಲ’ ಎಂದು ಹೇಳಿದರು.

‘ಸಾಮರಸ್ಯ ಮತ್ತು ಸಹಬಾಳ್ವೆಗೆ ಕೂಡ ಈ ಪ್ರದೇಶ ಹೆಸರಾಗಿರುವುದು ನನಗೆ ಸಂತೋಷ ತಂದಿರುವ ಮತ್ತೊಂದು ವಿಷಯವಾಗಿದೆ. ಇಲ್ಲಿ ಸರ್ಕಾರಿ ನೌಕರರಾಗಿ ಒಮ್ಮೆ ಸೇವೆ ಸಲ್ಲಿಸಿದವರು ಈ ಊರಿನಲ್ಲಿಯೆ ಖಾಯಂ ಆಗಿ ನೆಲೆಸಲು ಇಷ್ಟಪಡುತ್ತಾರೆ ಎನ್ನುವುದೇ ಇಲ್ಲಿನ ಸುಸಂಸ್ಕೃತ ವಾತಾವರಣಕ್ಕೆ ಉತ್ತಮ ಉದಾಹರಣೆಯಾಗಿದೆ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ, ನಾ.ಡಿಸೋಜ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶ ದೊರಕಿರುವುದು ಇಡೀ ಮಲೆನಾಡಿಗೆ ಸಂದಿರುವ ಗೌರವವಾಗಿದೆ ಎಂದರು.

ಮಾಜಿ ಶಾಸಕ ಎಲ್‌.ಟಿ.ತಿಮ್ಮಪ್ಪ ಹೆಗಡೆ, ನಗರಸಭಾ ಸದಸ್ಯ ತೀ.ನ.ಶ್ರೀನಿವಾಸ್‌, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗಭೂಷಣ್‌, ರಾಜ್ಯ ಪರಿಷತ್‌ ಸದಸ್ಯ ಮ.ಸ.ನಂಜುಂಡಸ್ವಾಮಿ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ್‌, ಇತಿಹಾಸ ವೇದಿಕೆಯ ಅಧ್ಯಕ್ಷ ಕೆಳದಿ ವೆಂಕಟೇಶ್‌ ಜೋಯಿಸ್‌, ಲೇಖಕ ವಿಲಿಯಂ, ಸಾಹಿತ್ಯ ಪರಿಷತ್ತಿನ ಜಿ.ನಾಗೇಶ್‌, ವಿ.ಶಂಕರ್‌, ಲೋಕೇಶ್‌ ಕುಮಾರ್‌, ಉಮೇಶ್‌ ಹಿರೇನೆಲ್ಲೂರು, ಪರಶುರಾಮಪ್ಪ, ಪರಮಾತ್ಮ, ಎಸ್‌.ಎಸ್‌.ರಮೇಶ್‌ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.