ADVERTISEMENT

ವಿದ್ಯಾರ್ಥಿಯ ಕೈಹಿಡಿದ ಕಾಫಿ-ಟೀ ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 8:30 IST
Last Updated 21 ಜೂನ್ 2011, 8:30 IST
ವಿದ್ಯಾರ್ಥಿಯ ಕೈಹಿಡಿದ ಕಾಫಿ-ಟೀ ಮಾರಾಟ
ವಿದ್ಯಾರ್ಥಿಯ ಕೈಹಿಡಿದ ಕಾಫಿ-ಟೀ ಮಾರಾಟ   

ಚನ್ನಗಿರಿ: ಯಾವುದೇ ಕಾರ್ಯ ಮಾಡಬೇಕಾದರೂ ಗುರಿ ಮತ್ತು ಛಲ ಹೊಂದಿರಬೇಕು. ಓದಬೇಕು ಎಂಬ ಛಲ ಹೊಂದಿದ ಪಟ್ಟಣದ ಯುವಕನೊಬ್ಬ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಬಸ್‌ನಿಲ್ದಾಣದಲ್ಲಿ ಬೆಳಗಿನಜಾವ ಕಾಫಿ-ಟೀ ಮಾರಿ ಅದರಿಂದ ಬಂದ ಆದಾಯದಲ್ಲಿ ಕಾಲೇಜಿಗೆ ಸೇರಿ ಅಭ್ಯಾಸ ಮಾಡುತ್ತಿದ್ದಾನೆ.

 ಪಟ್ಟಣದ ಕುಂಬಾರಬೀದಿ ವಾಸಿ ಕೆ.ಆರ್. ನಾಗೇಶ್ ಎಂಬ ಯುವಕ ಕಳೆದ 9 ವರ್ಷದಿಂದ ನಿರಂತರವಾಗಿ ನಿಲ್ದಾಣದಲ್ಲಿ ಕಾಫಿ-ಟೀ ಮಾರಿ ಕಾಲೇಜಿಗೆ ಹೋಗಿ ಅಭ್ಯಾಸ ಮಾಡುತ್ತಿದ್ದಾನೆ. ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತೃತೀಯ ಪದವಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. 

 ಕಾಲೇಜಿಗೆ ಸೇರಬೇಕೆಂದು ಕೇಳಿದರೆ ಹಣ ಇಲ್ಲ ಎನ್ನುವ ಮಾತು. ಮನೆಯಲ್ಲಿ ಎಲ್ಲರೂ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಈ ಯುವಕ ಹೇಗಾದರೂ ಪದವಿ ಪಡೆಯಬೇಕು ಎಂದು ನಿಶ್ವಯಿಸಿ ಬಸ್‌ನಿಲ್ದಾಣದಲ್ಲಿ ಕಾಫಿ-ಟೀ ಮಾರಲು ನಿರ್ಧರಿಸಿ ಪ್ರತಿದಿನ ಈ ಕಾಯಕ ಮುಂದುವರಿಸಿಕೊಂಡು ಅದರಿಂದ ಬಂದ ಆದಾಯದಲ್ಲಿ ಕಾಲೇಜಿಗೆ ಹೋಗುತ್ತಿದ್ದಾನೆ.

ಪ್ರತಿದಿನ ಬೆಳಿಗ್ಗೆ 5ಕ್ಕೆ ಬಸ್‌ನಿಲ್ದಾಣಕ್ಕೆ ಬಂದು ಇಲ್ಲಿ ನಿಲ್ಲುವ ಬಸ್‌ಗಳಲ್ಲಿ ಹೋಗಿ ಪ್ರಯಾಣಿಕರು, ಬಸ್ ಚಾಲಕರು, ನಿರ್ವಾಹಕರಿಗೆ ತಾಜಾ ಕಾಫಿ-ಟೀ ಯನ್ನು ಕೊಡುವುದು ನಿತ್ಯದ ಕಾಯಕವಾಗಿದೆ. ಕನಿಷ್ಠ  150ರಿಂದ 200 ಕಾಫಿ-ಟೀ ಮಾರಾಟ ಮಾಡುತ್ತಿದ್ದು, ಒಂದು ಕಪ್ ಕಾಫಿ-ಟೀಗೆ ್ಙ 3 ದರವನ್ನು ನಿಗದಿಪಡಿಸಿದ್ದು, ಅದರಿಂದ ಬಂದ ಲಾಭದಿಂದ ತನ್ನ ಓದು ಹಾಗೂ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾನೆ.

`ಹೇಗಾದರೂ ಓದಬೇಕು ಎಂದು ನಿಶ್ಚಯಿಸಿ ನಾನು ಕಾಫಿ-ಟೀ ಮಾರಲು ನಿಶ್ವಯಿಸಿದೆ. ಇದರಿಂದ ಬಂದ ಆದಾಯದಿಂದ ನನ್ನ ಕಾಲೇಜು ಅಭ್ಯಾಸಕ್ಕೆ ಹಾಗೂ ತಮ್ಮನ ಅಭ್ಯಾಸಕ್ಕೆ ಮತ್ತು ಮನೆಯವರಿಗೆ ಕೂಡಾ ನೆರವಾಗಿದೆ.

ಬಡತನ ಎಂದು ಮನೆಯಲ್ಲಿ ಕುಳಿತುಕೊಂಡಿದ್ದರೆ ಓದುವುದು ಸಾಧ್ಯವಾಗುತ್ತಿರಲಿಲ್ಲ.  ಪದವಿ ಮುಗಿದ ಮೇಲೆ  ಸ್ನಾತಕೋತ್ತರ ಪದವಿ ಮಾಡಿ ಒಳ್ಳೆಯ ಕೆಲಸಕ್ಕೆಸೇರಬೇಕೆಂಬುದು ನನ್ನ ಮಹಾದಾಸೆಯಾಗಿದೆ~ ಎಂಬುದು ನಾಗೇಶ್‌ನ ಮನದಾಳದಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.