ADVERTISEMENT

`ಶಾಶ್ವತ ಕುಡಿಯುವ ನೀರಿಗೆ `ಮಾಸ್ಟರ್ ಪ್ಲಾನ್'

ಶಾಸಕ ಶಿವಮೂರ್ತಿ ಹೇಳಿಕೆ; ಉಪ ಗ್ರಾಮಗಳಿಗೆ ಗ್ರಾಮಗಳ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 10:12 IST
Last Updated 18 ಜೂನ್ 2013, 10:12 IST

ದಾವಣಗೆರೆ: ಮಾಯಕೊಂಡ ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಸಂಬಂಧ `ಮಾಸ್ಟರ್ ಪ್ಲಾನ್' ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗುವುದು. ಪೈಪ್‌ಲೈನ್ ಮೂಲಕ ನೀರು ಕಲ್ಪಿಸಲಾಗುವುದು ಎಂದು ಶಾಸಕ ಕೆ.ಶಿವಮೂರ್ತಿ ತಿಳಿಸಿದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ಬವಣೆ ಕಂಡುಬರುತ್ತಿದೆ. ಇದನ್ನು ಹೋಗಲಾಡಿಸಲು ಯೋಜನೆ ಜಾರಿಗೊಳಿಸಲಾಗುವುದು. ಯಾವುದೇ ಗ್ರಾಮದಲ್ಲಿಯೂ ಜನ-ಜಾನುವಾರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 28 ಸಾವಿರ ಗ್ರಾಮಗಳಿವೆ. 30 ಸಾವಿರ ಉಪ ಗ್ರಾಮಗಳಿವೆ. ಈ ಉಪ ಗ್ರಾಮಗಳು, ಗ್ರಾಮಗಳಿಗಿಂತಲೂ ದೊಡ್ಡದಾಗಿ ಬೆಳೆದಿವೆ. ಆದರೆ, ಅವುಗಳಿಗೆ ಸೌಲಭ್ಯ ದೊರೆತಿಲ್ಲ. ಹೀಗಾಗಿ, ಉಪ ಗ್ರಾಮಗಳನ್ನು (ಕಂದಾಯರಹಿತ) ಗ್ರಾಮಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾದಲ್ಲಿ, ಕ್ಯಾಂಪ್‌ಗಳು, ಹಟ್ಟಿಗಳು, ತಾಂಡಗಳು ಹಾಗೂ  ಕಾಲೊನಿಗಳು  ಗ್ರಾಮಗಳಾಗಿ ರೂಪಗೊಳ್ಳಲಿವೆ. ಇದರಿಂದ ಅಲ್ಲಿನ  ನಿವಾಸಿಗಳಿಗೆ  ಮೂಲಸೌಲಭ್ಯ  ದೊರೆಯಲಿದೆ  ಎಂದು ತಿಳಿಸಿದರು.

ಈ ಸಂಬಂಧ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕು, ಗ್ರಾಮ ಎಂಬುದಕ್ಕೆ ಹೊಸದಾಗಿ ವ್ಯಾಖ್ಯಾನ ನೀಡಬೇಕು ಎಂದು ಒತ್ತಾಯಿಸಿದ್ದೇವೆ. ಸರ್ಕಾರ ಇದಕ್ಕೆ ಒಪ್ಪಿದೆ. ಮುಂದಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ ಎಂದು ಹೇಳಿದರು.

ಒಕ್ಕಲೆಬ್ಬಿಸದಂತೆ ಕ್ರಮ: ಪಾರಂಪರಿಕ ಅರಣ್ಯವಾಸಿಗಳ ಹಕ್ಕು ಕಾಯ್ದೆ 2006ರಲ್ಲಿ ಅನುಮೋದನೆ ಆಗಿದ್ದರೂ ಇನ್ನೂ ಚಾಲನೆ ಸಿಕ್ಕಿಲ್ಲ. ಅರಣ್ಯದಲ್ಲಿ ಸಾಗುವಳಿ ಮಾಡುವವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅವರು ಎಲ್ಲಿ ಕೃಷಿ ಮಾಡುತ್ತಿದ್ದಾರೆಯೋ ಅಲ್ಲಿಯೇ ಬಿಡಬೇಕು. ಅವರನ್ನು ಒಕ್ಕಲೆಬ್ಬಿಸಬಾರದು; ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಕಲೀಲ್ ಅಹಮದ್, ನಟರಾಜ್, ಹನುಮಂತನಾಯ್ಕ, ಶ್ರೀನಿವಾಸ್, ಕರಿಬಸಪ್ಪ, ಮಾರುತಿ ಕೊಡಗನೂರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಆಗಸ್ಟ್‌ನಲ್ಲೇ ಲೋಕಾರ್ಪಣೆ
`22 ಕೆರೆಗಳ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಆಗಸ್ಟ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಪ್ರಸಕ್ತ ಸಾಲಿನಲ್ಲಿ ಲೋಕಾರ್ಪಣೆ ಮಾಡಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ತಾವು ಹಾಗೂ ಶಾಸಕ ಎಚ್.ಪಿ.ರಾಜೇಶ್ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ' ಎಂದು ಶಿವಮೂರ್ತಿ ತಿಳಿಸಿದರು.

`ಕಾಮಗಾರಿಗೆ ಇದುವರೆಗೂ ರೂ 93 ಕೋಟಿ ವೆಚ್ಚವಾಗಿದೆ. ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿ ಮುಖ್ಯ ಕೊಳವೆಗಳನ್ನು ಅಳವಡಿಸಬೇಕಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಹೆದ್ದಾರಿಯನ್ನು ನಾಲ್ಕು ಪಥಗಳಿಂದ ಆರು ಪಥಗಳಿಗೆ ವಿಸ್ತರಿಸಲು ಯೋಜಿಸಿರುವ ಕಾರಣ ಅಳವಡಿಸಿರುವ ಕೊಳವೆಗಳನ್ನು ಹೊರಗಡೆ ಸ್ಥಳಾಂತರಿಸಲು ಸೂಚಿಸಿ, ಕಾಮಗಾರಿ ತಡೆಹಿಡಿದಿದ್ದರಿಂದ ಪ್ರಗತಿ ಕುಂಠಿತಗೊಂಡಿತು.

ಪಂಪ್‌ಹೌಸ್ ನಿರ್ಮಾಣದ ಸ್ಥಳವನ್ನು ರೈತರ ಮನವೊಲಿಸಿ, ಇಲಾಖೆಗೆ ಪಡೆದುಕೊಳ್ಳುವಲ್ಲಿ ಹಾಗೂ ಬೀರೂರು- ದಾವಣಗೆರೆ ರೈಲು ಮಾರ್ಗ ಹಾದು ಹೋಗುವ ಮಾರ್ಗದಲ್ಲಿ ಕೊಳವೆಬಾವಿಗಳನ್ನು ಅಳವಡಿಸಲು ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯಲು ತಡವಾಗಿದೆ. ಸಂಬಂಧಿಸಿದ ಇಲಾಖೆ ಜತೆ ಸಮನ್ವಯ ಸಾಧಿಸಿ, ಕಾಮಗಾರಿ ಪ್ರಗತಿಯಲ್ಲಿಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ಆದಾಗ್ಯೂ, ಕಾಮಗಾರಿಯ ಪ್ರಗತಿ ಪರಿಶೀಲಿಸಲು ಜೂನ್ 18ರಂದು ಅಧಿಕಾರಿಗಳ ಸಭೆ ನಡೆಸಲಾಗುವುದು. ನಂತರ, ಉಸ್ತುವಾರಿ ಸಚಿವರು, ಸಂಸತ್ ಸದಸ್ಯರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.