ADVERTISEMENT

ಶುಶ್ರೂಷಕರ ಸೇವೆ ರಾಜ್ಯಕ್ಕೂ ಸಿಗಲಿ: ಎಸ್‌ಎಆರ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 10:00 IST
Last Updated 7 ಫೆಬ್ರುವರಿ 2012, 10:00 IST

ದಾವಣಗೆರೆ: `ಕರ್ನಾಟಕದಲ್ಲಿ ನರ್ಸಿಂಗ್ ಪದವಿ ಪೂರೈಸುವ ಶುಶ್ರೂಷಕರು ಹೊರದೇಶಕ್ಕೆ ಹೋಗದೇ, ರಾಜ್ಯದಲ್ಲೇ ಸೇವೆ ಸಲ್ಲಿಸಲು ಆದ್ಯತೆ ನೀಡಲಿ~ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಸಲಹೆ ನೀಡಿದರು.

ನಗರದ ಎಸ್‌ಎಸ್ ಬಡಾವಣೆಯಲ್ಲಿ ಕುಮುದಾ ಸಮೂಹ ಸಂಸ್ಥೆಯ ರಾಘವೇಂದ್ರ ಕಾಲೇಜಿನ ನೂತನ ಕಟ್ಟಡ ಹಾಗೂ ದೀಪ ಬೆಳಗಿಸುವ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ಮೂಲಕ ಕರ್ನಾಟಕ ಶುಶ್ರೂಷಕರನ್ನು ತಯಾರಿಸುವ ಕಾರ್ಖಾನೆಯಂತಾಗಿದೆ. ಆದರೆ, ಇಲ್ಲಿ ತಯಾರಾದ ನರ್ಸಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಸಂಬಳದ ಆಸೆಗಾಗಿ ಇತರ ದೇಶಗಳಿಗೆ ತೆರಳುತ್ತಾರೆ. ರಾಜ್ಯದಲ್ಲಿ ತರಬೇತಿ ಪಡೆದ ಕಾರಣಕ್ಕಾದರೂ ಕನಿಷ್ಠ ಇಲ್ಲಿನ ಜನರ ಸೇವೆಗೆ ಆದ್ಯತೆ ನೀಡಬೇಕು ಎಂದರು.

ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಬಹುತೇಕರು ಕೇರಳದವರೇ ಆಗಿರುತ್ತಾರೆ. ಕರ್ನಾಟಕದಲ್ಲಿ ಕೋರ್ಸ್ ಮಾಡುವಾಗ ಅವರು ಕನ್ನಡ ಭಾಷೆ ಕಲಿಯಬೇಕು. ಇಲ್ಲಿನ ಜನಭಾಷೆ ಕನ್ನಡವೇ ಆಗಿರುವಾಗ ಕನ್ನಡ ಕಲಿತರೆ, ರೋಗಿಗಳನ್ನು ಉಪಚರಿಸಲು ಸಹಾಯಕವಾಗುತ್ತದೆ. ಕನ್ನಡ ತುಂಬಾ ಸುಲಭವಾಗಿ ಕಲಿಯಬಹುದಾದ ಭಾಷೆ. ರೋಗಿಗಳನ್ನು ವೈದ್ಯರಿಗಿಂತ ನರ್ಸ್‌ಗಳೇ ಚೆನ್ನಾಗಿ ಆರೈಕೆ ಮಾಡಬಲ್ಲರು ಎಂಬ ಮಾತಿದೆ. ಈ ಮಾತಿಗೆ ತಕ್ಕಂತೆ ಶುಶ್ರೂಷಕರು ಕೆಲಸ ಮಾಡಬೇಕು ಎಂದರು.

ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, `ಸಿಸ್ಟರ್~, `ಮದರ್~, `ಬ್ರದರ್~ ಎಂಬ ಶಬ್ದಗಳು ಶುಶ್ರೂಷಕರ ಆರೈಕೆಯ ಕಾರಣಕ್ಕಾಗಿ ಬಂದಿವೆ. ಆಸ್ಪತ್ರೆಯಲ್ಲಿ ರೋಗಿಗಳನ್ನು ಆರೈಕೆ ಮಾಡಿ, ಪ್ರಾಮಾಣಿಕ ಸೇವೆ ಸಲ್ಲಿಸುವ ಶುಶ್ರೂಷಕರನ್ನು ಮನೆಗೆ ಬಂದ ತಕ್ಷಣ ರೋಗಿಗಳು ಮರೆಯುತ್ತಾರೆ. ಇದು ಸಲ್ಲದು. ಶುಶ್ರೂಷಕರಿಗೆ ಕೇರಳ ಮಾದರಿಯಾಗಿರುವಂತೆ ರಾಜ್ಯವೂ ಈ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಪಾಲಿಕೆ ಮೇಯರ್ ಎಚ್.ಎನ್. ಗುರುನಾಥ್, ಸುಕ್ಷೇಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಶೈಲ ಎಂ. ಬ್ಯಾಡಗಿ, ವಾಗ್ದೇವಿ ಗ್ರಾಮಾಂತರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ಶಿವಲಿಂಗಪ್ಪ, ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಎಫ್. ಬಿಲ್ಲಳ್ಳಿ, ಮಂಗಳಂ ಗ್ರೂಪ್ ಆಫ್ ಪಬ್ಲಿಕೇಷನ್ಸ್‌ನ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಾಜನ್ ವರ್ಗೀಸ್,  ಕುಮುದಾ ನರ್ಸಿಂಗ್ ಸೈನ್ಸ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ. ಸೈಮನ್ ಹಾಜರಿದ್ದರು.

ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್. ಲಿಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಎ. ನರಸಿಂಹಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಾಂದ್ರಾ ವರ್ಗೀಸ್ ಮತ್ತು ತಂಡದವರು ಪ್ರಾರ್ಥಿಸಿದರು. ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಎ.ಆರ್. ಲಿಂಗರಾಜ ವಂದಿಸಿದರು. ಅಭಿಲಾಷ್  ಮತ್ತು ಜಾನ್ಸಿ ಜಾನ್ಸನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.