ADVERTISEMENT

ಶ್ವಾನ-ಸರ್ಪ ಕಾದಾಟ: ಸಾವಿನಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 10:35 IST
Last Updated 1 ಫೆಬ್ರುವರಿ 2012, 10:35 IST

ಹೊನ್ನಾಳಿ: ಪ್ರಕೃತಿಯಲ್ಲಿ ಪ್ರತಿದಿನ ಹಲವಾರು ವಿಸ್ಮಯಗಳು ನಡೆಯುತ್ತಿರುತ್ತವೆ. ಕೆಲ ಪ್ರಾಣಿಗಳು ಶತ್ರುತ್ವ ಮರೆತು ಬಾಳುತ್ತವೆ. ಇನ್ನು ಕೆಲವು ಒಂದೇ ಜಾತಿಯ ಪ್ರಾಣಿಗಳಾದರೂ ವೈರಿಗಳಂತೆ ಕಾದಾಡುತ್ತವೆ.
ತಾಲ್ಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 2ರ ಸುಮಾರಿಗೆ ನಡೆದ ಶ್ವಾನ-ಸರ್ಪ ಕಾದಾಟ ಸಾವಿನಲ್ಲಿ ಪರ್ಯವಸಾನಗೊಂಡ ಘಟನೆ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಸ್ವಾಮಿ ನಿಷ್ಠೆಗೆ ಹೆಸರಾದ ನಾಯಿ ಬತ್ತದ ಹುಲ್ಲು ಇತರ ಸಾಮಗ್ರಿ ಸಂಗ್ರಹಿಸಿದ್ದ ತನ್ನ ಯಜಮಾನನ ಕಣದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ ನಾಗರಹಾವನ್ನು ತಡೆದು ಕಚ್ಚಿ ಗಾಯಗೊಳಿಸಿತು. ನಾಯಿ ಕಡಿತದಿಂದ ವ್ಯಾಘ್ರಗೊಂಡ ನಾಗರಾಜ, ನಾಯಿಯನ್ನು ಕಚ್ಚಿ ಕೊಂದುಹಾಕಿದ ಕೆಲ ಕ್ಷಣಗಳಲ್ಲೇ  ಅಸು ನೀಗಿದ.

ಈ ಘಟನೆಯಿಂದ ಮೂಕವಿಸ್ಮಿತರಾದ ಬಳ್ಳೇಶ್ವರ ಗ್ರಾಮಸ್ಥರು, ಸ್ವಾಮಿನಿಷ್ಠೆ ಮೆರೆದ ನಾಯಿಯನ್ನು ಕೊಂಡಾಡಿ-ಹಾವಿನ ದ್ವೇಷ ಕಂಡು ಗಾಬರಿಗೊಂಡರು. ಗ್ರಾಮದ ಸುದರ್ಶನ ಬಾಬು, ಚನ್ನಬಸಪ್ಪ, ವರ್ಧಮಾನಪ್ಪ ಇತರರು ಹಾವಿನ ಬಾಯಿಗೆ ಹಾಲು ಬಿಟ್ಟು ಅಗ್ನಿಸ್ಪರ್ಶ ಮಾಡಿದರು. ನಾಯಿಯನ್ನು ಮಣ್ಣಲ್ಲಿ ಹೂತು ಅಂತ್ಯಕ್ರಿಯೆ ನೆರವೇರಿಸಿದಾಗ ಎಲ್ಲರ ಕಣ್ಣಂಚಲ್ಲಿ ನೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.