ಹರಪನಹಳ್ಳಿ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಅಳವಡಿಸಿರುವ ಸಂಚಾರಿ ನಿಯಮ ಸೂಚಿಸುವ ದೀಪಗಳು ಇದ್ದೂ ಇಲ್ಲದಂತಾಗಿವೆ!. ಚಾಲಕರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿರುವ ಪರಿಣಾಮ ಪಾದಚಾರಿಗಳು ಹಾಗೂ ಶಾಲಾ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡೇ ರಸ್ತೆಗೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಜಿಲ್ಲಾ ಕೇಂದ್ರ ಹೊರತುಪಡಿಸಿದರೆ ಉಪವಿಭಾಗದ ಕೇಂದ್ರ ಸ್ಥಾನಮಾನ ಹೊಂದಿ ರುವ ಹಾಗೂ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪಟ್ಟಣದಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸುಗಮ ಸಂಚಾರಿ ವ್ಯವಸ್ಥೆ ಇಲ್ಲದಂತಾಗಿದೆ.
ವಾಹನ ಸಂಚಾರ ವ್ಯವಸ್ಥೆ ಸರಳೀಕರಿಸುವ ಹಿನ್ನೆಲೆಯಲ್ಲಿ ಪುರಸಭೆ ಬಿಆರ್‌ಜಿಎಫ್ ಯೋಜನೆ ಅಡಿ ₨ 9.75ಲಕ್ಷಕ್ಕೂ ಅಧಿಕ ಅನುದಾನ ವೆಚ್ಚ ಮಾಡಿ ಬಸ್‌ನಿಲ್ದಾಣ ಸಮೀಪದ ಇಜಾರಿ ಸಿರಸಪ್ಪ ವೃತ್ತದಲ್ಲಿ ಸಿಗ್ನಲ್ ದೀಪ ಅಳವಡಿಕೆ ಸೇರಿದಂತೆ ಪ್ರವಾಸಿ ಮಂದಿರ ವೃತ್ತ, ಹರಿಹರ ವೃತ್ತ ಹಾಗೂ ಕೊಟ್ಟೂರು ವೃತ್ತಗಳಲ್ಲಿ ಬ್ಲಿಂಕರ್ಸ್ ದೀಪ ಅಳವಡಿಸಿದೆ. ಆದರೆ, ಸ್ಟೇರಿಂಗ್ ಹಿಡಿದ ಯಾವ ಚಾಲಕನೂ ಸಿಗ್ನಲ್ ಸೂಚನೆ ಪರಿಪಾಲನೆ ಮಾಡದ ಪರಿಣಾಮ ದೀಪಗಳು ಕೇವಲ ‘ಬೆದರು ಬೊಂಬೆ’ಯಂತೆ ನೇತಾಡುತ್ತ ನಗೆ ಪಾಟಲಿಗೆ ಈಡಾಗಿವೆ.
ಇಜಾರಿ ಸಿರಸಪ್ಪ ವೃತ್ತದಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ. ದಾವಣಗೆರೆಯಿಂದ ಹರಪನಹಳ್ಳಿಗೆ ಬರುವ; ಹೋಗುವ ಖಾಸಗಿ ಬಸ್‌ಗಳು ಇದೇ ವೃತ್ತದಲ್ಲಿ ‘ಯು ಟರ್ನ್’ ಪಡೆಯುತ್ತವೆ. ಚಾಲಕರು ನಿರ್ಲಕ್ಷ್ಯದಿಂದ ವಾಹನಗಳನ್ನು ಹಿಮ್ಮುಖವಾಗಿ ಚಲಾಯಿಸು ತ್ತಾರೆ. ಹೀಗಾಗಿ, ಈ ಪ್ರಮುಖ ವೃತ್ತದಲ್ಲಿ ಹಾದುಹೋಗುವ ಸಾವಿರಾರು ಪಾದಚಾರಿ ಗಳು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಶಾಲಾ ಮಕ್ಕಳು ಜೀವ ಭಯದಿಂದಲೇ ರಸ್ತೆ ದಾಟಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ನಿತ್ಯವೂ ಅನುಭವಿಸುತ್ತಿದ್ದಾರೆ. ಖಾಸಗಿ ಬಸ್‌ಗಳ ಬೇಕಾಬಿಟ್ಟಿ ಸಂಚಾರ, ಆಟೋರಿಕ್ಷಾ, ದ್ವಿಚಕ್ರ ವಾಹನ, ಟಂಟಂ, ಗೂಡ್ಸ್ ವಾಹನಗಳು ಸಹ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿವೆ. ಹೀಗಾಗಿ, ಈ ವೃತ್ತವನ್ನು ‘ಅಪಘಾತ ವಲಯ’ ಎಂದು ಹೆಸರು ಗುರುತಿಸುವ ದಿನ ದೂರ ಉಳಿದಿಲ್ಲ.
ಹೊಸಪೇಟೆ ಮಾರ್ಗವಾಗಿ ಪ್ರವಾಸಿಮಂದಿರ ವೃತ್ತದ ಮೂಲಕ ಆಗಮಿಸುವ ಹಾಗೂ ನಿರ್ಗಮಿಸುವ ವಾಹನಗಳು ಸಹ ಅಪಘಾತವನ್ನು ಬೆನ್ನಿಗೆ ಕಟ್ಟಿಕೊಂಡೇ ಸಂಚಾರಿಸುತ್ತಿವೆ. ಹೊಸಪೇಟೆ ರಸ್ತೆಯ ಪ್ರವಾಸಿಮಂದಿರ ವೃತ್ತ ಮೂರು ರಸ್ತೆಗೆ ಕವಲೊಡೆಯುತ್ತಿದೆ. ಇಲ್ಲಿಯೂ ಸಹ, ಮುನ್ನೆಚ್ಚರಿಕೆ ಕ್ರಮವಾಗಿ ಬ್ಲಿಂಕರ್ ಅಳವಡಿಸಲಾಗಿದೆ. ಆದರೆ, ಅದಾವುದನ್ನು ಗಮನಿಸದ ಚಾಲಕರು ಬೇಕಾಬಿಟ್ಟಿ ವಾಹನ ಚಲಾಯಿಸುತ್ತಾರೆ. ಇಲ್ಲಿಯೂ ಸಹ, ಸಿಗ್ನಲ್ ದೀಪ ನೆಪ ಮಾತ್ರಕ್ಕೆ ಎಂಬಂತಾಗಿದೆ.
ಹರಿಹರ ವೃತ್ತದಲ್ಲಿಯೂ ಸಹ ಅರಸೀಕೆರೆ, ಹರಿಹರ ಹಾಗೂ ಕೊಟ್ಟೂರು ಬೈಪಾಸ್ ರಸ್ತೆಗೆ ಕವಲೊಡೆಯುತ್ತದೆ. ಇಲ್ಲಿಯೂ ಸಂಚಾರಿ ದೀಪ ಅಳವಡಿಸಲಾಗಿದೆ. ಆದರೂ, ಅದು ತಾನಾ ಯಿತು; ತನ್ನ ಪಾಡಾಯಿತು ಎಂಬಂತಿದೆ. ಆದರೆ, ಯಾವಾಗ ಬೇಕಾದರೂ ಇಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ. ಇನ್ನೂ ಬಸ್‌ನಿಲ್ದಾಣದಿಂದ ಸಂತೆ ಮೈದಾನದ ಪುರಸಭೆ ವಾಣಿಜ್ಯ ಮಳಿಗೆ ಮುಂಭಾಗ, ಬಣಗಾರ ಪೇಟೆ, ಹಳೇ ತಾಲ್ಲೂಕು ಕಚೇರಿ, ಪಶುಪಾಲನಾ ಇಲಾಖೆ ಹಾಗೂ ಅಷ್ಟೇ ಏಕೆ ಸ್ವತಃ ಪೊಲೀಸ್ ಠಾಣೆ ಮುಂಭಾಗದಲ್ಲಿ ವಾಹನ ನಿಲುಗಡೆ ಫಲಕ ಅಳವಡಿಸಲಾಗಿದೆ. ಆದರೂ, ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುತ್ತಾರೆ. ಹೀಗಾಗಿ, ಪಾದ ಚಾರಿಗಳು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದೆ ಎನ್ನುತ್ತಾರೆ ಪಟ್ಟಣದ ನಿವಾಸಿ ತೆಲಿಗಿ ಉಮಾಕಾಂತ್.
ಪಟ್ಟಣದಲ್ಲಿ ಹಾದುಹೋಗಿರುವ ಶಿವಮೊಗ್ಗ– ಮರಿಯಮ್ಮನಹಳ್ಳಿ ರಾಜ್ಯ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆ ₨ 3ಕೋಟಿ ಹಾಗೂ ಡಾ.ನಂಜುಂಡಪ್ಪ ವರದಿಯ ಬಿಆರ್‌ಜಿಎಫ್ ಯೋಜನೆ ಅಡಿ ₨ 1ಕೋಟಿ ಮೊತ್ತ ಸೇರಿದಂತೆ ಒಟ್ಟು ₨ 4ಕೋಟಿ ಮೊತ್ತದಲ್ಲಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಿದೆ. ಆದರೆ, ಹೆಸರಿಗೆ ಮಾತ್ರ ಇದು ದ್ವಿಪಥ ರಸ್ತೆ. ಆಟೋರಿಕ್ಷಾ, ದ್ವಿಚಕ್ರ ವಾಹನ ಸವಾರರು, ಅಷ್ಟೇ ಏಕೆ ಲಾರಿಯಂತಹ ಭಾರೀ ವಾಹನಗಳು ಸಹ ಒಂದೇ ರಸ್ತೆಯಲ್ಲಿ ಮುಖಾಮುಖಿಯಾಗಿ ಸಂಚರಿಸುತ್ತಿವೆ.
ಹೀಗಾಗಿ, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ಶಾಲಾ ಮಕ್ಕಳು ಜೀವ ಭಯದಿಂದ ಓಡಾಡಬೇಕಾಗಿದೆ. ರಸ್ತೆಯ ಉಭಯ ಬದಿಗಳಲ್ಲಿ ನಿರ್ಮಿಸಿರುವ ಪಾದಚಾರಿ(ಫುಟ್‌ಬಾತ್) ರಸ್ತೆಯ ಮೇಲೆ ಮನೆಯ ಮೆಟ್ಟಿಲು ಹಾಗೂ ಗೂಡಂಗಡಿ ಕುಳಿತಿರುವ ಹಿನ್ನೆಲೆಯಲ್ಲಿ ಪಾದಚಾರಿಗಳು ರಸ್ತೆಯ ಮೇಲೆ ವಾಹನಗಳ ದಟ್ಟಣೆಯ ಮಧ್ಯೆ ಸಂಚರಿಸಬೇಕಾಗಿದೆ. ಹಳೇ ಸಾರ್ವಜನಿಕ ಆಸ್ಪತ್ರೆ ಬಳಿ ಖಾಸಗಿ ವಾಹನಗಳು ಇದೇ ರಸ್ತೆಯ ಮೇಲೆ ನಿಲುಗಡೆ ಮಾಡುತ್ತಿದ್ದರೂ ಪೊಲೀಸರು ಕಿಮಕ್ ಅನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪಟ್ಟಣದ ನಿವಾಸಿ ಎಲ್. ಮಂಜಾನಾಯ್ಕ.
ಅಪಘಾತದಿಂದ ಸಾವು ಸಂಭವಿಸುವ ಮುನ್ನ ಪೊಲೀಸ್ ಇಲಾಖೆ ಗಾಢ ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ಮೂಲಕ ಸಂಚಾರಿ ಅವ್ಯವಸ್ಥೆಯನ್ನು ಸರಿದಾರಿಗೆ ತರುವ ಕೆಲಸಕ್ಕೆ ಮುಂದಾಗಬೇಕು ಎಂಬುದು ಸಾರ್ವನಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.