ADVERTISEMENT

ಸಂಭ್ರಮದ ಮಹಾವೀರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:25 IST
Last Updated 24 ಏಪ್ರಿಲ್ 2013, 10:25 IST

ಪ್ರಜಾವಾಣಿ ವಾರ್ತೆ
ದಾವಣಗೆರೆ: ನಗರದಲ್ಲಿ ಮಂಗಳವಾರ ಜೈನ ಸಮುದಾಯ ಮಹಾವೀರ ಜಯಂತಿಯನ್ನು ಸಂಭ್ರಮ -ಸಡಗರದಿಂದ ಆಚರಿಸಿತು.
ನಗರದ ನರಸರಾಜ ರಸ್ತೆಯಲ್ಲಿರುವ ಪಾರ್ಶ್ವನಾಥ ದಿಗಂಬರ ಜೈನ ಮಂದಿರಲ್ಲಿ ಬೆಳಿಗ್ಗೆ 7.30ರಿಂದ 9ರ ವರೆಗೆ ಜೈನ ತೀರ್ಥಂಕರ ಮಹಾವೀರ ಮೂರ್ತಿಗೆ ವಿವಿಧ ರೀತಿಯ ಅಭಿಷೇಕ ಮಾಡಲಾಯಿತು. ಕಬ್ಬಿನಹಾಲು, ಎಳನೀರು, ಶ್ರೀಗಂಧ ಮತ್ತು ಹಾಲಿನಿಂದ ಮೂರ್ತಿಗೆ ಅಭಿಷೇಕ ಮಾಡಿದ ನಂತರ ವಿವಿಧ ರೀತಿಯ ಪೂಜಾ ವಿಧಿ- ವಿಧಾನಗಳನ್ನು ನೆರವೇರಿಸಲಾಯಿತು.

ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮಹಾವೀರ ಮೂರ್ತಿ ಹಾಗೂ ಮಹಾವೀರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ನರಸರಾಜ ರಸ್ತೆಯಿಂದ ಹೊರಟ ಮೆರವಣಿಗೆ ಮಹಾವೀರ ರಸ್ತೆ, ಕೆ.ಆರ್. ರಸ್ತೆ, ಮಂಡಿಪೇಟೆ, ವಿಜಯಲಕ್ಷ್ಮೀ, ಚೌಕಿಪೇಟೆ ಮುಖಾಂತರ ನರಸರಾಜ ರಸ್ತೆಗೆ ಹಿಂದಿರುಗಿತು.

ಸಂಜೆ ಮಹಾವೀರ ಜನ್ಮ ಕಲ್ಯಾಣ ನಿಮಿತ್ತ ಬಾಲ ಮಹಾವೀರನ ತೊಟ್ಟಿಲ ಕಾರ್ಯಕ್ರಮ, ನಾಮಕರಣ ಶಾಸ್ತ್ರಗಳನ್ನು ಜೈನ ಸಮಾಜದ ಮಹಿಳೆಯರು ನೆರವೇರಿಸಿದರು. ನಂತರ ಸಮಾಜ ಬಾಂಧವರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮಹಾವೀರ ಯುವಕ ಸಂಘದ ವತಿಯಿಂದ ನಗರದ ಹೆರಿಗೆ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.