ADVERTISEMENT

ಸಂಸ್ಕೃತಿ ಬೆಳೆಸುವುದೇ ನೈಜ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 8:05 IST
Last Updated 10 ಅಕ್ಟೋಬರ್ 2011, 8:05 IST

ಹೊನ್ನಾಳಿ: ಶಿಕ್ಷಣ ಕೇವಲ ಪಠ್ಯಕ್ರಮವಲ್ಲ. ವ್ಯಕ್ತಿಯಲ್ಲಿ ಮಾನವೀಯ ಮೌಲ್ಯ, ಉತ್ತಮ ಸಂಸ್ಕೃತಿ ಬೆಳೆಸುವುದೇ ನೈಜ ಶಿಕ್ಷಣ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 2011-12 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಾವು ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಸಾಕಷ್ಟು ಕೊಠಡಿ ನಿರ್ಮಿಸಲಾಗಿದೆ. ಪಟ್ಟಣದ ಸರ್ಕಾರಿ ಪದವಿಪೂರ್ವ, ಪ್ರಥಮದರ್ಜೆ ಕಾಲೇಜಿನ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ನ್ಯಾಮತಿಯ ಪದವಿಪೂರ್ವ ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ರೂ 1ಕೋಟಿ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಟ್ಟಡ ಕಳಪೆಯಾಗಿದೆ. ಅದನ್ನು ಸರಿಪಡಿಸದ್ದಿರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು. ಕಾಲೇಜು ಕಟ್ಟಡಕ್ಕೆ ಹೆಚ್ಚುವರಿಯಾಗಿ ್ಙ 1ಕೋಟಿ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು. ಕಾಲೇಜಿನಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮುಖ್ಯ ರಸ್ತೆಯಿಂದ ಕಾಲೇಜು ಸಂಪರ್ಕ ರಸ್ತೆ ಡಾಂಬರೀಕರಣ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ತಮ್ಮ ತಾಯಿ ದಿ. ಕಮಲಮ್ಮ ಮತ್ತು ತಂದೆ ದಿ.ಎಂ. ಪಂಚಾಕ್ಷರಯ್ಯ ಇವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರಕ್ಕೆ ಪ್ರಥಮದರ್ಜೆ ಕಾಲೇಜಿನಲ್ಲಿ ್ಙ 1ಲಕ್ಷ ಮೌಲ್ಯದ ದತ್ತಿನಿಧಿ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಕಾಲೇಜು ಕೈಪಿಡಿ `ದೀವಟಿಗೆ~ಯನ್ನು ರೇಣುಕಾಚಾರ್ಯ ಬಿಡುಗಡೆ ಮಾಡಿದರು. ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಡಾ.ಚಂದ್ರಶೇಖರ ಕಂಬಾರ ಅವರ ಬದುಕು-ಬರಹದ ಕುರಿತು ಉಪನ್ಯಾಸ ನೀಡಿದರು.
ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಪ್ರಥಮದರ್ಜೆ ಕಾಲೇಜಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಚಿವರಲ್ಲಿ ವಿನಂತಿಸಿದರು.

ಲೇಖಕ ಪ್ರೊ.ಬಿ.ಪಿ. ವೀರೇಂದ್ರಕುಮಾರ್, ಡಾ.ಬಿ.ಜಿ. ಚನ್ನೇಶ್, ಪ್ರೊ.ಡಿ.ಸಿ. ಪಾಟೀಲ್, ಹರೀಶ್, ಎಚ್.ಎ. ನಾಗರಾಜ್, ನಿಂಗಾಚಾರ್, ಹನುಮಂತಪ್ಪ, ಜಬೀವುಲ್ಲಾಖಾನ್ ಉಪಸ್ಥಿತರಿದ್ದರು.

ಪ್ರೊ.ಎಂ. ರಾಜ್‌ಕುಮಾರ್ ಸ್ವಾಗತಿಸಿದರು. ಪ್ರೊ.ರಾಘವೇಂದ್ರ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೊ.ಎಂ.ಎನ್. ರಮೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.