ADVERTISEMENT

ಸಮರ್ಪಕ ಮೇವು ಪೂರೈಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 5:40 IST
Last Updated 15 ಫೆಬ್ರುವರಿ 2012, 5:40 IST

ದಾವಣಗೆರೆ: ಸರ್ಕಾರ ಹೊರಡಿಸುವ ಸುತ್ತೋಲೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಶೋಕ್ ಕುಮಾರ್ ಸಿ. ಮನೋಳಿ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿರುವ ಜಗಳೂರಿನಲ್ಲಿ ಪಶುಗಳಿಗೆ ಮೇವಿನ ಲಭ್ಯತೆ, ಸಂಗ್ರಹ, ಪರ್ಯಾಯ ಮೇವು ಬೆಳೆಯಲು ವಹಿಸಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಶುಸಂಗೋಪನಾ ಇಲಾಖೆ ಅಧಿಕಾರಿ ಜಗಳೂರಿನಲ್ಲಿ ಒಟ್ಟು 32,024 ಮೆಟ್ರಿಕ್ ಟನ್ ಮೇವು ಲಭ್ಯವಿದೆ.
 

ಅದು ಮುಂದಿನ 13ವಾರಗಳವರೆಗೆ ಲಭ್ಯವಾಗುವುದು ಎಂದರು. ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಉಳಿದಿರುವ ಜಾಗಗಳಲ್ಲಿ ಹಾಗೂ ಜಗಳೂರಿನಲ್ಲಿರುವ ಸರ್ಕಾರಿ ಭೂಮಿಗಳಲ್ಲಿ ಮೇವು ಬೆಳೆಸಿ ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಮನೋಳಿ ಸೂಚಿಸಿದರು.

ಪ್ರಸ್ತುತ ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರು ಸರಬರಾಜಿನ ಬಗ್ಗೆ ಜಿ.ಪಂ ಸಿಇಒ ಗುತ್ತಿ ಜಂಬುನಾಥ್ ವಿವರಿಸಿ, ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ, 345 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ್ಙ 173 ಕೋಟಿ ಮೊತ್ತದ 14 ಯೋಜನೆಗಳು ಅನುಮೋದನೆ ಆಗಿದೆ. ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಇತರ ಯೋಜನೆಗಳಡಿ 14 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ 4 ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೂರು ಯೋಜನೆಗಳು ಪೂರ್ಣಗೊಂಡಿವೆ, ಒಂದು ಯೋಜನೆಯನ್ನು ಮಾರ್ಚ್- 2012ರ ಅಂತ್ಯಕ್ಕೆ ಪೂರ್ಣಗೊಳಿಸುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಕುಡಿಯುವ ನೀರಿಗೆ ಸಂಪೂರ್ಣ ಆದ್ಯತೆ ನೀಡಲಾಗಿದೆ.
 
ಭೂ ವಿಜ್ಞಾನಿಗಳ ಸಲಹೆಯ ಮೇರೆಗೆ ಸಮಸ್ಯೆಗಳಿರುವ ಗ್ರಾಮಗಳಿಗೆ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ವೃದ್ಧಾಪ್ಯವೇತನ, ಅಂಗವಿಕಲರ ವೇತನ ಬಿಡುಗಡೆ ಮಾಡುವ ಸಂದರ್ಭದಲ್ಲಿ ಸಂಬಂಧಿಸಿದ ತಹಶೀಲ್ದಾರರು ಕಾನೂನಿನ ಮಾರ್ಗಸೂಚಿ ಪ್ರಕಾರವೇ ಬಿಡುಗಡೆ ಮಾಡಬೇಕು. ಈ ಸಂದರ್ಭದಲ್ಲಿ ಯಾವುದೇ ಆಸೆ, ಆಮಿಷ ಹಾಗೂ ಒತ್ತಡಕ್ಕೆ ಒಳಗಾಗಬಾರದು, ಯಾವುದೇ ಸರ್ಕಾರಿ ಭೂಮಿ ಒತ್ತುವರಿ ತಡೆಗೆ ಅವರು ಕ್ರಮವಹಿಸಬೇಕು, ಹಾಗೂ ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ ಹೇಳಿದ ಅವರು, ಭೂ ಒತ್ತುವರಿ ಹಾಗೂ ಪರಭಾರೆಯಾಗುತ್ತಿರುವ ಸ್ವತ್ತು ಮುಂದಿನ ಪೀಳಿಗೆಗೆ ಸೇರಬೇಕಾದದ್ದು. ಈ ನಿಟ್ಟಿನಲ್ಲಿ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಸುವರ್ಣ ಗ್ರಾಮೋದಯ ಯೋಜನೆಯ 3ನೇ ಹಂತ, ಜಲಾನಯನ ಅಭಿವೃದ್ಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನದಲ್ಲಿ ಆದ ಪ್ರಗತಿಯ ವಿವರಗಳನ್ನು ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT