ADVERTISEMENT

ಸರ್ಕಾರಿ ಶಾಲಾ ಕೊಠಡಿ ಗಳ ದುಸ್ಥಿತಿ

ರಾಮನಗರ: ಮಕ್ಕಳಿಗೆ ಶಾಲಾ ಮೈದಾನವೇ ತರಗತಿ, 2 ಕೊಠಡಿಗಳ ಚಾವಣಿ ಶಿಥಿಲ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 5:59 IST
Last Updated 9 ಜೂನ್ 2018, 5:59 IST
ಒಡೆದು ಇತ್ತೀಚಿಗೆ ಬೀಸಿದ ಬಿರುಗಾಳಿಗೆ ಕೊಠಡಿಯ ಹೆಂಚುಗಳು ಹಾರಿ ಹೋಗಿ ಸೋರುತ್ತಿರುವುದು
ಒಡೆದು ಇತ್ತೀಚಿಗೆ ಬೀಸಿದ ಬಿರುಗಾಳಿಗೆ ಕೊಠಡಿಯ ಹೆಂಚುಗಳು ಹಾರಿ ಹೋಗಿ ಸೋರುತ್ತಿರುವುದು   

ಉಚ್ಚಂಗಿದುರ್ಗ: ಮಕ್ಶಳ ಭವಿಷ್ಯ ರೂಪಿಸುವ ಶಾಲೆಗಳಲ್ಲಿ ಸುಸಜ್ಜಿತವಾದ ಕೊಠಡಿಗಳು, ಸಮರ್ಪಕವಾದ ಶೌಚಾಲಯಗಳೇ ಇಲ್ಲ. ಸಮೀಪದ ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಲವು ವರ್ಷಗಳಿಂದ ಅನುಭವಿಸುತ್ತಿರುವ ದುಸ್ಥಿತಿ ಇದು.

ಶಾಲೆಯಲ್ಲಿ 4 ಕೊಠಡಿಗಳಿದ್ದು, 2 ಕೊಠಡಿಗಳ ಚಾವಣಿ ಸಂಪೂರ್ಣ ಶಿಥಿಲಗೊಂಡಿದೆ. ಮತ್ತೊಂದು ಕೊಠಡಿಯ ಹೆಂಚುಗಳು ಒಡೆದು ಇತ್ತೀಚಿಗೆ ಬೀಸಿದ ಬಿರುಗಾಳಿಗೆ ಹಾರಿಹೋಗಿವೆ. ಕೊಠಡಿಗಳು ದುರಸ್ತಿಗೂ ಯೋಗ್ಯವಾಗಿಲ್ಲ. ಚಾವಣಿ ಯಾವಾಗ ಬೇಕಾದರೂ ಕಳಚಿ ಬೀಳುವ ಹಂತದಲ್ಲಿದೆ. ಹೀಗಾಗಿ ಶಿಕ್ಷಕರು ಮೈದಾನದಲ್ಲಿ ಪಾಠ ಮಾಡುವಂತಾಗಿದೆ.

ಮಳೆ ಜೋರಾಗಿ ಬಂದರೆ ಸಾಕು, ಬೋಧನಾ ಕೊಠಡಿಯೊಳಗೆ ನೀರು ಸಂಗ್ರಹವಾಗುತ್ತದೆ. ಮಳೆಯಿಂದ ಚಾವಣಿ ಬಿರುಕು ಬಿಡುತ್ತಿದ್ದು, ಮಕ್ಕಳ ಪುಸ್ತಕ, ಬೆಂಚುಗಳ ಮೇಲೆ ಸುರಿಯುತ್ತಿದೆ. ಬಾಗಿಲುಗಳು ಮುರಿದುಹೋಗಿದ್ದು, ಕಿಟಕಿಗಳು ಹಾಳಾಗಿವೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ನಿತ್ಯ ಆತಂಕದಿಂದಲೇ ಕಾಲ ಕಳೆಯುವಂತಾಗಿದೆ.

ADVERTISEMENT

ಶಾಲೆಯಲ್ಲಿ 125 ವಿದ್ಯಾರ್ಥಿಗಳು ಹಾಗೂ 4 ಶಿಕ್ಷಕರಿದ್ದಾರೆ. ಮಕ್ಕಳು ಶೌಚಾಲಯ ಇಲ್ಲದೇ ಮನೆ ಹಾಗೂ ಬಯಲನ್ನೇ ಅವಲಂಬಿ
ಸುವಂತಹ ಸ್ಥಿತಿ ನಿರ್ಮಾಣವಾಗಿದೆ‌. ಹಾಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ‍ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಶಾಲಾ ಸಿಬ್ಬಂದಿಯ ಒತ್ತಾಯ.

ಶಾಲೆಯ ದುಸ್ಥಿತಿ ಕುರಿತು ಮೇಲಧಿಕಾರಿಗಳಿಗೆ ಅರ್ಜಿಗಳ ಮೂಲಕ ಮನವಿ ಮಾಡಲಾಗಿದೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಲಿ ಬೇಸರ ವ್ಯಕ್ತಪಡಿಸುತ್ತಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆಗಳು ದುಸ್ಥಿತಿಗೆ ತಲುಪಿವೆ. ಅಧಿಕಾರಿಗಳು ಜನ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತ ಸಂಘದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು
ಕರಡಿದುರ್ಗ ಚೌಡಪ್ಪ. ರೈತ ಸಂಘದ ತಾಲ್ಲೂಕು ಅಧ್ಯಕ್ಷ

ಶಾಲೆಯ ಒಂದು ಕೊಠಡಿಯನ್ನು ಹೊರತು ಪಡಿಸಿದರೆ, 3 ಕೊಠಡಿಗಳು ದುಸ್ಥಿತಿಯಲ್ಲಿವೆ. ಶೌಚಾಲಯ ಹಾಗೂ ಕೊಠಡಿಗಳ ನಿರ್ಮಾಣಕ್ಕೆ ಮನವಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ
ಚಂದ್ರಮೌಳಿ. ಮುಖ್ಯ ಶಿಕ್ಷಕರು.

– ರಾಮಚಂದ್ರ ಉಚ್ಚಂಗಿದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.