ADVERTISEMENT

ಸರ್ಕಾರ ವಜಾಕ್ಕೆ ದಸಂಸ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:00 IST
Last Updated 16 ಫೆಬ್ರುವರಿ 2011, 10:00 IST

ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಾ.ಅಂಬೇಡ್ಕರ್ ವಾದ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಯಿತು.ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿನೋಟಿಫಿಕೇಷನ್ ಹಗರಣದಲ್ಲಿ ಸ್ವತಃ ಭಾಗಿಯಾಗಿದ್ದು, ವೈಯಕ್ತಿಕ ಅಭಿವೃದ್ಧಿಗೇ ಆದ್ಯತೆ ನೀಡಿದ್ದಾರೆ. ಆಡಳಿತದಲ್ಲಿ ಭ್ರಷ್ಟಾಚಾರ ಸ್ವಜನ ಪಕ್ಷಪಾತ ತೀವ್ರವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ದಲಿತರ ಅಭಿವೃದ್ಧಿ ಅವಗಣನೆಗೆ ಒಳಗಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಿಲ್ಲ. ಮುಖ್ಯಮಂತ್ರಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂದು ದೂರಿದರು.ದಲಿತ ವಿದ್ಯಾರ್ಥಿನಿಲಯದ ಕೊಠಡಿಗಳು ದನದ ದೊಡ್ಡಿಗಳಂತಿವೆ. ಅಂಬೇಡ್ಕರ್ ಭವನಕ್ಕೆ ನಿವೇಶನ ಗುರುತಿಸುವಲ್ಲಿ ಜಿಲ್ಲಾಡಳಿತ ಉದಾಸೀನ ತೋರುತ್ತಿದೆ. ರಾಜ್ಯದಾದ್ಯಂತ ಪರಿಶಿಷ್ಟ ಜಾತಿ, ಪಂಗಡಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ.

ರಾಜ್ಯದಲ್ಲಿ ಭೂರಹಿತರಿಗೆ ಕೃಷಿ ಭೂಮಿ ಒದಗಿಸಬೇಕು. ಜಿಲ್ಲೆಯ ಹರಿಹರದ ಭಾರತ್ ಆಯಿಲ್ ಮಿಲ್ ಹಿಂಭಾಗದ ಕೊಳಚೆ ಪ್ರದೇಶದಲ್ಲಿ ನಿರ್ಮಿಸಿರುವ 60 ಮನೆಗಳ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ನಿಂಗಪ್ಪ ಕಂದಗಲ್, ಸುರೇಶ ದೊಡ್ಡಮನಿ, ಎಚ್. ಮಲ್ಲೇಶಿ, ಎಸ್. ತಿಪ್ಪೆಸ್ವಾಮಿ ಅತ್ತಿಗೆರೆ, ರಮೇಶ ನಾಯ್ಕ ಹರಿಹರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.