ADVERTISEMENT

ಸಹಕಾರ ಒಕ್ಕೂಟಗಳಿಂದ ಸಿರಿಧಾನ್ಯಕ್ಕೆ ಯೋಗ್ಯ ಧಾರಣೆ: ಶ್ರೀಧರ ಮೂರ್ತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 4:45 IST
Last Updated 26 ಅಕ್ಟೋಬರ್ 2017, 4:45 IST
ಸಹಕಾರ ಒಕ್ಕೂಟಗಳಿಂದ ಸಿರಿಧಾನ್ಯಕ್ಕೆ ಯೋಗ್ಯ ಧಾರಣೆ: ಶ್ರೀಧರ ಮೂರ್ತಿ
ಸಹಕಾರ ಒಕ್ಕೂಟಗಳಿಂದ ಸಿರಿಧಾನ್ಯಕ್ಕೆ ಯೋಗ್ಯ ಧಾರಣೆ: ಶ್ರೀಧರ ಮೂರ್ತಿ   

ಮಾಯಕೊಂಡ: ಸಾವಯವ ಕೃಷಿಕರ ಸಹಕಾರ ಸಂಘಗಳಿಂದ ಸಿರಿಧಾನ್ಯಗಳಿಗೆ ಯೋಗ್ಯ ಬೆಲೆ ದೊರೆಯುತ್ತಿದೆ ಎಂದು ಕೃಷಿ ಅಧಿಕಾರಿ ಶ್ರೀಧರ ಮೂರ್ತಿ ಅಭಿಪ್ರಾಯಪಟ್ಟರು.

ಸಮೀಪದ ಎಚ್. ರಾಂಪುರ ಗ್ರಾಮದಲ್ಲಿ ಬುಧವಾರ ಕೃಷಿ ಇಲಾಖೆ ಮತ್ತು ಸಾವಯವ ಸಹಕಾರ ಒಕ್ಕೂಟ ಆಯೋಜಿಸಿದ ಸಾವಯವ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ನಗಣ್ಯವಾಗಿದ್ದ ಸಿರಿಧಾನ್ಯಗಳಿಗೆ ಇಂದು ಯೋಗ್ಯ ಬೆಲೆ ದೊರಕಿದೆ. ಸಹಕಾರ ಸಂಘ ರಚಿಸಿಕೊಂಡಿರುವುದರಿಂದ ಸ್ಪರ್ಧಾತ್ಮಕ ಬೆಲೆ ದೊರಕುತ್ತದೆ. ಸಾವಯವ ಕೃಷಿಕರ ಸಹಕಾರ ಒಕ್ಕೂಟ ರೈತರ ಬೆಲೆಯ ಆತಂಕ ದೂರವಾಗಿಸಿದೆ. ಹೋಬಳಿಯಲ್ಲಿ ಕೆಲವೇ ಎಕರೆಗಳಲ್ಲಿ ಬೆಳೆಯುತ್ತಿದ್ದ ಸಿರಿಧಾನ್ಯ ಇಂದು ಸುಮಾರು 300–350 ಎಕರೆ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಇಲಾಖೆಯು ಸಹಾಯಧನ ನೀಡಿ ಬೆಳೆಗಾರರನ್ನು ಉತ್ತೇಜಿಸುತ್ತಿದೆ ಎಂದರು.

ADVERTISEMENT

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗಿದ್ದು, ರೈತರನ್ನೂ ಕರೆದೊಯ್ಯಲಾಗುತ್ತದೆ. ಮೌಲ್ಯವರ್ಧಿತ ಉತ್ಪನ್ನ ತಯಾರಿಕಾ ಕಂಪೆನಿಗಳ ವಸ್ತು ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಸಾವಯವ ಕೃಷಿಕರ ಸಹಕಾರ ಒಕ್ಕೂಟದ ಅಧ್ಯಕ್ಷ ಕೃಪಾ ಮಾತನಾಡಿ, ‘ಸಹಕಾರ ಇಲಾಖೆ ನಿಯಮದಡಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಂದ ಒಕ್ಕೂಟ ರಚಿಸಲಾಗಿದೆ. ಷೇರು ಬಂಡವಾಳ ಸಂಗ್ರಹಿಸಿ, ಸಾವಯವ ಕೃಷಿ ಉತ್ಪನ್ನ ಖರೀದಿಸಲಾಗುತ್ತಿದೆ. ಈ ವರ್ಷ ಒಕ್ಕೂಟ ₹ 2.50 ಲಕ್ಷ ಲಾಭ ಗಳಿಸಿದೆ. ರೈತರಿಗೆ ಉಚಿತ ಬೀಜ, ಸಾವಯವ ಗೊಬ್ಬರ ಮತ್ತು ತಾಂತ್ರಿಕ ಮಾಹಿತಿ ನೀಡಿ ಬೆಳೆಯನ್ನೂ ಸ್ಪರ್ಧಾತ್ಮಕ ದರದಲ್ಲಿ ಖರೀದಿಸಿಲಾಗುತ್ತದೆ. ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಮಾರಾಟ ಮಳಿಗೆ ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಸಾವಯವ ತಜ್ಞ ಸುರೇಶ್ ಗೌಡ ಮಾತನಾಡಿ, ‘ರಾಸಾಯನಿಕ ಕೀಟ ಮತ್ತು ಗೊಬ್ಬರ ಬಳಕೆಯಿಂದ ಭೂಸಾರ ಕುಸಿದಿದೆ. ಸಾವಯವ ಕೀಟ ನಾಶಕ ಮತ್ತು ರೋಗ ನಾಶಕ ಬಳಸಿದರೆ ಫಲವತ್ತತೆ ಉಳಿಸಿಕೊಳ್ಳಬಹುದು. ಹಿಡಿ ಮಣ್ಣಿನಲ್ಲಿನ 300 ಕೋಟಿ ಜೀವಾಣುಗಳು ರಾಸಾಯನಿಕಗಳ ಬಳಕೆಯಿಂದ ನಾಶವಾಗಿ, ಭೂಮಿ ಬರಡಾಗುತ್ತಿದೆ ಎಂದು ತಿಳಿಸಿದರು.

ಸಹಾಯಕ ಕೃಷಿ ಅಧಿಕಾರಿ ಅಡವಿ, ಒಕ್ಕೂಟದ ನಿರ್ದೇಶಕ ಪರಮೇಶ್, ಸಹಾಯಕ ರಮೇಶ್ ಮುಖಂಡರಾದ ಎನ್. ಎಂ.ರಾಜೀವಪ್ಪ ಮತ್ತು ಗ್ರಾಮಸ್ಥರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.