ADVERTISEMENT

`ಸಾಮಾಜಿಕ ಪರಿವರ್ತನೆ ಹರಿಕಾರ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:19 IST
Last Updated 7 ಡಿಸೆಂಬರ್ 2012, 5:19 IST

ಹರಪನಹಳ್ಳಿ:  ಅಸ್ಪೃಶ್ಯತೆ, ಅಸಮಾನತೆ, ಜಾತಿ, ವರ್ಗ ವ್ಯವಸ್ಥೆಯಲ್ಲಿ ಜಿಡ್ಡುಗಟ್ಟಿರುವ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ, ಸಮಾನತೆಯ ನೆಲೆಗಟ್ಟಿನಲ್ಲಿ ಸಾಮಾಜಿಕ ವ್ಯವಸ್ಥೆ ರೂಪಿಸುವ ಮೂಲಕ ಶೋಷಿತ ಸಮುದಾಯಗಳ ಬದುಕಿಗೆ ತಾತ್ವಿಕದಾರಿ ತೋರಿದ ದಿವ್ಯಮಾನವ ಡಾ.ಬಿ.ಆರ್. ಅಂಬೇಡ್ಕರ್ ಎಂದು ಡಾ.ಬಿ.ಆರ್. ಅಂಬೇಡ್ಕರ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ ಬಣ್ಣಿಸಿದರು.

ಸ್ಥಳೀಯ ಪ್ರವಾಸಿಮಂದಿರದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಗುರುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 56ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಆಡಳಿತ ರಥದ ಸಾರಥ್ಯಕ್ಕೆ ಅಗತ್ಯವಾದ ಕಾನೂನಿನ ಚೌಕಟ್ಟು ನಿರ್ಮಿಸಿದ ಬಾಬಾಸಾಹೇಬರ ಚಿಂತನೆಗಳನ್ನು ನಾವು ಮರೆತಿದ್ದೇವೆ. ಅವರ ಆದರ್ಶಗಳ ಕುರಿತು ಕನಿಷ್ಠ ನಾಲ್ಕಾರು ನಿಮಿಷವೂ ವ್ಯವಧಾನದಿಂದ ಆಲೋಚಿಸಲು ಅಸಮರ್ಥರಾಗಿರುವ ನಾವು, ಅವರೇ ಚಿಂತನೆಯ ಮೂಸೆಯಲ್ಲಿ ಅರಳಿದ ಮೀಸಲಾತಿಯ ಅಡಿಯಲ್ಲಿ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದೇವೆ ಎಂದು ವಿಷಾದಿಸಿದರು.

ದಲಿತ ಮುಖಂಡ ಕಣವಿಹಳ್ಳಿ ಮಂಜುನಾಥ ಮಾತನಾಡಿ, ಶೋಷಿತ ಸಮುದಾಯಗಳಿಗೆ ಆತ್ಮಸ್ಥೈರ್ಯ ಹಾಗೂ ಚೈತನ್ಯದ ಶಕ್ತಿ ತುಂಬುವ ಜತೆಗೆ, ತಳಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಕೊಂಡೊಯ್ಯಲು ಅಗತ್ಯ ಕಾನೂನು ರಚಿಸಿ, ಸಾಮಾಜಿಕನ್ಯಾಯಕ್ಕೆ ನೆಲೆಗಟ್ಟು ಕಟ್ಟಿಕೊಟ್ಟ ಮಹಾಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಸ್ಮರಿಸಿದರು.

ದಲಿತ ಸಂಘಟನೆಗಳ ಮುಖಂಡರಾದ ಕೊಂಗನಹೊಸೂರು ಶಿವಣ್ಣ, ಉಚ್ಚಂಗೆಪ್ಪ, ಮಹಾಂತೇಶ್, ಚಂದ್ರಪ್ಪ, ಗೋಣೆಪ್ಪ, ಮಾರುತಿ, ಮಂಜುನಾಥ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT