ದಾವಣಗೆರೆ: ‘ಸಾಹಿತ್ಯ ರಚನೆ ಸರಳವಾದ ಕ್ರಿಯೆ ಅಲ್ಲ. ಅದೊಂದು ಕಲೆ’ ಎಂದು ದಾವಣಗೆರೆ ವಿವಿಯ ಕುಲಪತಿ ಡಾ.ಎಸ್. ಇಂದುಮತಿ ಅಭಿಪ್ರಾಯಪಟ್ಟರು. ನಗರದಲ್ಲಿ ಬುಧವಾರ ಶಿವಮೊಗ್ಗದ ಅಭಿರುಚಿ ಪ್ರಕಾಶನ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಸಿ.ಎಸ್. ನಂಜುಂಡಯ್ಯ ಹಾಗೂ ಡಾ.ಜಿ.ಇ. ವಿಜಯಕುಮಾರ್ ಸಂಪಾದಿಸಿದ ‘ಆ್ಯನಿಮಲ್ ಫಾರ್ಮ್’ ಹಾಗೂ ‘ಗ್ರೇಟ್ ಎಕ್ಸ್‌ಪೆಕ್ಟೇಷನ್’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೆಲವರು ಗಂಭೀರವಾಗಿ ಬರೆಯುತ್ತಾರೆ. ಮತ್ತೆ ಕೆಲವರ ಶೈಲಿ ಸರಳವಾಗಿ ಇರುತ್ತದೆ. ಹೀಗಾಗಿ, ಗಂಭೀರ ಬರಹಗಳ ಬಗ್ಗೆ ಅರ್ಥವಾಗುವುದಿಲ್ಲ, ಅವುಗಳ ಪ್ರಯೋಜನವೇನು ಎಂಬ ಆರೋಪಗಳು ಕೇಳಿ ಬರುತ್ತಿವೆ. ಬರವಣಿಗೆ ಸ್ಪಷ್ಟವಾಗಿ ಹಾಗೂ ಅರ್ಥವಾಗುವಂತೆ ಇರಬೇಕು. ನಮ್ಮ ಬರವಣಿಗೆ ಉದ್ದೇಶ ಮತ್ತೊಬ್ಬರಿಗೆ ಅರ್ಥವಾಗುವಂತೆ ಇರಬೇಕು ಎಂದು ಹೇಳಿದರು.
ಇತ್ತೀಚೆಗೆ ಸಂಶೋಧನೆ ಮಾಡುವುದನ್ನು ಕೆಲವರು ‘ಕಟ್ ಅಂಡ್ ಪೇಸ್ಟ್’ ಎಂದು ಹಳಿಯುತ್ತಾರೆ. ಆ ಕೆಲಸ ಮಾಡುವುದೂ ಸರಳವಲ್ಲ. ಒಂದು ಕೃತಿ ಬರೆಯಬಹುದು. ಆದರೆ, ಸಂಶೋಧನೆ ಮಾಡುವುದು ಈಗ ಕಷ್ಟದ ಕೆಲಸ. ಸಂಶೋಧನೆ ಮಾಡುವುದರಿಂದ ಸುಮ್ಮನೆ ಕಾಲ ಕಳೆಯುವ ಸ್ವಭಾವ ದೂರವಾಗಿ, ಪುಸ್ತಕ ಬರೆಯುವ ಹಾಗೂ ವಿವಿಧ ಸಂಶೋಧನೆಯಲ್ಲಿ ತೊಡಗುವ ಗೀಳು ಬೆಳೆಯುತ್ತದೆ ಎಂದು ತಿಳಿಸಿದರು.
ಪುಸ್ತಕ ಸಂಪಾದನೆ ಮಾಡುವುದು ಸುಲಭದ ಕೆಲಸವಲ್ಲ. ಕ್ರಿಯಾತ್ಮಕ ಬರವಣಿಗೆ ಮುಖ್ಯ. ನಿರಂತರ ಓದಿನಿಂದ ಜ್ಞಾನ ವೃದ್ಧಿಯಾಗುತ್ತದೆ. ಕಾಲೇಜಿನಲ್ಲಿ ವಿದ್ಯಾರ್ಥಿ- ಉಪನ್ಯಾಸಕರ ನಡುವೆ ಹೊಂದಾಣಿಕೆ ಇರಬೇಕು. ಬುದ್ಧಿವಂತರಾಗಿದ್ದರೆ ಸಾಲದು, ಕಠಿಣ ಅಭ್ಯಾಸ ಅಗತ್ಯ ಎಂದು ಸಲಹೆ ನೀಡಿದರು.
ದಾವಣಗೆರೆ ವಿವಿಯ ಮೂಲಸೌಕರ್ಯ ಅಭಿವೃದ್ಧಿಗೆ ಯುಜಿಸಿಯಿಂದ ` 6 ಕೋಟಿ ಅನುದಾನ ಬಂದಿದ್ದು, ಅದನ್ನು ವಿವಿಧ ಶೈಕ್ಷಣಿಕ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಕಾಲೇಜಿನ ಸ್ಥಳಾವಕಾಶ ಗಮನದಲ್ಲಿ ಇಟ್ಟುಕೊಂಡು ಮತ್ತಷ್ಟು ಹೊಸ ಕೋರ್ಸ್‌ಗಳು ಪ್ರಾರಂಭಿಸಲಾಗುವುದು. ವಿವಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಿದ ಸಾಲಿನಲ್ಲಿ ನಿಲ್ಲಲಿದೆ ಎಂದು ಹೇಳಿದರು.
ಡಿಆರ್‌ಎಂ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎಸ್. ಈಶ್ವರಪ್ಪ ಮಾತನಾಡಿದರು. ಪ್ರೊ.ಡಿ. ಬಸವರಾಜ, ಪ್ರೊ.ಕೆ.ಟಿ. ಸ್ವಾಮಿ, ಡಾ.ಸಿ.ಎಸ್. ನಂಜುಂಡಯ್ಯ, ಡಾ.ಜಿ.ಇ. ವಿಜಯಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.