ADVERTISEMENT

ಸಿಇಟಿ ಎಂಜಿನಿಯರಿಂಗ್‌ನಲ್ಲಿ ಸರ್‌ಎಂವಿಗೆ 101 ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 5:18 IST
Last Updated 2 ಜೂನ್ 2018, 5:18 IST

ದಾವಣಗೆರೆ: ಸಿಇಟಿಯ ಎಂಜಿನಿಯರಿಂಗ್ ವಿಭಾಗದಲ್ಲಿ ನಗರದ ಸರ್ ಎಂ.ವಿ. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಚಿಕೇತ್ ಜಿ. ಕಲ್ಲಾಪುರ್ ರಾಜ್ಯಕ್ಕೆ 101ನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ (ಪ್ರಾಥಮಿಕ ಮಾಹಿತಿಯಂತೆ) ಗಳಿಸಿದ್ದಾನೆ.

ಇದೇ ಕಾಲೇಜಿನ ಹೃತಿಕ್ ಪಾಟೀಲ್ ಪಶು ವೈದ್ಯಕೀಯ ವಿಭಾಗದಲ್ಲಿ 32ನೇ ರ‍್ಯಾಂಕ್, ಬಿಎಸ್‌ಸಿ (ಅಗ್ರಿ) ವಿಭಾಗದಲ್ಲಿ 56ನೇ ರ‍್ಯಾಂಕ್, ಡಿ. ಫಾರಂನಲ್ಲಿ 88ನೇ ರ‍್ಯಾಂಕ್ ಪಡೆದಿರುತ್ತಾನೆ.

ಕಾಲೇಜಿಗೆ 100ರ ಒಳಗೆ 15 ರ‍್ಯಾಂಕ್, 500ರೊಳಗೆ 75 ರ‍್ಯಾಂಕ್‌, 1 ಸಾವಿರದೊಳಗೆ 160 ರ‍್ಯಾಂಕ್‌ಗಳು, 2 ಸಾವಿರದೊಳಗೆ 327 ರ‍್ಯಾಂಕ್‌ ಮತ್ತು 5 ಸಾವಿರದೊಳಗೆ 760 ರ‍್ಯಾಂಕ್‌ಗಳು ಬಂದಿವೆ.

ADVERTISEMENT

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಕಾಲೇಜಿನ ಪ್ರಾಚಾರ್ಯ ಡಾ.ವಿ. ರಾಜೇಂದ್ರ ನಾಯ್ಡು ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ನಿಖಿಲ್‌ಗೆ 927 ರ‍್ಯಾಂಕ್

ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ನಗರದ ಸಿದ್ದೇಶ್ವರ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಖಿಲ್‌ಗೆ ಸಿಇಟಿಯ ಎಂಜಿನಿಯರಿಂಗ್‌ನಲ್ಲಿ 927 ರ‍್ಯಾಂಕ್ ಬಂದಿದೆ. ಪಶು ವೈದ್ಯಕೀಯದಲ್ಲಿ 217 ಹಾಗೂ ಬಿಎಸ್ಸಿ (ಅಗ್ರಿ)ಯಲ್ಲಿ 270 ರ‍್ಯಾಂಕ್ ಬಂದಿದೆ.

‘ಸತತ ಅಧ್ಯಯನದ ಫಲ’

‘ಎರಡು ವರ್ಷ ಸತತ ಅಧ್ಯಯನ ನಡೆಸಿದ ಫಲ ಇದು. ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ಕಾಲೇಜಿನಲ್ಲಿ ಅತ್ಯುತ್ತಮ ಸಲಹೆ–ಮಾರ್ಗದರ್ಶನ ಸಿಕ್ಕಿತು’ ಎಂದು ಹರ್ಷ ವ್ಯಕ್ತಪಡಿಸಿದ್ದು, ಎಂಜಿನಿಯರಿಂಗ್‌ನಲ್ಲಿ 101 ರ‍್ಯಾಂಕ್‌ ಪಡೆದ ನಚಿಕೇತ್ ಜಿ. ಕಲ್ಲಾಪುರ್‌.

‘ಎರಡು ವರ್ಷ ಶ್ರಮಪಟ್ಟು ಓದಿದ. ಅದಕ್ಕೆ ನಾವೂ ಸಾಕಷ್ಟು ನೆರವು ನೀಡಿದೆವು. ಪಿಯುಸಿಯಲ್ಲಿ 580 ಅಂಕ ಬಂದಿತ್ತು. ಪಿಸಿಎಂನಲ್ಲಿ ಶೇ 99.3 ಅಂಕ ತೆಗೆದಿದ್ದ. ಐಐಟಿ ಪರೀಕ್ಷೆಯನ್ನೂ ಬರೆದಿದ್ದಾನೆ. ಫಲಿತಾಂಶಕ್ಕೆ ಎದುರುನೋಡುತ್ತಿದ್ದೇವೆ’ ಎಂದು ನಚಿಕೇತ ಅಮ್ಮ ಲಕ್ಷ್ಮೀ, ಅಪ್ಪ ಗಿರಿಧರ್‌ ಹೆಮ್ಮೆಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.