ADVERTISEMENT

ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ

ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಭೇಟಿ, ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:04 IST
Last Updated 4 ಸೆಪ್ಟೆಂಬರ್ 2013, 5:04 IST

ದಾವಣಗೆರೆ: ಮಾಂಸಪ್ರಿಯರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಈಗ ಸಮೀಪಿಸಿದೆ. ನಗರದ ಡಾಂಗೆ ಉದ್ಯಾನ ಬಳಿ ಆಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಮೀನು ಮಾರುಕಟ್ಟೆಯೊಂದು ನಿರ್ಮಾಣಗೊಳ್ಳುತ್ತಿದೆ. ಇಷ್ಟು ದಿವಸ ಗಬ್ಬುನಾರುವ ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡಬೇಕಿತ್ತು. ನೂತನ ಮಾರುಕಟ್ಟೆ ನಿರ್ಮಾಣಗೊಳ್ಳುತ್ತಿರುವುದು ಅವರಿಗೆ ಸಂತಸ ತಂದಿದೆ.

ಡಾಂಗೆ ಉದ್ಯಾನದ ಬಳಿ ನೂತನ ಮಾರುಕಟ್ಟೆ ನಿರ್ಮಿಸುವ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, `ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ'ಯ ನೆರವಿನೊಂದಿಗೆ ನೂತನ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ರೂ. 1.16 ಕೋಟಿ ವೆಚ್ಚದಲ್ಲಿ 50್ಡ80 ವಿಸ್ತೀರ್ಣದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ರೂ. 31.29 ಲಕ್ಷ ಅನುದಾನ ಬಿಡುಗಡೆಯಾಗಿದೆ. ನಿರ್ಮಿತಿ ಕೇಂದ್ರ ಮಾರುಕಟ್ಟೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

ಮಾರುಕಟ್ಟೆಗೆ ರಾಜ್ಯ ಸರ್ಕಾರದಿಂದ ರೂ.10 ಲಕ್ಷ ಅನುದಾನ ಬಿಡುಗಡೆ ಆಗಿದೆ. ಶೀಥಲೀಕರಣ ಘಟಕ ಸೇರಿದಂತೆ ಎಲ್ಲಾ ಸೌಲಭ್ಯವೂ ಮಾರುಕಟ್ಟೆಯಲ್ಲಿ ಇರಲಿದೆ. ಕಟ್ಟಡ ನಿರ್ಮಾಣವಾದ ನಂತರ ಮಹಾನಗರ ಪಾಲಿಕೆಗೆ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿರುವ ಮತ್ತೊಂದು ಮೀನು ಮಾರುಕಟ್ಟೆಯನ್ನೂ ಮೇಲ್ದರ್ಜೆಗೇರಿಸಲಾಗುವುದು. ಅದಕ್ಕಾಗಿ ರೂ. 1.31 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಕೂಡ ಮಂಜೂರಾತಿಯ ಹಂತದಲ್ಲಿದೆ. ಜತೆಗೆ, ಮಟನ್ ಮಾರಕಟ್ಟೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಾರುಕಟ್ಟೆಯಲ್ಲಿ ಶುಚಿತ್ವ ಕಾಪಾಡಬೇಕು. ನೊಣಗಳು ಬಾರದಂತೆ ವ್ಯಾಪಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮೀನು ಮಾರುಕಟ್ಟೆ ಉದ್ಯಾನದ ಜಾಗದಲ್ಲಿದೆ. ಇಲ್ಲಿ ಮಾರುಕಟ್ಟೆ ನಿರ್ಮಿಸುವುದು ಬೇಡ ಎಂದು ಕೆಲವರು ಮನವಿ ಮಾಡಿದರು.

ಮೀನುಗಾರಿಕೆ ಸಹಾಯಕ ನಿರ್ದೇಶಕ ಜಯಣ್ಣ, ಮಹಾನಗರ ಪಾಲಿಕೆ ಆಯುಕ್ತ ನಾರಾಯಣಪ್ಪ, ನಿರ್ಮಿತಿ ಕೇಂದ್ರದ ಅಧಿಕಾರಿ ರಾಜಪ್ಪ, ಪಾಲಿಕೆ ಸದಸ್ಯ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.