ADVERTISEMENT

ಸೂಳೆಕೆರೆಗೆ ಪ್ರವಾಸಿ ತಾಣದ ಭಾಗ್ಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 9:40 IST
Last Updated 19 ಜನವರಿ 2012, 9:40 IST

ದಾವಣಗೆರೆ: ಇತಿಹಾಸ ಪ್ರಸಿದ್ಧ  ಸೂಳೆಕೆರೆಗೆ ಕೊನೆಗೂ ಪ್ರವಾಸಿ ತಾಣದ ಭಾಗ್ಯ ದೊರೆತಿದ್ದು, ಕೆರೆಯ ತಟದಲ್ಲಿ ಬುಧವಾರ ಬೋಟಿಂಗ್ ಸೌಲಭ್ಯಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚಾಲನೆ ನೀಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆಯಾದ ಸೂಳೆಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಪರಿಸರ ಪ್ರಿಯರು ಹಾಗೂ ಸ್ಥಳೀಯರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಹಾಗಾಗಿ, ಸರ್ಕಾರದ ಮೇಲೆ ಒತ್ತಡ ತಂದು ರೂ. 5 ಕೋಟಿ ಮಂಜೂರು ಮಾಡಿಸಲಾಯಿತು. ರೂ. 1.15 ಕೋಟಿ ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಿಸಲಾಗಿದೆ.

ಬಸವರಾಜಪುರ ಸಮೀಪ 650 ಮೀಟರ್‌ನಲ್ಲಿ ಎರಡು ಹಂತದ ಪಾದಚಾರಿ ಮಾರ್ಗ, ಬೋಟಿಂಗ್ ತಾಣ, ಕೆರೆ ನೀರಿನ ಒತ್ತಡಕ್ಕೆ ತಡೆಗೋಡೆ, ವೀಕ್ಷಣಾ ಗೋಪುರ, ಫೆನ್ಸಿಂಗ್, ಆಧುನಿಕ ಶೌಚಾಲಯ, ಪಾರ್ಕಿಂಗ್ ಮತ್ತಿತರ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಸಿದ್ದೇಶ್ವರ ದೇವಾಲಯದಿಂದ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ, ಕಲ್ಯಾಣಮಂದಿರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ವಾಟರ್ ಗೇಮ್ಸ, ಸರ್ಫಿಂಗ್‌ಗೆ  ಅವಕಾಶ ಮಾಡಿಕೊಡಲಾಗುವುದು. ಪ್ರವಾಸೋದ್ಯಮ ಇಲಾಖೆ, ಲೇಕ್ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇನ್ನಷ್ಟು ಅಭಿವೃದ್ಧಿ ಕಲ್ಪಿಸಲಾಗುವುದು ಎಂದರು.

12ನೇ ಶತಮಾನದಲ್ಲಿ ನಿರ್ಮಾಣವಾದ ಸೂಳೆಕೆರೆ 3 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಮಣ್ಣಿನಿಂದ ನಿರ್ಮಿಸಿದ ಏರಿಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ. ಬಸವನನಾಲಾ, ಸಿದ್ದನನಾಲೆಗಳ ಮೂಲಕ 4,500 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು, ಚನ್ನಗಿರಿ ಸೇರಿದಂತೆ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ರೂಪಿಸಿದ ನಂತರ  ಭದ್ರಾನಾಲೆಯಿಂದ ಕೆರೆಗೆ ನೀರು ಹರಿಸಲಾಗುತ್ತಿದೆ ಎಂದು ವಿವರ ನೀಡಿದರು.

64 ಕಿ.ಮೀ. ಸುತ್ತಳತೆ ಹೊಂದಿರುವ ಸೂಳೆಕೆರೆ ಒತ್ತುವರಿ ಮಾಡಲಾಗಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಅರ್ಥ್‌ಗೂಗಲ್ ಅನ್ವಯ 24 ಅಡಿ ಇದ್ದ ಕೋಡಿಯನ್ನು 27 ಅಡಿಗೆ ಎತ್ತರಿಸಿರುವ ಕಾರಣ ರೈತರ ಜಮೀನು ಮುಳುಗಡೆ ಆಗಿವೆ. ಹಾಗಾಗಿ, ಜಮೀನು ಮುಳುಗಡೆಯಾದ ರೈತರಿಗೆ ಪರಿಹಾರ ದೊರಕಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.