ADVERTISEMENT

ಸ್ವಚ್ಛತೆ-ಕಣ್ಮುಚ್ಚಿ ಕುಳಿತಿರುವ ನಗರಸಭೆ: ದೂರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 9:53 IST
Last Updated 14 ಜೂನ್ 2013, 9:53 IST

ಹರಿಹರ: ಡೆಂಗೆ ಜ್ವರದ ಹಾವಳಿ ನಿಧಾನವಾಗಿ ತನ್ನ ಕರಾಳ ಹಸ್ತ ಚಾಚುತ್ತಿದೆ. ನಿಂತ ಮಲಿನ ನೀರಿನಲ್ಲಿ ಜನ್ಮತಳೆಯುವ ಸೊಳ್ಳೆಗಳು ಜನರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿವೆ. ಆದರೂ, ನಗರದ ನೈರ್ಮಲ್ಯ ಹಾಗೂ ಚರಂಡಿ ಸ್ವಚ್ಛತೆ ಬಗ್ಗೆ ನಗರಸಭೆ ಕಣ್ಮುಚ್ಚಿ ಕುಳಿತಿರುವುದು ಜಡ್ಡುಗಟ್ಟಿದ ಆಡಳಿ ಎಂಬ ಟೀಕೆ ವ್ಯಕ್ತವಾಗಿದೆ.

ನಗರದ ಹಳ್ಳದಕೇರಿಯ ಸುಣಗಾರ ಓಣಿಯಲ್ಲಿ ರಸ್ತೆ ಸ್ಚಚ್ಛತೆ ದೂರದ ಮಾತು. ಚರಂಡಿಗಳು ಕಳೆದ ಒಂದು ವಾರದಿಂದ ಕಸದಿಂದ ತುಂಬಿ ತುಳುಕುತ್ತಿವೆ. ಚರಂಡಿಯಲ್ಲಿ ನಿಂತ ಮಲಿನ ನೀರಿನಲ್ಲಿ ಸೊಳ್ಳೆಗಳ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾಗಿದೆ. ಇದರಿಂದ ಡೆಂಗೆಯಂಥ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ಕೊಟ್ಟಂತಾಗಿದೆ.

`ಈ ವಾರ್ಡಿನ ಜನಪ್ರತಿನಿಧಿಯಾಗಲಿ ಅಥವಾ ನಗರಸಭೆ ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸಿಲ್ಲ. ಚರಂಡಿಗಳು ಕಟ್ಟಿಕೊಂಡಿರುವುದರಿಂದ ಸೊಳ್ಳೆಗಳ ಕಾಟ ಮಾತ್ರವಲ್ಲದೇ ಕೊಳೆತ ದುರ್ವಾಸನೆ ಓಣಿಯಲ್ಲಿ ಹಬ್ಬಿಕೊಂಡಿದೆ. ಅಕ್ಕಪಕ್ಕದ ಮನೆಯವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.

ನಗರದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ` ಎನ್ನುವುದು ಸ್ಥಳೀಯ ನಿವಾಸಿಗಳಾದ ಕೇಶವಮೂರ್ತಿ, ಬಸವರಾಜ್, ಹನುಮಂತಪ್ಪ ಮೊದಲಾದವರ ಅಳಲಾಗಿದೆ.

ನಗರದಲ್ಲಿ ಈಗಾಗಲೇ ಕೆಲವು ಡೆಂಗೆ ಜ್ವರದ ಪ್ರಕರಣಗಳು ಕಾಣಿಸಿಕೊಂಡಿವೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ 8-10 ವಾಂತಿ ಭೇದಿ ಪ್ರಕರಣಗಳು ದಾಖಲಾಗಿ ಕೆಲವರು ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೂ ಇದೇ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳ ಸಾಲು ಆಸ್ಪತ್ರೆಯ ಹೊರಗಿನವರೆಗೆ ಹಬ್ಬಿರುತ್ತದೆ.

ಇಷ್ಟೆಲ್ಲಾ ಸಮಸ್ಯೆಗಳು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಗೊತ್ತಿಲ್ಲ ಎಂಬುದಿಲ್ಲ. ಅವರೂ ಸಹ ನಗರದ ಸ್ವಚ್ಛತೆ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳದೇ ಇರುವುದು ಶೋಚನೀಯ ಸಂಗತಿ.

ನಗರ ಸ್ಚಚ್ಛತೆ ಬಗ್ಗೆ ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಹಳ್ಳದಕೇರಿಯ ಅಂಬಿಗರ ಚೌಡಯ್ಯ ವೃತ್ತದ ನಿವಾಸಿಗಳ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT