ADVERTISEMENT

ಸ್ವಾಮೀಜಿಯಿಂದ ಆಮರಣಾಂತ ಉಪವಾಸ

ಹರಪನಹಳ್ಳಿ ತಾಲ್ಲೂಕನು್ನ ವಿಶೇಷ ಸ್ಥಾನಮಾನ ವ್ಯಾಪ್ತಿಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 8:37 IST
Last Updated 17 ಸೆಪ್ಟೆಂಬರ್ 2013, 8:37 IST

ದಾವಣಗೆರೆ: ಹರಪನಹಳ್ಳಿ ತಾಲ್ಲೂಕನ್ನು, ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸಾ್ಥನಮಾನ ನೀಡುವ ಸಂವಿಧಾನದ 371 ‘ಜೆ’ ಕಲಮಿನ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಮಠದ ಸ್ವಾಮೀಜಿ ನಗರದ ಜಿಲ್ಲಾಡಳಿತ ಭವನದ ಬಳಿ ಸೋಮವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಲವು ತಿಂಗಳಿಂದಲೂ ಹರಪನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಇದಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜತೆಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಅವರಿಗೆ, ಕಂಬತ್ತಹಳ್ಳಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹಾಗೂ ಅರಸೀಕೆರೆಯ ಕೋಲಶಾಂತೇಶ್ವರ ಮಠದ ಶಾಂತಲಿಂಗ ಸ್ವಾಮೀಜಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸಿದರು.

ಹರಪನಹಳ್ಳಿ ತಾಲ್ಲೂಕಿನ ಜನರ ಬೇಡಿಕೆ ನ್ಯಾಯಯುತವಾಗಿದೆ. ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲ್ಲೂಕನ್ನು ಜಿಲೆ್ಲಯ ಪುನರ್‌ವಿಂಗಡಣೆ ವೇಳೆ ದಾವಣಗೆರೆ ಜಿಲ್ಲೆಗೆ ಆಡಳಿತಾತ್ಮಕವಾಗಿ ಸೇರಿಸಲಾಗಿದೆಯೇ ಹೊರತು ತಾಂತ್ರಿಕವಾಗಿ ಇನ್ನೂ ಬಳ್ಳಾರಿ ಜಿಲ್ಲೆಯೊಂದಿಗೇ ಸಂಬಂಧ ಹೊಂದಿದೆ; ಬೆಸೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಿಗೆ ನೀಡುವಂತೆ ವಿಶೇಷ ಸ್ಥಾನಮಾನ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಹಲವು ಸುತ್ತಿನ ಹೋರಾಟ ನಡೆಸಿದರೂ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರಿಂದ ಉಪವಾಸ ಸತ್ಯಾಗ್ರಹದ ಹಾದಿ ಹಿಡಿಯಬೇಕಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಹರಪನಹಳ್ಳಿ ತಾಲ್ಲೂಕಿನ ಜನರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಸಂಘದ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್‌, ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್‌.ಕೆ.ರಾಮಚಂದ್ರಪ್ಪ, ಆವರಗೆರೆ ವಾಸು, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಟಿ.ದಾಸಕರಿಯಪ್ಪ, ಎ.ಜಿ.ವಿಶ್ವನಾಥ್‌, ಜೆಡಿಎಸ್‌ ಹರಪನಹಳ್ಳಿ ತಾಲ್ಲೂಕು ಘಟಕದ   ಅಧ್ಯಕ್ಷ ವಿ.ಮಲ್ಲಪ್ಪ ಮೊದಲಾದವರು ಭಾಗವಹಿಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ಹರಪನಹಳ್ಳಿ ತಾಲ್ಲೂಕನ್ನು 371 ‘ಜೆ’ ಕಲಂ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಹೋರಾಟ ಸಮಿತಿಯ ಸಂಚಾಲಕ ಇದ್ಲಿ ರಾಮಪ್ಪ, ಹೊಸಹಳ್ಳಿ ಮಲ್ಲೇಶ್‌, ಎ.ಎಂ.ವಿಶ್ವನಾಥ್‌, ದೊಡ್ಡಮನಿ, ಪ್ರಸಾದ್‌, ಕಬ್ಬಳ್ಳಿ ಬಸವರಾಜ್‌, ಹಾದಿಮನಿ ನಾಗರಾಜ್‌, ಗುಡಿಹಳ್ಳಿ ಹಾಲೇಶ್‌, ಕರಿಬಸಪ್ಪ ಸಿದ್ದವ್ವನಕೋಟೆ, ಕುಂಚೂರು ವಿಶ್ವನಾಥ್‌, ಗೋಪಿ ನಾಯ್ಕ್‌, ಭಾರತ್‌ ಬಣಜಾರ್‌ ಸೇವಾಲಾಲ್‌ ಸೇನೆಯ ಅಶೋಕ ನಾಯ್ಕ್‌ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.