ADVERTISEMENT

ಹಂತ, ಹಂತವಾಗಿ ಎಲ್ಲಾ ಕೆರೆಗಳಿಗೂ ನೀರು ಪೂರೈಕೆ

ರೈತರ ಸಭೆಯಲ್ಲಿ ಶಾಸಕ ಮಾಡಾಳ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 7:04 IST
Last Updated 16 ಜೂನ್ 2018, 7:04 IST

ಚನ್ನಗಿರಿ: ‘ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ತಾಲ್ಲೂಕಿನ 80 ಕೆರೆಗಳಿಗೂ ನೀರು ತುಂಬಿಸುವ ಜವಾಬ್ದಾರಿ ನನ್ನದು’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಗೊಪ್ಪೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಉಬ್ರಾಣಿ ಏತ ನೀರಾವರಿ ಯೋಜನೆಯ ರೈತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಬಾರಿ ಮಳೆ ಕೊರತೆ ಕಾರಣದಿಂದಾಗಿ ತಾಲ್ಲೂಕಿನ 80 ಕೆರೆಗಳಿಗೂ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ಅರ್ಧ ಭಾಗದಷ್ಟು ಕೆರೆಗಳಿಗೆ ಮಾತ್ರ ನೀರು ಹರಿದಿತ್ತು. ಈ ಬಾರಿ ಭದ್ರಾ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ಸಾಧ್ಯವಾಗಲಿದೆ ಎಂದರು.

ADVERTISEMENT

ಕಳೆದ ವರ್ಷ ರೈತರು ತಾಳ್ಮೆ ಕೆಡಿಸಿಕೊಂಡು ಪೈಪ್ ಹಾಗೂ ವಾಲ್ವ್‌ಗಳನ್ನು ಒಡೆದು ಹಾಕಿದರು. ಈ ರೀತಿ ಮಾಡಿದರೆ ಎಲ್ಲಾ ರೈತರಿಗೂ ತೊಂದರೆ ಆಗುತ್ತದೆ. ಒಂದು ಕೆರೆ ತುಂಬಿದ ಮೇಲೆ ಇನ್ನೊಂದು ಕೆರೆಗೆ ನೀರು ಹರಿದು ಬಂದು ಸಂಗ್ರವಾಗುತ್ತದೆ. ಮೊದಲು ರೈತರು ತಾಳ್ಮೆಯಿಂದ ಇರಬೇಕು. ರೈತರ ಸಹಕಾರ ಇದ್ದರೆ ಮಾತ್ರ ಕೆರೆಗಳನ್ನು ತುಂಬಿಸಲು ಸಾಧ್ಯ. ಅಧಿಕಾರಿಗಳ ಜತೆಗೆ ರೈತರು ತಾಳ್ಮೆಯಿಂದ ವರ್ತಿಸಿ, ಅವರ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಒಂದು ವಾರದಿಂದ ಭದ್ರಾ ನದಿಯ ನೀರನ್ನು ಪಂಪ್ ಮಾಡಿ ಕೆರೆಗಳಿಗೆ ಹರಿಸಲಾಗುತ್ತಿದೆ. 265 ದಿನಗಳ ಕಾಲ ನಿರಂತರವಾಗಿ ನೀರನ್ನು ಹರಿಸಲಾಗುವುದು. ಅಧಿಕಾರಿಗಳು ಯಾವುದೋ ಕಾರಣ ನೀಡಿ, ಮೋಟರ್‌ಗಳನ್ನು ಬಂದ್ ಮಾಡಬಾರದು. ಏನೇ ಸಮಸ್ಯೆ ಇದ್ದರೂ ಬಗೆಹರಿಸಲಾಗುವುದು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ರೈತರು ಬದುಕಿದರೆ ನಾವೆಲ್ಲಾ ಉತ್ತಮ ಜೀವನ ಸಾಗಿಸಲು ಸಾಧ್ಯ. ಹಂತ, ಹಂತವಾಗಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು. ಹಾಗೆಯೇ ಮುಂದಿನ ದಿನಗಳಲ್ಲಿ ಈ ಯೋಜನೆ ಅಡಿ ಬೆಂಕಿಕೆರೆ ಹಾಗೂ ಹೊದಿಗೆರೆ ಗ್ರಾಮದ ಕೆರೆಗಳನ್ನೂ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಿ. ರವಿ. ಉಬ್ರಾಣಿ ಏತ ನೀರಾವರಿ ಯೋಜನೆ ಎಇಇ ಶಶಿಕಾಂತ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವು ಪಾಟೀಲ್, ಶಂಕರಪ್ಪ, ಶಿವಲಿಂಗಪ್ಪ, ಸಿ.ಆರ್. ತಿಪ್ಪೇಶಪ್ಪ, ರಂಗಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.