ADVERTISEMENT

ಹರಿಹರ ತಾಲ್ಲೂಕಿನಲ್ಲಿ 467 ಅಪೌಷ್ಟಿಕ ಮಕ್ಕಳು

​ಪ್ರಜಾವಾಣಿ ವಾರ್ತೆ
Published 25 ಮೇ 2012, 6:00 IST
Last Updated 25 ಮೇ 2012, 6:00 IST

ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಅಪೌಷ್ಟಿಕ ಮಕ್ಕಳ ಉಚಿತ ತಪಾಸಣಾ ಶಿಬಿರ ನಡೆಯಿತು.

ತಾಲ್ಲೂಕಿನಲ್ಲಿ ಸುಮಾರು 467ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಗತ್ಯವಿರುವ ಮಕ್ಕಳಿಗೆ ರಕ್ತ, ಮೂತ್ರ  ಕಫ ಪರೀಕ್ಷೆ (ಕ್ಷ-ಕಿರಣದ ಮೂಲಕ) ಉಚಿತವಾಗಿ ನಡೆಸಲಾಗುತ್ತದೆ. ಅವಶ್ಯಕತೆಗೆ ಅನುಗುಣವಾಗಿ ಪ್ರೋಟೀನ್ ಹಾಗೂ ವಿಟಮಿನ್ ಸಿರಪ್‌ಗಳನ್ನು ನೀಡಲಾಗುತ್ತಿದೆ. ಹೆಚ್ಚು ಆರೋಗ್ಯ ಸಮಸ್ಯೆ ಅಥವಾ  ಅಪೌಷ್ಟಿ ಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಪಡೆಯಲು `ಬಾಲ ಸಂಜೀವಿನಿ~ ಕಾರ್ಯಕ್ರಮ ಉಚಿತ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಗುತ್ತದೆ ಎಂದು ಸಿಡಿಪಿಒ ಚಂದ್ರಪ್ಪ ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ  ಡಾ.ಎಲ್. ಹನುಮಾನಾಯ್ಕ ಮಾತನಾಡಿ, ಶಿಬಿರದಲ್ಲಿ ಮಕ್ಕಳ ತಜ್ಞರಾದ ಡಾ.ಬಂಡಿ ರಮ್ಯಾ, ಡಾ.ಮನೋಹರ ಶೆಟ್ಟಿ ಹಾಗೂ ಡಾ.ಅಜೀಜ್, ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ್, ಡಾ.ಕಾಂತೇಶ್ ಮಕ್ಕಳ ತಪಾಸಣೆ ನಡೆಸುತ್ತಿದ್ದಾರೆ. ಅಪೌಷ್ಟಿಕ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೇ ಉತ್ತಮ ಚಿಕಿತ್ಸೆ ಸಿಕ್ಕರೆ ಅವರ ಭವಿಷ್ಯದಲ್ಲಿ ಆರೋಗ್ಯವಂತರಾಗಿರುತ್ತಾರೆ.

ADVERTISEMENT

ಶಿಬಿರದ ಪ್ರಥಮ ದಿನ 92 ಮಕ್ಕಳು ಚಿಕಿತ್ಸೆ ನೀಡಲಾಗಿದ್ದು. ತಾಲ್ಲೂಕಿನಲ್ಲಿರುವ ಎಲ್ಲಾ ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡುವ ಉದ್ದೇಶ ಶಿಬಿರದ್ದು. ಈ ಶಿಬಿರವು ಮೇ. 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ಪಡೆಯಲು ಪಾಲಕರು ಚಿಕ್ಕ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.