ADVERTISEMENT

ಹರಿಹರ: ಪ್ರಶ್ನೆಪತ್ರಿಕೆಗಾಗಿ ಪರದಾಡಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 8:10 IST
Last Updated 24 ಸೆಪ್ಟೆಂಬರ್ 2011, 8:10 IST

ಹರಿಹರ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪೂರ್ವ ನಿಗದಿಯಂತೆ ಜ್ಲ್ಲಿಲೆಯಾದ್ಯಂತ ನಡೆಯಬೇಕಿದ್ದ 8 ಮತ್ತು 9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಯ ಆವರಣದಲ್ಲಿ ಶಿಕ್ಷಕರು ಕಾದುಕಾದು ಹೈರಾಣಾದ ಘಟನೆ ಶುಕ್ರವಾರ ನಡೆಯಿತು.

ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ 2011-12ನೇ ಸಾಲಿನ ಅರ್ಧವಾರ್ಷಿಕ ಪರೀಕ್ಷೆಗಳನ್ನು ಏಕರೂಪದಲ್ಲಿ ನಡೆಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ)   ಅವರು ಜ್ಞಾಪನ ಕರಪತ್ರದ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಸೆ. 23ರಿಂದ ಅ.3 ರವರೆಗೆ ಪ್ರೌಢಶಾಲೆಯ ಅರ್ಧವಾರ್ಷಿಕ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಯನ್ನೂ ನಿಗದಿಪಡಿಸಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 1.30ಕ್ಕೆ 50ಕ್ಕೂ ಹೆಚ್ಚು ಶಿಕ್ಷಕರ ಸಮೂಹ ಸೇರಿತ್ತು. ಅವರೊಂದಿಗೆ ಈ ಕುರಿತು ವಿಚಾರಿಸಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಗುರುವಾರ 10ನೇ ತರಗತಿಯ ಪ್ರಶ್ನೆಪತ್ರಿಕೆಗಳನ್ನು ವಿತರಣೆ ಮಾಡಲಾಗಿತ್ತು. 8 ಮತ್ತು 9ನೇ ತರಗತಿ ಪ್ರಶ್ನೆಪತ್ರಿಕೆಗಳನ್ನು ಶುಕ್ರವಾರ ಬೆಳಿಗ್ಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದರು. ಪರೀಕ್ಷೆಗಳು 2 ಗಂಟೆಯಿಂದ ಪ್ರಾರಂಭವಾಗಬೇಕು. ಆದರೆ, ಸಮಯ 1.30 ಆದರೂ ಪ್ರಶ್ನೆ ಪತ್ರಿಕೆಗಳನ್ನು ವಿತರಣೆ ಮಾಡಿಲ್ಲ. 2ಕ್ಕೆ ಪ್ರಶ್ನೆಪತ್ರಿಕೆ ವಿತರಣೆ ಮಾಡಿದರೆ, ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಸುಮಾರು 25-30 ಕಿ.ಮೀ. ದೂರವಿರುವ ಉಕ್ಕಡಗಾತ್ರಿ, ಕೊಕ್ಕನೂರು, ಹಾಲಿವಾಣ, ಗ್ರಾಮಗಳಿಗೆ ಬಸ್ ಮೂಲಕ ನಾವು ತಲುಪುವುದು ಯಾವಾಗ, ಪ್ರಶ್ನೆಪತ್ರಿಕೆ ವಿತರಣೆ ಮಾಡುವುದು ಯಾವಾಗ ಎಂಬುದೇ ಬಗೆ ಹರಿಯದ ಸಮಸ್ಯೆಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಮೊದಲು ಅರ್ಧವಾರ್ಷಿಕ ಪರೀಕ್ಷೆಗೆ ಶಾಲಾ ಮಟ್ಟದಲ್ಲಿ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿಕೊಂಡು ಪರೀಕ್ಷೆಗಳನ್ನು ನಡೆಸುತ್ತಿದ್ದೆವು. ಈ ಬಾರಿ ಏಕರೂಪದ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿಕೊಡುವ ಜವಾಬ್ದಾರಿಯನ್ನು ಜಿಲ್ಲಾ ಮುಖ್ಯಶಿಕ್ಷಕರ ಹಾಗೂ ಪ್ರಾಂಶುಪಾಲರ ಸಂಘ ವಹಿಸಿಕೊಂಡಿದೆ. ವಿದ್ಯಾರ್ಥಿಗಳ ಒತ್ತಡ, ಶಿಕ್ಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಕನಿಷ್ಠ ಸೌಜನ್ಯವಿಲ್ಲದ ಸಂಘದ ಪದಾಧಿಕಾರಿಗಳು ಪರೀಕ್ಷೆಗಳ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಈ ವಿಷಯ ಕುರಿತು ಕ್ಷೇತ್ರಶಿಕ್ಷಣಾಧಿಕಾರಿ ಬಿ.ಆರ್. ಬಸವರಾಜಪ್ಪ ಅವರಿಗೆ ಕರೆ ಮಾಡಿದಾಗ, ಅವರು ಹೊನ್ನಾಳಿಯಲ್ಲಿ ಇದ್ದು ಈ ಬಗ್ಗೆ ಮಾಹಿತಿ ತಿಳಿದುಕೊಂಡು ಸಂಪರ್ಕಿಸುವುದಾಗಿ ತಿಳಿಸಿದರು.
ಉಪ ನಿರ್ದೇಶಕ ಬಿ.ಎ. ರಾಜಶೇಖರ್ ಅವರನ್ನು ಸಂಪರ್ಕಿಸಿದಾಗ, ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲೂ ನಡೆಯುತ್ತಿವೆ. ಅವರವರ ಶಾಲಾ ವ್ಯಾಪ್ತಿಯಲ್ಲಿ ಅವರೇ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಅರ್ಧವಾರ್ಷಿಕ ಪರೀಕ್ಷೆಗಳನ್ನು ನಡೆಸಬಹುದು. ಪ್ರಶ್ನೆಪತ್ರಿಕೆಗಾಗಿ ಕಾಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆಗಳು 2.30ಕ್ಕೆ ಬಂದಿವೆ. ಅವುಗಳನ್ನು ಶಿಕ್ಷಕರಿಗೆ ವಿತರಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ ಪ್ರಶ್ನೆಪತ್ರಿಕೆಗಳು ತಲುಪುವುದು ತಡವಾಗುತ್ತದೆ ಎಂಬ ಕಾರಣಕ್ಕಾಗಿ ಶುಕ್ರವಾರ ನಡೆಯಬೇಕಾಗಿದ್ದ ಪ್ರಥಮಭಾಷಾ ಪರೀಕ್ಷೆಯನ್ನು ಅ.4ಕ್ಕೆ ಮುಂದೂಡಲಾಗಿದೆ. ಇತರೆ ವಿಷಯಗಳು ವೇಳಾಪಟ್ಟಿಯಂತೆ ನಡೆಯುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಮೊಬೈಲ್ ಮೂಲಕ ತಿಳಿಸಿದ್ದಾರೆ.

ತಾಲ್ಲೂಕು ಶಿಕ್ಷಣ ಸಂಯೋಕರು ನೀಡಿದ ಹೇಳಿಕೆ ಹಾಗೂ ಉಪ ನಿರ್ದೇಶಕರು ನೀಡಿದ ಹೇಳಿಕೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಏಕರೂಪ ಪರೀಕ್ಷೆಗಳೆಂದರೆ ಕೇವಲ ವೇಳಪಟ್ಟಿ ಏಕರೂಪವಾಗಿರುವುದು ಮಾತ್ರವಲ್ಲದೇ ಪ್ರಶ್ನೆಪತ್ರಿಕೆಗಳು ಏಕರೂಪವಾಗಿರಬೇಕು? ಏಕರೂಪದ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳು ಕಡ್ಡಾಯವಲ್ಲ ಎನ್ನುವುದಾರೆ ಜ್ಞಾಪನಾ ಕರಪತ್ರದಲ್ಲಿ ಉಪ ನಿರ್ದೇಕರು ಸಹಿ ಮಾಡಿರುವುದರ ಅರ್ಥವೇನು ಎಂಬುದು ಶಿಕ್ಷಕರಲ್ಲಿ ಮೂಡಿರುವ ಪ್ರಶ್ನೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) ಅವರ ಜ್ಞಾಪನಾ ಪತ್ರದ ಮೇರೆಗೆ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ 2011-12 ನೇ ಸಾಲಿನ ಅರ್ಧವಾರ್ಷಿಕ ಪರೀಕ್ಷೆಗಳನ್ನು ಏಕರೂಪದಲ್ಲಿ ನಡೆಸುವ ಯೋಜನೆ ಆರಂಭಿಕ ಹಂತದಲ್ಲೇ ಎಡವಿ ಮುಗ್ಗರಿಸಿದೆ. ಭವಿಷ್ಯದಲ್ಲಿ ಪೂರ್ವ ಸಿದ್ಧತೆಗಳೊಂದಿಗೆ ಇಂಥ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.