ADVERTISEMENT

ಹಳೆ ಆರ್‌ಯುಬಿ ಮೇಲ್ದರ್ಜೆಗೇರಿಸಿ

60 ಮೀಟರ್‌ ಉದ್ದದ ಕೆಳ ಸೇತುವೆ ನಿರ್ಮಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 6:25 IST
Last Updated 6 ಜೂನ್ 2018, 6:25 IST

ದಾವಣಗೆರೆ: ನಗರದ ಡಿಸಿಎಂ ಟೌನ್‌ಷಿಪ್‌ ಬಳಿ ಜೋಡಿ ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಹೊಸ ರೈಲ್ವೆ ಕೆಳ ಸೇತುವೆ (ಆರ್‌.ಯು.ಬಿ) ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಸಂಸದ ಜಿ.ಎಂ. ಸಿದ್ದೇಶ್ವರ, ಹಳೆ ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಬಗ್ಗೆ ರೈಲ್ವೆ ಅಧಿಕಾರಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಳೆ ಕೆಳ ಸೇತುವೆಯನ್ನೂ ಹೊಸ ಸೇತುವೆಯಂತೆ 60 ಮೀಟರ್‌ ಉದ್ದ ನಿರ್ಮಿಸಿ ಮೇಲ್ದರ್ಜೆಗೆ ಏರಿಸಲು ಮಂಜೂರಾತಿ ನೀಡದಿದ್ದರೆ ಜೋಡಿ ಮಾರ್ಗ ನಿರ್ಮಾಣ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ ಎಂದೂ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಇಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಕೇವಲ 25 ಅಡಿ ಉದ್ದ ಇರುವುದರಿಂದ ರಸ್ತೆ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಸೇತುವೆಯನ್ನು ಅಗಲಗೊಳಿಸುವಂತೆ 2016ರಿಂದ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಈಗ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದರೂ ಕೆಲಸ ಆಗಿಲ್ಲ ಎಂಬ ಬಗ್ಗೆ ನನಗೆ ಬೇಸರವಿದೆ. ಈ ಕೆಳ ಸೇತುವೆಯನ್ನು ಸರಿಪಡಿಸದೇ ಇದ್ದರೆ ಜನ ನನಗೆ ಹೊಡೆಯುತ್ತಾರೆ’ ಎಂದೂ ಅವರು ಅಸಮಾಧಾನ ಹೊರ ಹಾಕಿದರು.

ADVERTISEMENT

‘ಜೋಡಿ ಮಾರ್ಗಕ್ಕೆ ಹೊಸ ಸೇತುವೆ ನಿರ್ಮಿಸಲು ಈಗಲೇ ಅವಕಾಶ ನೀಡಿದರೆ ಆ ಬಳಿಕ ಹಳೆ ಸೇತುವೆ ಕೆಲಸವನ್ನು ಮಾಡುವುದಿಲ್ಲ. ಹೀಗಾಗಿ ಮೊದಲು ಹಳೆ ಸೇತುವೆಯನ್ನೂ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಮಂಜೂರಾತಿ ನೀಡಬೇಕು. ಇಲ್ಲದಿದ್ದರೆ ನಾವು ಹಳಿ ಮೇಲೆ ಅಡ್ಡ ಮಲಗಿಕೊಂಡು ಕೆಲಸ ಮಾಡಲು ಬಿಡುವುದಿಲ್ಲ. ಇಲ್ಲಿಯೇ ಟೆಂಟ್‌ ಹಾಕಿಕೊಂಡು ಧರಣಿ ಕೂರುತ್ತೇವೆ. ಈ ಬಗ್ಗೆ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಕೂಡಲೇ ಪತ್ರ ಬರೆದು ಮಂಜೂರಾತಿ ಪಡೆದುಕೊಳ್ಳಿ’ ಎಂದು ಸಂಸದರು ತಾಕೀತು ಮಾಡಿದರು.

ಮಾಯಕೊಂಡದ ಜನರ ಮನವಿ ಸ್ವೀಕರಿಸಿದ ಸಂಸದರು, ‘ದೊಡ್ಡಮಾಗಡಿ ಬಳಿ ರೈಲ್ವೆ ಗೇಟ್‌ ಹಾಕಿ ರೈತರ ಟ್ರ್ಯಾಕ್ಟರ್‌ ಸಂಚರಿಸಲು ರಸ್ತೆಗೆ ಜಾಗ ಮಾಡಿಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಮುಖಂಡರಾದ ಅಣಬೇರು ಜೀವನಮೂರ್ತಿ ಅವರೂ ಹಾಜರಿದ್ದರು.

ನಾಳೆಯೇ ಆರ್‌.ಒ.ಬಿ ನಿರ್ಮಿಸಲು ಸಿದ್ಧ

ನಗರದ ಅಶೋಕ ರಸ್ತೆಯ ಬಳಿ ರೈಲ್ವೆ ಮೇಲ್ಸೇತುವೆ (ಆರ್‌.ಒ.ಬಿ) ನಿರ್ಮಿಸಲು ಕೇಂದ್ರ ಸರ್ಕಾರ ನಾಲ್ಕು ಬಾರಿ ಬಜೆಟ್‌ನಲ್ಲಿ ₹ 35 ಕೋಟಿ ಮೀಸಲಿಟ್ಟಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಜಾಗ ನೀಡದೇ ಇರುವುದರಿಂದ ಕಾಮಗಾರಿ ಆರಂಭಗೊಂಡಿಲ್ಲ ಎಂದು ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದರು.

‘ಆರ್‌.ಒ.ಬಿ ನಿರ್ಮಿಸಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಈ ಕಾಮಗಾರಿ ಮಂಜೂರಾದ ಬಳಿಕ ಮೂವರು ಜಿಲ್ಲಾಧಿಕಾರಿಗಳು ಬದಲಾಗಿದ್ದು, ಜಿಲ್ಲಾಡಳಿತ ಆಸಕ್ತಿ ತೋರಿಸುತ್ತಿಲ್ಲ. ರಾಜ್ಯ ಸರ್ಕಾರ ಅಥವಾ ಮಹಾನಗರ ಪಾಲಿಕೆ ಮೊದಲು ಜಾಗ ನೀಡಲಿ. ಪಾಲಿಕೆಯ ಸದಸ್ಯರಾಗಿರುವ ಶಿವನಳ್ಳಿ ರಮೇಶ್‌ ಅವರು ಜಾಗ ಕೊಡಿಸಲು ಮೊದಲು ಪ್ರಯತ್ನಿಸಲಿ’ ಎಂದ ಸಂಸದರು, ತಮ್ಮ ಮೇಲೆ ಶಿವನಹಳ್ಳಿ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ಕಳಪೆ ಕಾಮಗಾರಿಗೆ ಅಸಮಾಧಾನ

ರೈಲ್ವೆ ಕೆಳ ಸೇತುವೆಯ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿರುವುದು ಹಾಗೂ ಹಲವು ಕಡೆ ಕಾಂಕ್ರೀಟ್‌ ಕಿತ್ತು ಸರಳುಗಳು ರಸ್ತೆಯ ಮೇಲಕ್ಕೆ ಬಂದಿರುವುದನ್ನು ಕಂಡು ಸಂಸದ ಸಿದ್ದೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಇಲ್ಲಿ ಚರಂಡಿ ನೀರು ತುಂಬಿ ಮಳೆಗಾಲದಲ್ಲಿ ಸಂಚರಿಸಲು ಆಗುವುದಿಲ್ಲ ಎಂಬುದು ಎಸ್ಸೆಸ್ಸೆಲ್ಸಿ ಓದಿದವರಿಗೂ ಅರ್ಥವಾಗುತ್ತದೆ. ರಸ್ತೆಯ ಕಾಂಕ್ರೀಟ್‌ಗೆ ಸಿಮೆಂಟ್‌ ಹಾಕಿದ್ದಾರೋ ಅಥವಾ ಬೂದಿ ಹಾಕಿದ್ದಾರೋ? ಸರಳುಗಳು ಮೇಲಕ್ಕೆ ಬಂದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿದೆ. ಈ ಕೆಲಸ ನಡೆದಾಗ ಯಾವ ಎಂಜಿನಿಯರ್‌ ಇದ್ದನೋ, ಆತನನ್ನು ಮೊದಲು ಅಮಾನತುಗೊಳಿಸಬೇಕು’ ಎಂದು ಸಿದ್ದೇಶ್ವರ ಕಿಡಿಕಾರಿದರು.

‘ಇದು ಬಹಳ ಹಿಂದೆ ನಿರ್ಮಿಸಿದ ಸೇತುವೆ. ಈಗ ಲೋಕೋಪಯೋಗಿ ಇಲಾಖೆ ಈ ರಸ್ತೆಯ ನಿರ್ವಹಣೆ ಮಾಡುತ್ತಿದೆ’ ಎಂದು ಅಧಿಕಾರಿಗಳು ರಾಗ ಎಳೆದಾಗ ಸಿಟ್ಟಿಗೆದ್ದ ಸಂಸದರು, ‘ಆಗ ಕಳಪೆ ಕಾಮಗಾರಿ ಮಾಡಿದ್ದರಿಂದಲೇ ಈ ಸ್ಥಿತಿ ಬಂದಿದೆ. ಮಳೆಗಾಲದಲ್ಲಿ ಇಲ್ಲಿ ಸಂಚರಿಸಲು ಆಗುವುದಿಲ್ಲ. ಕೂಡಲೇ ಈ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಇದರ ನಿರ್ವಹಣೆ ಏಜೆನ್ಸಿ ಕರೆದು ಕೆಲಸ ಮಾಡಿಸಬೇಕಾಗಿದ್ದರಿಂದ ಸ್ವಲ್ಪ ಸಮಯ ತಗಲುತ್ತದೆ’ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ, ‘ತುರ್ತು ಕಾಮಗಾರಿಯಡಿ ನೀವೇ ಈ ಕೆಲಸವನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

ನೈರುತ್ಯ ರೈಲ್ವೆಯ ಉಪ ಮುಖ್ಯ ಎಂಜಿನಿಯರ್‌ ಹರಿಕುಮಾರ್‌ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ ಪದ್ಮನಾಭ, ‘ಎರಡು ತಿಂಗಳ ಒಳಗೆ ಚರಂಡಿ ಹಾಗೂ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ನೈರುತ್ಯ ರೈಲ್ವೆಯ ಸಹಾಯಕ ಎಂಜಿನಿಯರ್‌ ವಿಜಯಪ್ರಸಾದ್‌, ‘ಅಕ್ಕ–ಪಕ್ಕದ ಬಡಾವಣೆಯ ಕೊಳಚೆನೀರು ಇಲ್ಲಿಗೆ ಹರಿದು ಬರುತ್ತಿದೆ. ಯು.ಜಿ.ಡಿ ಸಂಪರ್ಕವನ್ನು ಬದಲಾಯಿಸದೇ ಇದ್ದರೆ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪಾಲಿಕೆಯ ಆಯುಕ್ತರೊಂದಿಗೆ ಶೀಘ್ರವೇ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು’ ಎಂದು ಸಂಸದರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.