ದಾವಣಗೆರೆ: ಜೀವನದ ಮಹದಾಸೆಯಾಗಿದ್ದ ಸಚಿವ ಸ್ಥಾನ ದೊರೆತ ನಂತರ ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸಿಕೊಂಡ ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಭಾನುವಾರ ಶುಭಹಾರೈಕೆ, ಅಭಿನಂದನೆಯ ಮಹಾಪೂರವೇ ಹರಿದುಬಂದಿತು.
ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಬಳಗದ ವತಿಯಿಂದ ನಗರದ ಮದಕರಿ ನಾಯಕ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಶಿವಶಂಕರಪ್ಪ ಅವರು ನೂರ್ಕಾಲ ಬಾಳಲಿ; ಆರೋಗ್ಯ, ಆಯುಷ್ಯ ದೊರೆಯಲಿ ಎಂದು ಹರಿಸಿದರು.
ಮುಖ್ಯಮಂತ್ರಿ ಬಣ್ಣನೆ: ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶಾಮನೂರು ಶಿವಶಂಕರಪ್ಪ ಬಡವರ ಬಗ್ಗೆ ಕಾಳಜಿ ಹೊಂದಿರುವ ಮುತ್ಸದ್ದಿ. ಅಸಮಾನತೆ ಹೋಗಲಾಡಿಸಲು ಶ್ರಮಿಸುತ್ತಿರುವ ಜನಪ್ರಿಯ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
83 ವರ್ಷ ತುಂಬಿದರೂ ಶಿವಶಂಕರಪ್ಪ ಮನಸ್ಸಿಗೆ ವಯಸ್ಸಾಗಿಲ್ಲ. ಇದನ್ನು ಅವರ ಕಾರ್ಯ ಚಟುವಟಿಕೆಯಿಂದ ತಿಳಿದುಕೊಳ್ಳ ಬಹುದು. ಮನುಷ್ಯನ ಹುಟ್ಟು ಆಕಸ್ಮಿಕ; ಸಾವು ನಿಶ್ಚಿತ. ಹುಟ್ಟು-ಸಾವಿನ ನಡುವೆ ಪ್ರತಿಯೊಬ್ಬರೂ ಜೀವನ ಸಾರ್ಥಕಪಡಿಸಿ ಕೊಳ್ಳಬೇಕು. ಎಸ್‌ಎಸ್, ಮಾಡಿದ ಕೆಲಸಗಳಿಂದ, ಸಾಧನೆಯಿಂದ ಜೀವನ ಸಾರ್ಥಕಪಡಿಸಿ ಕೊಂಡಿದ್ದಾರೆ ಎಂದರು.
ದಾವಣಗೆರೆ ವಿದ್ಯಾಕೇಂದ್ರವಾಗಿ ರೂಪಗೊಳ್ಳಲು ಶಿವಶಂಕರಪ್ಪ ಅವರ ಶ್ರಮ, ಕೊಡುಗೆ ಕಾರಣ. ದೂರದೃಷ್ಟಿಯ ನಾಯಕರಾಗಿರುವ ಅವರು, ಎಲ್ಲ ವರ್ಗ, ಜಾತಿಯವರಿಗೆ ಶಿಕ್ಷಣ ಒದಗಿಸುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತಿದ್ದಾರೆ. 19ರಿಂದ 20 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಹಾಗೂ 3,500 ಕುಟುಂಬಕ್ಕೆ ಉದ್ಯೋಗ ಕಲ್ಪಿಸುವುದು ಸಾಮಾನ್ಯ ಸಾಧನೆಯಲ್ಲ. ಜೀವಮಾನದಲ್ಲಿಯೇ ಅತಿದೊಡ್ಡ ಸಾಧನೆ ಇದು. ಬಸವ, ಬುದ್ಧ, ಅಂಬೇಡ್ಕರ್, ಕನಕ, ಗಾಂಧೀಜಿ ಮೊದಲಾದ ದಾರ್ಶನಿಕರು ಬಯಸಿದ್ದ ಸಮಾಜ ನಿರ್ಮಾಣಕ್ಕೆ ಇದೇ ತತ್ವ ಸಿದ್ಧಾಂತದ ನಂಬಿಕೆಯ ಮೇಲೆ ಶಾಮನೂರು ನಡೆಯುತ್ತಿದ್ದಾರೆ. ದಣಿವಿಲ್ಲದೇ ಸಮಾಜಕ್ಕೋಸ್ಕರ ದುಡಿಯುತ್ತಿದ್ದಾರೆ. ಅವರಿಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಹಾರೈಸಿದರು.
ಕಾಂಗ್ರೆಸ್‌ನಲ್ಲಿ ಅನೇಕ ಹುದ್ದೆ ನಿರ್ವಹಿಸಿರುವ ಅವರು ಪಕ್ಷಕ್ಕೆ ಶಕ್ತಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಮುಖಂಡ ವೀರಣ್ಣ ಅವರು ಸ್ವಂತ ಖರ್ಚಿನಲ್ಲಿ ನನ್ನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇದು ಅಭಿನಂದನಾರ್ಹ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ಮದುವೆ ಆಗುವುದರಿಂದ ಖರ್ಚು ಕಡಿಮೆಯಾಗುತ್ತದೆ. ಸುಖವಾಗಿ ಇರಬಹುದು. ಪತಿ-ಪತ್ನಿ ರಥದ ಚಕ್ರದಂತೆ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನ ತಂದುಕೊಟ್ಟಿದ್ದಕ್ಕೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗಳಿಸಲು ಸಹಕಾರಿಯಾಗಿದ್ದಕ್ಕೆ ಮತದಾರರಿಗೆ ಕೃತಜ್ಞನಾಗಿರುತ್ತೇನೆ ಎಂದರು.
ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭೋವಿ ಸಮಾಜದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಮಾಜ ಮುಖಂಡರು ಭಾನುವಾರ ಮನವಿ ಸಲ್ಲಿಸಿದರು.
ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆ, ಸಮಾಜ ಗುರುಪೀಠದ ಅಭಿವೃದ್ಧಿಗೆ ಅನುದಾನ, ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಸಮಾಜದ ಅಭ್ಯರ್ಥಿಗೆ ಟಿಕೆಟ್, ವಿಧಾನ ಪರಿಷತ್ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕದಲ್ಲಿ ಸಮಾಜದ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಸಿಎಂಗೆ ಕೆಪಿಸಿಸಿ ಸದಸ್ಯ ಡಿ.ಬಸವರಾಜ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಭೋವಿ ಸಮಾಜದವರು 50 ಲಕ್ಷದಷ್ಟು ಇದ್ದಾರೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಣ, ರಾಜಕೀಯ, ಸಾಮಾಜಿಕವಾಗಿ ಸಮಾಜ ಶೋಷಣೆಗೆ ಒಳಗಾಗುತ್ತಿದೆ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಸಮಾಜಕ್ಕೆ ಸರ್ಕಾರದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಜನಪ್ರಿಯತೆಗೆ ಸಾಕ್ಷಿ
`ಬೇರೆಯವರು ವಯಸ್ಸಾಗಿದೆ ನನ್ನಿಂದ ಆಗುವುದಿಲ್ಲ ಎನ್ನುತ್ತಾರೆ. ಆದರೆ, ಎಸ್‌ಎಸ್ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿಯೂ ಜಬಾಬ್ದಾರಿ ವಹಿಸಿ ಕೊಂಡಿದ್ದಾರೆ. ಅವಿರೋಧವಾಗಿ ಆಯ್ಕೆ ಯಾದದ್ದು ಅವರ ಜನಪ್ರಿಯತೆಗೆ ಸಾಕ್ಷಿ. ಶಿಕ್ಷಣ ಸಂಸ್ಥೆಗಳ ಸಾರಥ್ಯ ವಹಿಸಿದ್ದಾರೆ.
ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯ, ವಾಚ, ಮನಸಾ ಸಮಾಜಸೇವೆ ಮಾಡುವವರು; ಮಾಡುತ್ತಿರುವರು ಮಾತ್ರ ಜನಪ್ರಿಯ ವ್ಯಕ್ತಿಗಳಾಗಲು ಸಾಧ್ಯ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಎಸ್ ಅವರನ್ನು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.