ADVERTISEMENT

ಹುತಾತ್ಮ ಕುಟುಂಬಗಳಿಗೆ ಶೀಘ್ರ ಪರಿಹಾರ ಸರ್ಕಾರದ ಹೊಣೆ: ಎಚ್‍.ಡಿ.ಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 9:16 IST
Last Updated 2 ಏಪ್ರಿಲ್ 2018, 9:16 IST

ಹರಿಹರ: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡಲು ಅನಗತ್ಯವಾಗಿ ಸಮಯ ವ್ಯರ್ಥ್ಯಮಾಡಬಾರದು. ಪರಿಹಾರ ವಿತರಣಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸರಳಗೊಳಿಸಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‍.ಡಿ. ಕುಮಾರಸ್ವಾಮಿ ಆಗ್ರಹಿಸಿದರು. ಹುತಾತ್ಮ ಯೋಧ ಕೆ. ಜಾವೀದ್‍ ಅವರ ಹರಿಹರದ ಮನೆಗೆ ಭಾನುವಾರ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.ದೇಶಕ್ಕಾಗಿ ಮಕ್ಕಳನ್ನು ಸಮರ್ಪಿಸಿದ ಕುಟುಂಬಗಳಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ. ಪರಿಹಾರ ಪಡೆಯಲು ಅವರ ಕುಟುಂಬದ ಸದಸ್ಯರನ್ನು ಅಲೆದಾಡಿಸದೇ, ನೆರವಿನ ಶೀಘ್ರ ವಿಲೇವಾರಿಗೆ ಸೂಕ್ತ ಹಾಗೂ ಸರಳ ನಿಯಮಗಳನ್ನು ಜಾರಿಗೊಳಿಸಬೇಕು ಎಂದರು.

ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಜಾವೀದ್‍ ಕುಟುಂಬಕ್ಕೆ ನೆರವು ಘೋಷಣೆ ಮಾಡುತ್ತಿಲ್ಲ. ಆದರೆ, ಜೆಡಿಎಸ್‍ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿರುವ ಹುತಾತ್ಮ ಯೋಧರ ಕುಟುಂಬಗಳ ಸ್ವಾವಲಂಬಿ ಬದುಕಿಗೆ ಪೂರಕವಾದ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.ಕಾಂಗ್ರೆಸ್‍ ಹಾಗೂ ಬಿಜೆಪಿ ನಾಯಕರ ನಡವಳಿಕೆಗಳನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಾರ್ವಜನಿಕರ ಆಸ್ತಿಯನ್ನು ಲೂಟಿ ಮಾಡಿದ ಅಶೋಕ ಖೇಣಿ ಅವರನ್ನು ಹಣದ ಬಲಕ್ಕಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್‍ ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ತಿಳಿಸಿದರು.

ಶಾಸಕ ಎಚ್‍.ಎಸ್‍. ಶಿವಶಂಕರ್‍, ಜೆಡಿಎಸ್‍ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ನಗರಸಭೆ ಉಪಾಧ್ಯಕ್ಷೆ ಅಂಜಿನಮ್ಮ, ಸದಸ್ಯರಾದ ನಗೀನಾ ಸುಭಾನ್‍ ಸಾಬ್‍, ಅತಾವುಲ್ಲಾ, ಅಲ್ತಾಫ್‍, ಹಜರತ್‍ ಅಲಿ ಅವರೂ ಇದ್ದರು.

ADVERTISEMENT

**

ಸಿದ್ಧಗಂಗಾ ಸ್ವಾಮೀಜಿ 111ನೇ ವಸಂತ ಪೂರೈಸಿರುವ ಸುಸಂದರ್ಭದಲ್ಲಿ ಕೇಂದ್ರ ಸರ್ಕಾರ ಅವರಿಗೆ ‘ಭಾರತ ರತ್ನ’ ನೀಡಬೇಕು - ಎಚ್‍.ಡಿ. ಕುಮಾರಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ, ಜೆಡಿಎಸ್‌.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.